ಯಾದಗಿರಿ/ಮಂಡ್ಯ: ಯಾದಗಿರಿ ಹಾಗೂ ಮಂಡ್ಯದಲ್ಲಿ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳು (Crime News ) ದಾಖಲಾಗಿವೆ. ಸಾಲಬಾಧೆ ತಾಳಲಾರದೆ ಯಾದಗಿರಿಯಲ್ಲಿ ಫೋಟೊಗ್ರಾಫರ್ (Photographer) ಒಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದರೆ, ಮಂಡ್ಯದ ಹೊರವಲಯದಲ್ಲಿ ಟಿಲ್ಲರ್‌ಗೆ ಕಾರು ಡಿಕ್ಕಿಯಾಗಿ (Road Accident) ಯುವಕನೊಬ್ಬ ಮೃತಪಟ್ಟಿದ್ದಾನೆ.
ಯಾದಗಿರಿ ನಗರದ ಹಳೆ ಬಸ್ ನಿಲ್ದಾಣ ಮುಂಭಾಗದ ಆಶ್ರಯ ಲಾಡ್ಜ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೋಟೊಗ್ರಾಫರ್ ರವೀಂದ್ರ (48) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಭಾನುವಾರ ರಾತ್ರಿ ಸಾವಿಗೆ ಶರಣಾಗಿರುವುದಾಗಿ ತಿಳಿದುಬಂದಿದೆ.
ರವೀಂದ್ರ ಚಕ್ರಕಟ್ಟಾ ನಿವಾಸಿಯಾಗಿದ್ದಾರೆ. ಇವರು ಫೋಟೊ ಸ್ಟುಡಿಯೋವನ್ನು (Photo Studio) ಹೊಂದಿದ್ದರು. ಆದರೆ, ಈ ನಡುವೆ ವ್ಯವಹಾರದಲ್ಲಿ ನಷ್ಟವಾಗಿದ್ದಲ್ಲದೆ, ಕೈತುಂಬಾ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲಗಾರರ ಕಾಟ ತಾಳಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಆರಂಭಿಸಿದ್ದಾರೆ.
ಟಿಲ್ಲರ್‌ಗೆ ಕಾರು ಡಿಕ್ಕಿ; ಯುವಕ ಸಾವು
ಮಂಡ್ಯ ನಗರದ ಹೊರ ವಲಯದ ಚಿಕ್ಕ ಮಂಡ್ಯ ಬಳಿಯ ಸರ್ವಿಸ್ ರಸ್ತೆಯಲ್ಲಿ ಟಿಲ್ಲರ್‌ಗೆ ಕಾರು ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಚಿಕ್ಕಮಂಡ್ಯದ ಸುದರ್ಶನ್ (19) ಮೃತ ಯುವಕ ಎಂದು ತಿಳಿದು ಬಂದಿದೆ. ಭತ್ತದ ನಾಟಿ ಮುಗಿಸಿ ವಾಪಸಾಗುವ ವೇಳೆ ಘಟನೆ ನಡೆದಿದೆ.
ಟಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದು ಯುವಕನ ಎದೆಗೆ ಹ್ಯಾಂಡಲ್ ಚುಚ್ಚಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಅಪಘಾತದ ಬಳಿಕ ಕಾರು ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ದೂರು ದಾಖಲು ಮಾಡಿಕೊಳ್ಳಲಾಗಿದೆ. ಸದ್ಯ ಡಿಕ್ಕಿ ಹೊಡೆದ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಇದನ್ನೂ ಓದಿ: Weather Report : ಬೆಂಗಳೂರಿನಲ್ಲಿಂದು ಭಾರಿ ಮಳೆ; ಕರಾವಳಿಯಲ್ಲೂ ಜೋರು
ಕುಣಿಗಲ್‌ನಲ್ಲಿ ವಿದ್ಯುತ್ ಪ್ರವಹಿಸಿ ಬಾಲಕ ಸಾವು
ತುಮಕೂರು: ತುಮಕೂರು ಜಿಲ್ಲೆ, ಕುಣಿಗಲ್ ಪಟ್ಟಣದಲ್ಲಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಮೆಟ್ಟಿ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಋತ್ವಿಕ್ ಎಂಬ ಹತ್ತು ವರ್ಷದ ಬಾಲಕನೇ ಮೃತಪಟ್ಟವನು. ಮನೆ ಸಮೀಪ ನಿವೇಶನ ಒಂದರಲ್ಲಿ ಆಟ ಆಡುತ್ತಿದ್ದ ಋತ್ವಿಕ್ ಈ ವೇಳೆ ಸಮೀಪದಲ್ಲಿದ್ದ ವಿದ್ಯುತ್ ತಂತಿಯನ್ನು ಮೆಟ್ಟಿದ್ದ. ಆಗ ವಿದ್ಯುತ್ ಪ್ರವಹಿಸಿ ದುರಂತ ಸಂಭವಿಸಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿದ್ಯುತ್ ಪ್ರವಹಿಸುವ ತಂತಿಗಳನ್ನು ಮಕ್ಕಳು ಆಡುವ ಜಾಗದಲ್ಲಿ ಬಿಟ್ಟಿದ್ದೇ ದುರಂತಕ್ಕೆ ಕಾರಣವಾಗಿದೆ. ಹತ್ತು ವರ್ಷದ ಬಾಲಕನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.