ಬೆಂಗಳೂರು: ಸೈಬರ್ ಕ್ರೈಂ (Cyber Crime) ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ವಂಚಕನೊಬ್ಬ ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ಬೆಂಗಳೂರಿನ ಟೆಕ್ಕಿ ದಂಪತಿ ಬಳಿಯಿಂದ ಬರೋಬ್ಬರಿ 1.53 ಕೋಟಿ ರೂಪಾಯಿ ಪೀಕಿಸಿದ್ದು, ಸದ್ಯ ಪೊಲೀಸರು 1.4 ಕೋಟಿ ರೂ. ಅನ್ನು 50ಕ್ಕೂ ಹೆಚ್ಚು ಖಾತೆಗಳಿಂದ ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಂಚನೆಗೆ ಒಳಗಾದ ದಂಪತಿ ನೀಡಿ ದೂರು ಆಧರಿಸಿ ಪೂರ್ವ ವಲಯದ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಬಾಣಸವಾಡಿಯಲ್ಲಿ ವಾಸಿಸುತ್ತಿರುವ ದಂಪತಿಗೆ ಬ್ಯಾಂಕ್ ಅಧಿಕಾರಿಗಳ ಜತೆ ಸೇರಿ ವಂಚಕ ಬಲೆ ಬೀಸಿದ್ದ. ಹೆಚ್ಚಿನ ಲಾಭದ ಆಸೆ ತೋರಿಸಿ ಈ ಕೃತ್ಯ ಎಸಗಿದ್ದ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.
ಬ್ರಿಟನ್‌ನಲ್ಲಿ ಕುಳಿತು ವಂಚಕ ಈ ವಂಚನೆ ಜಾಲವನ್ನು ನಡೆಸುತ್ತಿದ್ದ. ಈತ ಹಣ ಸ್ವೀಕರಿಸಲು ಉತ್ತರ ಭಾರತೀಯರ ಒಂದಿಷ್ಟು ಖಾತೆಗಳನ್ನು ಬಾಡಿಗೆಗೆ ಪಡೆದಿದ್ದ. ಅಷ್ಟೇ ಅಲ್ಲ ಹೂಡಿಕೆ ನಿಜ ಎಂದು ಬಿಂಬಿಸಲು ಈತ ನಕಲಿ ವೆಬ್‌ಸೈಟ್ ಒಂದನ್ನು ತೆರೆದು ದಂಪತಿಗೆ ಇದರ ಆಕ್ಸೆಸ್ ಕೂಡ ನೀಡಿದ್ದ.
ಇದರಲ್ಲಿ ತಮ್ಮ ಹೂಡಿಕೆ ಬೆಳೆಯುತ್ತಿರುವುದನ್ನು ಕಂಡು ದಂಪತಿ ಖುಷಿಯಾಗಿದ್ದರು. ಕೆಲವು ತಿಂಗಳ ನಂತರ ಒಂದಿಷ್ಟು ಹಣವನ್ನು ಹಿಂಪಡೆಯಲು ನೋಡಿದ್ದಾರೆ. ಆದರೆ ಹಣ ತೆಗೆಯಲು ಆಗುತ್ತಿರಲಿಲ್ಲ. ಇದರಿಂದ ಅವರಿಗೆ ಅನುಮಾನ ಮೂಡತೊಡಗಿತ್ತು. ಅಷ್ಟೇ ಅಲ್ಲ ನಕಲಿ ವೆಬ್‌ಸೈಟ್‌ನ ಆಕ್ಸೆಸ್ ಕೂಡ ಹೋಗಿತ್ತು. ಕೊನೆಗೆ ದಂಪತಿಯನ್ನು ಈ ವೆಬ್‌ಸೈಟ್ ಬ್ಲಾಕ್ ಮಾಡಿತ್ತು.
