Site icon Vistara News

ಖ್ಯಾತ ಪಂಜಾಬಿ ಗಾಯಕ ದಲೇರ್‌ ಮೆಹೆಂದಿಗೆ 2 ವರ್ಷ ಜೈಲು, 19 ವರ್ಷ ಹಳೆ ಕೇಸಿನಲ್ಲಿ ಅರೆಸ್ಟ್‌

ಪಟಿಯಾಲ: ಖ್ಯಾತ ಪಂಜಾಬಿ ಗಾಯಕ ದಲೇರ್‌ ಮೆಹೆಂದಿ ಅವರಿಗೆ ೧೯ ವರ್ಷ ಹಳೆಯ ಮಾನವ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ವಿಧಿಸಲಾಗಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಗುರುವಾರ ಪಟಿಯಾಲ ಸೆಷನ್ಸ್‌ ಕೋರ್ಟ್‌ ಎತ್ತಿ ಹಿಡಿದಿದೆ. ಕೂಡಲೇ ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ.

ದಲೇರ್‌ ಮೆಹೆಂದಿ ತನ್ನ ಮ್ಯೂಸಿಕ್‌ ಮತ್ತು ಡ್ಯಾನ್ಸ್‌ ಟ್ರೂಪನ್ನು ವಿದೇಶಗಳಿಗೆ ಕರೆದುಕೊಂಡು ಹೋಗುವಾಗ ತಂಡಕ್ಕೆ ಸೇರದ ಕೆಲವರನ್ನು ಜತೆಗೆ ಕರೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಇದಕ್ಕಾಗಿ ಅವರು ದೊಡ್ಡ ಪ್ರಮಾಣದಲ್ಲಿ ಹಣವನ್ನು ಪಡೆಯುತ್ತಿದ್ದರು. ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ವೇಳೆ ಈ ರೀತಿ ಅಕ್ರಮವಾಗಿ ಕರೆದುಕೊಂಡು ಹೋಗಿದ್ದನ್ನು ಮಾನವ ಕಳ್ಳಸಾಗಾಣಿಕೆ ಎಂದು ಪರಿಗಣಿಸಲಾಗುತ್ತದೆ. ೨೦೦೩ರಲ್ಲಿ ಬಯಲಾದ ಒಂದು ಪ್ರಕರಣಕ್ಕೆ ಸಂಬಂಧಿಸಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು.

ಭಾರತೀಯ ದಂಡ ಸಂಹಿತೆಯ ೪೦೬, ೪೨೦, ೧೨೦ಬಿ, ೪೬೫, ೪೬೮ ಮತ್ತು ೪೭೧ನೇ ಸೆಕ್ಷನ್‌ಗಳು ಹಾಗೂ ಪಾಸ್‌ಪೋರ್ಟ್‌ ಕಾಯಿದೆಯಡಿ ಕೇಸುಗಳನ್ನು ದಾಖಲಾಗಿತ್ತು. ೨೦೧೮ರಲ್ಲಿ ಕೋರ್ಟ್‌ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ, ಅವರು ಮೇಲ್ಮನವಿ ಸಲ್ಲಿಸಿ ಜಾಮೀನು ಪಡೆದಿದ್ದರು.

೨೦೦೩ರ ಈ ಪ್ರಕರಣದಲ್ಲಿ ಮೆಹಂದಿ ಅವರ ಸಹೋದರ ಶಂಶೇರ್‌ ಸಿಂಗ್‌ (ಈಗ ಮೃತ) ಮತ್ತು ಇತರ ಇಬ್ಬರ ಮೇಲೂ ಪಟಿಯಾಲ ಪೊಲೀಸರು ಪ್ರಕರಣ ದಾಖಲಿಸಿದ್ದರು. ಒಂದು ಪ್ರಕರಣ ದಾಖಲಾದ ಬೆನ್ನಿಗೇ ಇನ್ನೂ ಇಂಥಹುದೇ ೩೫ ಪ್ರಕರಣಗಳು ದಾಖಲಾದವು.

ದಲೇರ್‌ ಮೆಹೆಂದಿ ಅದೆಷ್ಟೋ ಮಂದಿಯನ್ನು ತಮ್ಮ ತಂಡದ ಹೆಸರಿನಲ್ಲಿ ಅಕ್ರಮವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಕರೆದುಕೊಂಡು ಹೋಗಿದ್ದು ಮಾತ್ರವಲ್ಲದೆ, ಅದೆಷ್ಟೋ ಮಂದಿಯಿಂದ ಆ ದೇಶಗಳಿಗೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿ ಹಣ ವಸೂಲಿ ಕೂಡಾ ಮಾಡಿದ್ದರು! ಕೆಲವರ ಕೈಯಿಂದ ೧೨ ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಪಡೆದಿದ್ದರು ಎಂದು ಆರೋಪಿಸಲಾಗಿತ್ತು.
ಆವತ್ತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪಟಿಯಾಲ ಪೊಲೀಸರು ಹಲವರ ವಿಚಾರಣೆಯನ್ನು ನಡೆಸಿದ್ದರು. ಜತೆಗೆ ದಿಲ್ಲಿಯ ಕನ್ನೌಟ್‌ ಪ್ಲೇಸ್‌ನಲ್ಲಿರುವ ಕಚೇರಿಗೆ ದಾಳಿ ಮಾಡಿದ ವೇಳೆ ಕೆಲವು ದಾಖಲೆಗಳು ಕೂಡಾ ಸಿಕ್ಕಿದ್ದವು. ಇವುಗಳ ಆಧಾರದಲ್ಲಿ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದಾಗ ದಲೇರ್‌ ಮೆಹೆಂದಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಇದನ್ನೂ ಓದಿ| ಮಕ್ಕಳಿಗೆ ಅಕ್ರಮವಾಗಿ 312 ಕೋಟಿ ರೂ. ರವಾನೆ, ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂಕೋರ್ಟ್

Exit mobile version