Site icon Vistara News

ದಲಿತ ಯುವಕ, ಮತ್ತವನ ವೃದ್ಧ ಪಾಲಕರ ಹತ್ಯೆ: ಪತ್ನಿಯನ್ನು ನೋಡುತ್ತಿದ್ದ ಎಂಬ ಕಾರಣಕ್ಕೆ ನಡೆದು ಹೋಯ್ತು ಕೊಲೆ !

Road Accident

ದಾಮೋಹ್​: ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ದೇಶದ ಒಂದಿಲ್ಲೊಂದು ಭಾಗದಿಂದ ಪದೇಪದೆ ವರದಿಯಾಗುತ್ತಲೇ ಇರುತ್ತವೆ. ದಲಿತರನ್ನು ಮರಕ್ಕೆ ಕಟ್ಟಿ ಥಳಿಸುವುದು, ಮಸಿ ಬಳಿದು ಹಿಂಸೆ ನೀಡುವುದು, ಅರೆಬೆತ್ತಲೆ ಮಾಡಿ ಹೊಡೆಯುವುದು..ಇತ್ಯಾದಿ ಹಿಂಸಾತ್ಮಕ ಘಟನೆಗಳು ಪದೇಪದೆ ನಡೆಯುತ್ತಿರುತ್ತವೆ. ಈ ಮಧ್ಯೆ ಮಧ್ಯಪ್ರದೇಶದಲ್ಲಿ ದಲಿತ ಕುಟುಂಬದ ಮೂವರನ್ನು, ಅವರ ಪಕ್ಕದ ಮನೆಯವರೇ ಗುಂಡಿಟ್ಟು ಕೊಂದಿರುವ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ.

ದಾಮೋಹ್​ ಜಿಲ್ಲೆಯ ದೇವ್ರಾನ್​ ಎಂಬ ಗ್ರಾಮದಲ್ಲಿ ಘಟನೆ ನಡೆದಿದ್ದು ಜಗದೀಶ್​ ಪಟೇಲ್​ ಎಂಬಾತ ಮುಖ್ಯ ಆರೋಪಿ. ಇನ್ನೂ ಐವರು ಆತನಿಗೆ ಸಹಕರಿಸಿದ್ದಾರೆ. ದಲಿತ ಯುವಕ ಮನಕ್​ ಅಹಿರ್ವಾರ್​ ಎಂಬಾತ ತನ್ನ ಪತ್ನಿಯನ್ನು ಚುಡಾಯಿಸಿದ್ದಾನೆ. ಆಕೆಯನ್ನು ಹಿಂಬಾಲಿಸುತ್ತಿದ್ದ. ಹಾಗೇ ಪದೇಪದೆ ಅವಳನ್ನು ನೋಡುತ್ತಿದ್ದ ಎಂಬ ಕಾರಣಕ್ಕೆ ಜಗದೀಶ್​ ಪಟೇಲ್​ ಆ ಯುವಕನನ್ನು ಮಂಗಳವಾರ ಬೆಳಗ್ಗೆ ಗುಂಡಿಟ್ಟುಕೊಂದಿದ್ದಾನೆ. ಅದಕ್ಕೂ ಮೊದಲು ಸೋಮವಾರ ಸಂಜೆ, ಜಗದೀಶ್​ ಪಟೇಲ್​ ಮತ್ತು ದಲಿತ ಯುವಕ ಮನಕ್​ ಅಹಿರ್ವಾರ್ ಕುಟುಂಬಗಳ ನಡುವೆ ಇದೇ ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದಿತ್ತು. ಆಗ ಅಲ್ಲೇ ಅಕ್ಕಪಕ್ಕದ ಮನೆಯವರೆಲ್ಲ ಬಂದು ಜಗಳ ಶಮನ ಮಾಡಿದ್ದರು.

ಆದರೆ ಜಗದೀಶ್ ಪಟೇಲ್​ ಸಿಟ್ಟು ಮರುದಿನ ಬೆಳಗಾದರೂ ತಣ್ಣಗಾಗಿರಲಿಲ್ಲ. ಮಂಗಳವಾರ ಬೆಳಗ್ಗೆ ಮತ್ತೆ ಮನಕ್​ ಅಹಿರ್ವಾರ್​ ಮನೆಗೆ, ತನ್ನ ಐವರು ಸಹಚರರ ಜತೆ ಹೋಗಿದ್ದ. ಕೈಯಲ್ಲಿ ಬಂದೂಕು ಬೇರೆ ಇತ್ತು. ಅಲ್ಲಿ ಹೋಗಿ ಮತ್ತೆ ಜಗಳ ತೆಗೆದಿದ್ದ. ಕೊನೆಗೆ ಮನಕ್​, ಆತನ ಸಹೋದರ ಮತ್ತು ಅವನ ವೃದ್ಧ ತಂದೆ-ತಾಯಿಯ ಮೇಲೆ ಗುಂಡು ಹಾರಿಸಿದ್ದಾನೆ. ಮನಕ್​ ಮತ್ತು ಅವನ ತಂದೆ-ತಾಯಿ ಮೃತಪಟ್ಟಿದ್ದು, ಸಹೋದರನಿಗೆ ಗಂಭೀರ ಗಾಯವಾಗಿದೆ. ಸದ್ಯ ಪೊಲೀಸರು ಜಗದೀಶ್​ ಪಟೇಲ್​​ನನ್ನು ಬಂಧಿಸಿದ್ದಾರೆ. ಉಳಿದ ಐವರು ತಪ್ಪಿಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ದಲಿತ ಬಾಲಕಿಯರನ್ನು ಅತ್ಯಾಚಾರ ಮಾಡಿ ಕೊಂದು, ಮರಕ್ಕೆ ನೇತು ಹಾಕಿದ ಮುಸ್ಲಿಂ ಯುವಕರು​

Exit mobile version