Site icon Vistara News

Crime News: ಸಾಲದಾತರ ಕಿರುಕುಳ ತಾಳದೆ ಮಹಿಳೆ ಆತ್ಮಹತ್ಯೆ; ಇಬ್ಬರು ಏಜೆಂಟರ ಬಂಧನ

arrest

arrest

ಮುಂಬೈ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಸಾಲದಾತರ (ಸಾಲಿಗ) ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಮಾದರಿಯ ಘಟನೆ ಥಾಣೆಯಲ್ಲಿ ನಡೆದಿದೆ. ಜುಲೈಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆಯ ಸರ್ಕಾರಿ ರೈಲ್ವೆ ಪೊಲೀಸರು (Government Railway Police) ಅಸ್ಸಾಂ ಮೂಲದ ಇಬ್ಬರು ಸಾಲ ವಸೂಲಾತಿ ಏಜೆಂಟರನ್ನು (Loan recovery agents) ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ (Crime News).

34 ವರ್ಷದ ಲಕ್ಷಣ ನರೇಂದ್ರ ಯಾದವ್‌ ಎನ್ನುವ ಮಹಿಳೆ ಜುಲೈ 6ರಂದು ಮಹಾರಾಷ್ಟ್ರದ ಥಾಣೆಯ ಜಿಲ್ಲೆಯ ದಿವಾ ಎಂಬಲ್ಲಿ ರೈಲಿನ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಇನ್ಸ್‌ಪೆಕ್ಟರ್‌ ಪಂಢರಿ ಕಾಂಡೆ ತಿಳಿಸಿದ್ದಾರೆ. ಬಂಧಿತರನ್ನು ಟೀ ಸ್ಟಾಲ್‌ ನಡೆಸುತ್ತಿದ್ದ ಶಂಕರ್‌ ನಾರಾಯಣ್‌ ಹಜೋಂಗ್‌ (29) ಮತ್ತು ಪ್ರಸಂಜಿತ್‌ ನಿರ್ಪೇನ್‌ ಹಜೋಂಗ್‌ (30) ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ?

ಲಕ್ಷಣ ನರೇಂದ್ರ ಯಾದವ್‌ ಆನ್‌ಲೈನ್‌ ಲೋನ್‌ ಆ್ಯಪ್‌ ಮೂಲಕ ಸುಮಾರು 19,000 ರೂ. ಸಾಲ ಪಡೆದುಕೊಂಡಿದ್ದರು. ಮರುಪಾವತಿಗಾಗಿ ಈ ಇಬ್ಬರು ಏಜೆಂಟರು ಕಿರುಕುಳ ನೀಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಮಹಿಳೆಯ ಮೇಲೆ ಒತ್ತಡ ಹೇರಲು ಅವರ ಫೋಟೊವನ್ನು ಎಡಿಟ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಜಿಆರ್‌ಪಿ ಪೊಲೀಸರು ಅಂತಿಮವಾಗಿ ಆರೋಪಿಗಳನ್ನು ಅಸ್ಸಾಂನ ಹಳ್ಳಿಯೊಂದರಲ್ಲಿ ಪತ್ತೆ ಹಚ್ಚಿ ನವೆಂಬರ್ 13ರಂದು ಅವರನ್ನು ಬಂಧಿಸಿದ್ದಾರೆ ಎಂದು ಕಾಂಡೆ ತಿಳಿಸಿದರು.

ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ

ಲಕ್ಷಣ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕಾರಣವನ್ನು ಬರೆದಿಟ್ಟಿದ್ದರು. ಸಾಲಗಾರರ ಕಿರುಕುಳದಿಂದಾಗಿ ಜೀವನ ಕೊನೆಗೊಳಿಸುವುದಾಗಿ ಡೆತ್‌ನೋಟ್‌ನಲ್ಲಿ ಬರೆಯಲಾಗಿತ್ತು. ಅಲ್ಲದೆ ಆರೋಪಿಗಳು ಕಳುಹಿಸಿದ ಮಾರ್ಫಿಂಗ್ ಮಾಡಿದ ಚಿತ್ರಗಳು ಆಕೆಯ ಆತ್ಮಹತ್ಯೆಯ ಉದ್ದೇಶವನ್ನು ಬಹಿರಂಗಪಡಿಸಿದ್ದವು. ಆಕೆಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಜುಲೈ 8, 2023ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನಿಂದ ಆರೋಪಿಗಳು ತಲೆಮರೆಸಿಕೊಂಡಿದ್ದರು. ತನಿಖಾ ತಂಡವು ಹಲವು ಯುಪಿಐ ಐಡಿಗಳನ್ನು ಪರಿಶೀಲಿಸಿದ ನಂತರ ಸಂತ್ರಸ್ತೆ ಹಣವನ್ನು ಕಳುಹಿಸಿದ ಅಸ್ಸಾಂನ ಬ್ಯಾಂಕ್ ಖಾತೆಯನ್ನು ಪತ್ತೆ ಹಚ್ಚಲಾಗಿತ್ತು. ಹೀಗಾಗಿ ಅಸ್ಸಾಂಗೆ ತೆರಳಿದ ಪೊಲೀಸರು ಅಲ್ಲಿಂದ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Cracker Danger : ಕುರ್ಚಿಯ ಕೆಳಗಿಟ್ಟಿದ್ದ ಆಟಂ ಬಾಂಬ್‌ ಸ್ಫೋಟ, ಯುವಕ ದಾರುಣ ಸಾವು

“ಲಾಕ್‌ಡೌನ್‌ ಆದ ಬಳಿಕ ನಿರುದ್ಯೋಗಿಗಳಾಗಿದ್ದ ಶಂಕರ್‌ ನಾರಾಯಣ್‌ ಹಜೋಂಗ್‌ ಮತ್ತು ಪ್ರಸಂಜಿತ್‌ ನಿರ್ಪೇನ್‌ ಹಜೋಂಗ್‌ ಪಾಂಡಿಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಶಂಕರ್ ಲೋನ್‌ ರಿಕವರಿ ತಂಡದ ಪರವಾಗಿ ಕೆಲ ಮಾಡತೊಡಗಿದ್ದರು. ಎರಡು ವರ್ಷಗಳಲ್ಲಿ ಸುಮಾರು 1.5 ಕೋಟಿ ರೂ.ಗಳನ್ನು ಶಂಕರ್ ಅವರ ಖಾತೆಗೆ ಜಮಾ ಮಾಡಲಾಗಿದ್ದು, 30ರಿಂದ 35 ಲಕ್ಷ ರೂ.ಗಳು ಪ್ರಸಂಜಿತ್‌ ಅವರ ಖಾತೆಗೆ ಹರಿದು ಬಂದಿರುವುದು ತನಿಖೆಯ ವೇಳೆ ಕಂಡು ಬಂದಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version