ನವದೆಹಲಿ: ದೇಶವನ್ನೇ ಅಚ್ಚರಿ ಮೂಡಿಸಿದ ಶ್ರದ್ಧಾ ವಾಳ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ (Shraddha Murder Case) ಶ್ರದ್ಧಾ ವಾಳ್ಕರ್ ತಂದೆ ವಿಕಾಸ್ ವಾಳ್ಕರ್ ಗಂಭೀರ ಆರೋಪ ಮಾಡಿದ್ದಾರೆ. “ಮಹಾರಾಷ್ಟ್ರದ ವಸಾಯಿ ಪೊಲೀಸರು ತೊಂದರೆ ಮಾಡಿದರು. ಅವರು ಸಹಕಾರ ನೀಡಿದ್ದಿದ್ದರೆ ನನ್ನ ಮಗಳು ಬದುಕುಳಿಯುತ್ತಿದ್ದಳು” ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
“ದೆಹಲಿ ಪೊಲೀಸರು ಹಾಗೂ ವಸಾಯಿ ಪೊಲೀಸರು ಸದ್ಯ ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ಆದರೆ, ಇದಕ್ಕೂ ಮೊದಲು ವಸಾಯಿ ಪೊಲೀಸರು ಸಹಕಾರ ನೀಡಿದ್ದರೆ ನನ್ನ ಮಗಳ ಕೊಲೆಯಾಗುತ್ತಿರಲಿಲ್ಲ. ವಸಾಯಿ ಪೊಲೀಸರು ತನಿಖೆಯಲ್ಲಿ ನಿರಾಸಕ್ತಿ ತೋರಿದ ಕಾರಣ ಮಗಳ ಕೊಲೆಯಾಯಿತು” ಎಂದು ತಿಳಿಸಿದ್ದಾರೆ.
“೨೦೨೧ರಲ್ಲಿ ಶ್ರದ್ಧಾ ವಾಳ್ಕರ್ ಜತೆ ಕೊನೆಯದಾಗಿ ಮಾತನಾಡಿದೆ. ಮತ್ತೊಂದು ಬಾರಿ ಕರೆ ಮಾಡಿದಾಗ ಅಫ್ತಾಬ್ ಪೂನಾವಾಲಾ ಮಾತನಾಡಿದ. ಆತನಿಗೆ ಶ್ರದ್ಧಾ ಬಗ್ಗೆ ಕೇಳಿದರೆ ಉತ್ತರ ದೊರಕಲಿಲ್ಲ. ಅಫ್ತಾಬ್ ಕೃತ್ಯಗಳ ಬಗ್ಗೆ ಆತನ ಕುಟುಂಬಸ್ಥರಿಗೆ ಮೊದಲೇ ಗೊತ್ತಿತ್ತು. ಆದರೆ, ಯಾರೂ ನನ್ನ ಮಗಳನ್ನು ಉಳಿಸಿಕೊಡಲು ನೆರವಾಗಲಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನು, ಡೇಟಿಂಗ್ ಆ್ಯಪ್‌ಗಳ ಬಗ್ಗೆ ಪೊಲೀಸರು ಮೇಲ್ವಿಚಾರಣೆ ನಡೆಸಬೇಕು. ಉಗ್ರರು, ಅಪರಾಧಿಗಳು ಈ ಆ್ಯಪ್‌ಗಳನ್ನು ಬಳಸುತ್ತಿದ್ದು, ನಿಗಾ ಇಡಬೇಕು ಎಂದಿದ್ದಾರೆ.
ಶ್ರದ್ಧಾ ವಾಳ್ಕರ್ ಹಾಗೂ ಅಫ್ತಾಬ್ ಪೂನಾವಾಲಾ ದೆಹಲಿಯಲ್ಲಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಕಳೆದ ಮೇ ತಿಂಗಳಲ್ಲಿ ಮದುವೆ ವಿಚಾರಕ್ಕಾಗಿ ಜಗಳವಾಡಿ, ಆಕೆಯನ್ನು ಪೂನಾವಾಲಾ ಕೊಲೆಗೈದಿದ್ದ. ಅಲ್ಲದೆ, ಆಕೆಯ ದೇಹವನ್ನು ೩೫ ತುಂಡುಗಳನ್ನಾಗಿ ಮಾಡಿ ದೆಹಲಿಯ ಹಲವೆಡೆ ಎಸೆದಿದ್ದ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Shraddha Murder Case| ಹೌದು ನಾನೇ ಶ್ರದ್ಧಾಳ ಕೊಲೆ ಮಾಡಿದೆ; ಮಂಪರು ಪರೀಕ್ಷೆಯಲ್ಲೂ ಅದೇ ಉತ್ತರ ಕೊಟ್ಟ ಅಫ್ತಾಬ್