ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಹೆಚ್ಚಾಗಿ ನಡೆಯುತ್ತವೆ. ಹೆಣ್ಣುಮಕ್ಕಳ ರಕ್ಷಣೆಗಾಗಿ ಮಹಿಳಾ ಆಯೋಗವನ್ನು ಸ್ಥಾಪಿಸಲಾಗಿದೆ. ಆದರೆ, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ (Swati Maliwal) ಅವರ ಮೇಲೆಯೇ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದಾಗಿ, ದೆಹಲಿಯಲ್ಲಿ ಯಾವ ಹೆಣ್ಣುಮಕ್ಕಳಿಗೂ ಸುರಕ್ಷತೆ ಇಲ್ಲ ಎಂಬುದು ಸಾಬೀತಾಗಿದೆ.
ಸ್ವಾತಿ ಮಾಲಿವಾಲ್ ಅವರು ಗುರುವಾರ ಬೆಳಗಿನ ಜಾವ ಏಮ್ಸ್ ಆಸ್ಪತ್ರೆಯ ಎರಡನೇ ಗೇಟ್ ಬಳಿ ಬೆಳಗಿನ ಜಾವ 3.11ರ ಸುಮಾರಿಗೆ ನಿಂತಿದ್ದಾರೆ. ಇದೇ ವೇಳೆ, ಕಾರಿಲ್ಲಿ ಬಂದ ಹರೀಶ್ ಚಂದ್ರ (47) ಎಂಬಾತ ಕಾರಿನ ಗ್ಲಾಸು ಇಳಿಸಿದವನೇ ಸ್ವಾತಿ ಮಾಲಿವಾಲ್ ಕೈ ಹಿಡಿದು ಎಳೆದಿದ್ದಾನೆ. ಕಾರಿನಲ್ಲಿ ಕುಳಿತುಕೋ ಎಂದು ಬಲವಂತ ಮಾಡಿದ್ದಾನೆ. ಇದಕ್ಕೆ ಪ್ರತಿರೋಧ ಒಡ್ಡಿದರೂ ಕಿಟಕಿಯಿಂದ ಸ್ವಾತಿ ಮಾಲಿವಾಲ್ ಕೈಹಿಡಿದು 10-15 ಮೀಟರ್ ಎಳೆದಿದ್ದಾನೆ. ಬಳಿಕ ಅಧ್ಯಕ್ಷೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರೀಶ್ ಚಂದ್ರನು ಕುಡಿದ ಮತ್ತಿನಲ್ಲಿ ಸ್ವಾತಿ ಮಾಲಿವಾಲ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಹರೀಶ್ ಚಂದ್ರ ಹಾಗೂ ಸ್ವಾತಿ ಮಾಲಿವಾಲ್ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ದೇವರೇ ಕಾಪಾಡಿದ ಎಂದ ಸ್ವಾತಿ
ಘಟನೆ ಕುರಿತು ಸ್ವಾತಿ ಮಾಲಿವಾಲ್ ಪ್ರತಿಕ್ರಿಯಿಸಿದ್ದು, “ಏಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯರ ರಕ್ಷಣೆ ಕುರಿತು ಪರಿಶೀಲನೆ ನಡೆಸಲು ಹೋದಾಗ ಕಾರಿನಲ್ಲಿ ಬಂದ ವ್ಯಕ್ತಿಯು ನನ್ನ ಕೈ ಹಿಡಿದು ಎಳೆದಿದ್ದಾನೆ. ಹಾಗೆ ನೋಡಿದರೆ, ನನ್ನನ್ನು ದೇವರೇ ಕಾಪಾಡಿದ್ದಾನೆ. ಮಹಿಳಾ ಆಯೋಗದ ಅಧ್ಯಕ್ಷೆಗೇ ಸುರಕ್ಷತೆ ಇಲ್ಲ ಎಂದರೆ ದೆಹಲಿಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಊಹಿಸಿಕೊಳ್ಳಬಹುದು” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | Sexual harrassment | 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದುಷ್ಕರ್ಮಿಗೆ ಪತ್ನಿಯಿಂದಲೂ ಬೆಂಬಲ?