ಇದರೊಂದಿಗೆ ತಾವು ವಂಚನೆಗೆ ಸಿಲುಕಿರುವುದು ದಂಪತಿಗೆ ದೃಢವಾಗಿತ್ತು. ಕೂಡಲೇ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದಲ್ಲದೆ ಬ್ಯಾಂಕ್ ಅಧಿಕಾರಿಗಳ ಜತೆ ಸೇರಿ ನಡೆಸಿದ್ದ ಈ ವಂಚನೆ ಜಾಲವನ್ನು ಭೇದಿಸಿದ್ದಾರೆ. ಈ ಹಗರಣದಲ್ಲಿ ಭಾಗಿಯಾಗಿದ್ದ 50ಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ.
ಲಂಡನ್ನಿಂದ ಕೃತ್ಯ
ʼʼಆರೋಪಿ ಲಂಡನ್ನಲ್ಲಿ ಕುಳಿತು ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಇದ್ದು, ಇದಕ್ಕಾಗಿ ಉತ್ತರ ಭಾರತದ ಹಲವಾರು ಅಕೌಂಟ್ಗಳನ್ನು ಬಳಕೆ ಮಾಡಿದ್ದಾನೆ. ಷೇರು ಮಾರ್ಕೆಟ್ ಬ್ರೋಕರೇಜ್ ರೀತಿಯ ನಕಲಿ ವೆಬ್‌ಸೈಟ್ ರಚನೆ ಮಾಡಿದ್ದಾನೆ. ಸದ್ಯ ಆರೋಪಿ ಯಾರು ಎಂಬುದರ ಸ್ಪಷ್ಟತೆ ಇಲ್ಲʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಶಪಡಿಸಿಕೊಳ್ಳಲಾದ ಹಣವನ್ನು ಪೊಲೀಸರು ವಂಚನೆಗೆ ಒಳಗಾದ ದಂಪತಿಗೆ ಮರಳಿಸುತ್ತಿದ್ದಾರೆ.
ನೋಡ ನೋಡುತ್ತಲೇ ಸ್ಕೂಟರ್ ಕದ್ದ ಕಳ್ಳ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ಮಿತಿ ಮೀರಿದೆ. ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್ ಅನ್ನು ಕಳ್ಳನೊಬ್ಬ ರಾಜಾರೋಷವಾಗಿ ಕದ್ದುಕೊಂಡು ಹೋಗಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಬ್ಬಾಳದ ಚೋಳನಹಳ್ಳಿ ಮಿನಿ ಮಾರ್ಟ್ ಮುಂಭಾಗ ಈ ಘಟನೆ ನಡೆದಿದೆ. ಕೀ ಸಮೇತ ಸ್ಕೂಟರ್ ನಿಲ್ಲಿಸಿ ಮಹಿಳೆಯೊಬ್ಬರು ತರಕಾರಿ ತರಲು ಹೋಗಿದ್ದ ವೇಳೆ ಈ ಕೃತ್ಯ ನಡೆದಿದೆ. ಮಹಿಳೆ ತರಕಾರಿ ತಗೊಂಡು ವಾಪಸ್ ಬರುವ ವೇಳೆ ಆ್ಯಕ್ಟಿವಾ ಮಾಯವಾಗಿತ್ತು. ಮಹಿಳೆ ಕೀಯನ್ನು ಸ್ಕೂಟರ್‌ನಲ್ಲೇ ಬಿಟ್ಟು ಅಂಗಡಿಗೆ ತೆರಳಿರುವುದನ್ನು ಗಮನಿಸಿದ ಕಳ್ಳ ತನ್ನ ಕೈಚಳಕ ತೋರಿದ್ದ. ಅತ್ತ-ಇತ್ತ ನೋಡಿ ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು ಕಳ್ಳ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಇದನ್ನೂ ಓದಿ: Californium Stone: ಪೊಲೀಸರಿಂದ ಭರ್ಜರಿ ಬೇಟೆ; 850 ಕೋಟಿ ರೂ. ಮೌಲ್ಯದ ಅಪರೂಪದ ವಿಕಿರಣಶೀಲ ಹರಳು ವಶ