ಮುಂಬೈ: ಆನ್‌ಲೈನ್ ವಂಚನೆ (Cyber Fraud) ಜಾಲಕ್ಕೆ ಇತ್ತೀಚೆಗೆ ಅನಕ್ಷರಸ್ಥರ ಜತೆಗೆ ಅಕ್ಷರಸ್ಥರೇ ಹೆಚ್ಚಾಗಿ ಸಿಲುಕುತ್ತಿದ್ದಾರೆ. ಕರೆ ಮಾಡುವವರಿಗೆ ಒಟಿಪಿ ನೀಡಿಯೋ, ಇನ್ನಾವುದೋ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿಯೋ, ಕಡಿಮೆ ಬೆಲೆಗೆ ಕಾರ್, ಬೈಕ್ ಸಿಗುತ್ತದೆ ಎಂಬ ಅತಿ ಆಸೆಗೋ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತದ್ದಾರೆ. ಇದರ ಬೆನ್ನಲ್ಲೇ, ಮಹಾರಾಷ್ಟ್ರದ ಪುಣೆಯಲ್ಲಿ ಆನ್‌ಲೈನ್ ವಂಚಕರು ನಿವೃತ್ತ ನ್ಯಾಯಾಧೀಶರೊಬ್ಬರಿಗೇ 1.67 ಲಕ್ಷ ರೂ. ವಂಚಿಸಿದ್ದಾರೆ.
ಮಹಾರಾಷ್ಟ್ರದ ಪುಣೆ ನಗರದ ಬಾವ್‌ಧನ್ ಖುರ್ದ್‌ನಲ್ಲಿ ವಾಸಿಸುತ್ತಿರುವ 70 ವರ್ಷದ ನಿವೃತ್ತ ನ್ಯಾಯಾಧೀಶರಿಗೆ ಕೊರಿಯರ್ ಸೇವಾ ಸಿಬ್ಬಂದಿಯ ಸೋಗಿನಲ್ಲಿ ದುರುಳರು ವಂಚನೆ ಮಾಡಿದ್ದಾರೆ. ಹಿಂಜೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ. ಆದಾಗ್ಯೂ, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಹಣ ಕಳೆದುಕೊಂಡಿದ್ದು ಹೇಗೆ?
ಅಮೆರಿಕದಲ್ಲಿರುವ ತಮ್ಮ ಮೊಮ್ಮಗಳಿಗೆ ನಿವೃತ್ತ ನ್ಯಾಯಾಧೀಶರು ಕೆಲ ದಿನಗಳ ಹಿಂದೆ ಸ್ವೀಟ್ ಹಾಗೂ ಬಟ್ಟೆಗಳನ್ನು ಖಾಸಗಿ ಸಂಸ್ಥೆಯ ಮೂಲಕ ಕೊರಿಯರ್ ಮಾಡಿದ್ದಾರೆ. ಆದರೆ, ನಿವೃತ್ತ ನ್ಯಾಯಾಧೀಶರಿಗೆ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿದ್ದು, ಆತ ಕೊರಿಯರ್ ಸರ್ವಿಸ್ ಸಿಬ್ಬಂದಿ ಎಂಬುದಾಗಿ ಹೇಳಿಕೊಂಡಿದ್ದಾನೆ. “ನೀವು ಕೊಟ್ಟಿರುವ ವಿಳಾಸ ತಪ್ಪಾಗಿದೆ, ಒಂದಷ್ಟು ಮಾಹಿತಿ ಕೊಡಿ” ಎಂಬುದಾಗಿ ಕೇಳಿದ್ದಾರೆ. ಇದನ್ನು ಅವರು ನಂಬಿದ್ದಾರೆ.
“ನೀವು ಕೊಟ್ಟಿರುವ ವಿಳಾಸ ತಪ್ಪಾಗಿರುವ ಕಾರಣ ಅದನ್ನು ಸರಿಪಡಿಸಬೇಕು ಎಂದರೆ ನೀವು 5 ರೂಪಾಯಿ ಪಾವತಿಸಬೇಕು. ನಿಮಗೆ ನಾವೊಂದು ಲಿಂಕ್ ಕಳುಹಿಸಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿ, ಹಣ ಪಾವತಿಸಿ” ಎಂದಿದ್ದಾರೆ. ಅದರಂತೆ, ನಿವೃತ್ತ ನ್ಯಾಯಾಧೀಶರು ಲಿಂಕ್ ಮೇಲೆ ಕ್ಲಿಕ್ ಮಾಡಿ, ಹಣ ಪಾವತಿಸಿದ್ದಾರೆ. ಆದರೆ, ಇದಾದ ಬಳಿಕ ರಿಟೈರ್ಡ್ ಜಡ್ಜ್ ಬ್ಯಾಂಕ್ ಖಾತೆಯಿಂದ 1,67,997 ಲಕ್ಷ ರೂ. ಕಡಿತವಾಗಿದೆ.
ಹಲವು ಟ್ರಾನ್ಸಾಕ್ಷನ್‌ಗಳ ಮೂಲಕ ಲಕ್ಷಾಂತರ ರೂ. ಕಡಿತವಾಗುತ್ತಲೇ ವಂಚನೆಯನ್ನು ಅರಿತ ರಿಟೈರ್ಡ್ ಜಡ್ಜ್, ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲ ದಿನದ ಹಿಂದಷ್ಟೇ, ವಿದೇಶದಿಂದ ದುಬಾರಿ ಉಡುಗೊರೆ ಬಂದಿದ್ದು, ಅದನ್ನು ಪಡೆಯಲು ಹಣ ಪಾವತಿಸಲು ಹೋದ ಮಹಿಳೆಯು 12 ಲಕ್ಷ ರೂ. ಕಳೆದುಕೊಂಡಿದ್ದರು. ಇಂತಹ ಪ್ರಕರಣಗಳು ದಿನೇದಿನೆ ಜಾಸ್ತಿಯಾಗುತ್ತಿರುವ ಕಾರಣ ಜನ ಎಚ್ಚರಿಕೆಯಿಂದ ಇರುವುದು ಒಳಿತು.
ಇದನ್ನೂ ಓದಿ: Cyber Crime: ಸಿನಿಮಾ ರಿವ್ಯೂ ಕೊಡಲು ಹೋಗಿ 7.3 ಲಕ್ಷ ರೂ. ಕಳೆದುಕೊಂಡ ಮಹಿಳೆ, ಪೊಲೀಸರಿಗೂ ವಂಚನೆ