Site icon Vistara News

Crime News | ಅಕ್ರಮವಾಗಿ ಎಟಿಎಂ ಕಾರ್ಡ್‌ ಪಡೆದು, ಕಾವೇರಿ ಎಂಪೋರಿಯಮ್‌ ನಿವೃತ್ತ ಸಿಬ್ಬಂದಿಗೆ 6 ಲಕ್ಷ ರೂ. ವಂಚನೆ

ATM

ಬೆಂಗಳೂರು: ಕಾವೇರಿ ಎಂಪೋರಿಯಮ್‌ನ ನಿವೃತ್ತ ಗುಮಾಸ್ತರೊಬ್ಬರಿಗೆ (Crime News) ವಂಚಕರು 6 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ಕೃಷ್ಣಪ್ಪ ಎಂಬುವರು ವಂಚನೆಗೀಡಾಗಿದ್ದಾರೆ.

ನಕಲಿ ಸಹಿಹಾಕಿ ಎಟಿಎಂ ಕಾರ್ಡ್ ಪಡೆದು ವಂಚನೆ ನಡೆಸಲಾಗಿದೆ. ಈ ಬಗ್ಗೆ ಎಂಜಿ ರಸ್ತೆಯ ಕೆನರಾ ಬ್ಯಾಂಕ್ ಸಿಬ್ಬಂದಿಯ ವಿರುದ್ಧ ದೂರು ದಾಖಲಿಸಲಾಗಿದೆ.

ಕೃಷ್ಣಪ್ಪ ಅವರು 20 ವರ್ಷ ಗುಮಾಸ್ತನಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ನಿವೃತ್ತಿಯಿಂದ ಬಂದ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಉಳಿಸಿದ್ದರು.

ಕೃಷ್ಣಪ್ಪ ಅವರಿಗೆ 62 ವರ್ಷ ವಯಸ್ಸಾಗಿದ್ದು ಎಟಿಎಂ ಬಳಸಲು ಬರುತ್ತಿರಲಿಲ್ಲ. ಹೀಗಾಗಿ ಪಾಸ್ ಬುಕ್ ಮೂಲಕ ಆಗಾಗ ಹಣ ಡ್ರಾ ಮಾಡುತ್ತಿದ್ದರು. ಇದೀಗ ವಂಚಕರು ಕೃಷ್ಣಪ್ಪ ಅಕೌಂಟ್ ನಲ್ಲಿದ್ದ 6 ಲಕ್ಷ ಹಣ ಖಾಲಿ ಮಾಡಿದ್ದಾರೆ. ತನ್ನ ಜೀವನದ ದುಡಿಮೆಯ ಹಣ ಕಳೆದು ಕೊಂಡು ಮುಂದಿನ ಜೀವನದ ಬಗ್ಗೆ ಕೃಷ್ಣಪ್ಪ ಚಿಂತೆಯಲ್ಲಿದ್ದಾರೆ.

ನಕಲಿ ಸಹಿ ಮಾಡಿ ಎಟಿಎಂ ಪಡೆದು ಖಾತೆಯಲ್ಲಿದ್ದ 6 ಲಕ್ಷಕ್ಕೆ ಕನ್ನ ಹಾಕಲಾಗಿದೆ. ಹೀಗಾಗಿ ಖಾತೆದಾರರ ಹೆಸರಲ್ಲಿ ಬೇರೆಯವರಿಗೆ ಎಟಿಎಂ ಕಾರ್ಡ್ ನೀಡಿದ ಸಿಬ್ಬಂದಿ ವಿರುದ್ಧ ದೂರು ದಾಖಲಿಸಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version