Site icon Vistara News

Death News: ಮೂಲ್ಕಿ ಅಪಘಾತದಲ್ಲಿ 21ರ ಯುವತಿ ದಾರುಣ ಮೃತ್ಯು; ಬಾಗಲಕೋಟೆಯಲ್ಲಿ ವೈದ್ಯ ವಿದ್ಯಾರ್ಥಿನಿ ಶವ ಪತ್ತೆ

Accident at Mangalore

ಮಂಗಳೂರು/ಬಾಗಲಕೋಟೆ: ಮಂಗಳೂರಿನ ಮೂಲ್ಕಿ ಮತ್ತು ಬಾಗಲಕೋಟೆಯಲ್ಲಿ ನಡೆದ ಎರಡು ಪ್ರತ್ಯೇಕ ವಿದ್ಯಮಾನಗಳಲ್ಲಿ ಇಬ್ಬರು ಯುವತಿಯರು (Two young ladies death) ಮೃತಪಟ್ಟಿದ್ದಾರೆ (Death News). ಮೂಲ್ಕಿಯಲ್ಲಿ ಅಪಘಾತ (Accident at Mulki) ಸಂಭವಿಸಿದರೆ, ಬಾಗಲಕೋಟೆಯ ವೈದ್ಯಕೀಯ ವಿದ್ಯಾರ್ಥಿನಿ ಸಾವು (Medical student death in Bagalakote) ನಿಗೂಢವಾಗಿದೆ.

ಮೂಲ್ಕಿಯಲ್ಲಿ ಕಾರು-ಬೈಕ್‌ ಅಪಘಾತದಲ್ಲಿ ಯುವತಿ ಬಲಿ

ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಮೂಲ್ಕಿ ಸಮೀಪ ಕಾರು ಮತ್ತು ಬೈಕ್‌ ಅಪಘಾತದಲ್ಲಿ 21 ವರ್ಷದ ಪ್ರೀತಿಕಾ ಶೆಟ್ಟಿ ಎಂಬ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ. ಕೇರಳದ ಕಾಸರಗೋಡು ಜಿಲ್ಲೆಯ ಬಾಕ್ರಬೈಲು ನಿವಾಸಿಯಾಗಿರುವ ಪ್ರೀತಿಕಾ ಶೆಟ್ಟಿ ಬಂಟ್ವಾಳದ ಮನ್ವಿತ್​ ರಾಜ್ ಜತೆಗೆ ಬೈಕ್‌ನಲ್ಲಿ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಮನ್ವಿತ್‌ ರಾಜ್‌ಗೂ​ ಗಂಭೀರ ಗಾಯಗಳಾಗಿವೆ.

ಪ್ರೀತಿಕಾ ಮತ್ತು ಮನ್ವಿತ್‌ ರಾಜ್‌ ಉಡುಪಿ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದಾಗ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಕಾರು ಬೈಕ್​ಗೆ ಡಿಕ್ಕಿ ಹೊಡೆದಿತ್ತು. ಬೈಕ್‌ ವೇಗವಾಗಿ ಬರುತ್ತಿದ್ದ ಹಿನ್ನೆಲೆಯಲ್ಲಿ ಕಾರು ಡಿಕ್ಕಿ ಹೊಡೆಯುತ್ತಿದ್ದಂತೆಯೇ ಹಿಂದೆ ಕುಳಿತಿದ್ದ ಯುವತಿ ಹಾರಿ ರಸ್ತೆಗೆ ಬಿದ್ದಿದ್ದಾಳೆ. ಬೈಕ್‌ ಸ್ವಲ್ಪ ದೂರ ಹೋಗಿ ಪಲ್ಟಿಯಾಗಿದೆ.

ಆಯತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತಾದರೂ ಸಾಗಿಸುವ ಮೊದಲೇ ಪ್ರೀತಿಕಾ ಶೆಟ್ಟಿ ಮೃತಪಟ್ಟರು. ಮುಲ್ಕಿ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Black Magic : ಅಮಾವಾಸ್ಯೆಯಂದು ಮಾಟ ಮಂತ್ರ; ತಲೆಬುರಡೆ, ನಿಂಬೆ ಕಂಡು ಬೆಚ್ಚಿ ಬಿದ್ದ ಗ್ರಾಮಸ್ಥರು!

ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಶವ ಪತ್ತೆ

ಬಾಗಲಕೋಟೆ: ಬಾಗಲಕೋಟೆ ನಗರದ ಶೀಗಿಕೇರಿ ಕ್ರಾಸ್ ಬಳಿ ಸೇತುವೆ ಕೆಳಗಡೆ ಯುವತಿಯೊಬ್ಬರ ಶವ ಶನಿವಾರ ಪತ್ತೆಯಾಗಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಸುಮನ್ ಪತ್ತಾರ (26) ಎಂಬವರು ಮೃತ ಯುವತಿಯಾಗಿದ್ದಾರೆ.

ಮೃತ ಯುವತಿ ಕುಮಾರೇಶ್ವರ ಮೆಡಿಕಲ್ ಕಾಲೇಜ್‌ನಲ್ಲಿ ಪಿಜಿಯೋಥರೆಪಿ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಅವರ ಶವ ಶೀಗೀ ಕ್ರಾಸ್‌ ಬಳಿಯ ಸೇತುವೆ ಕೆಳಗಡೆ ಪತ್ತೆಯಾಗಿದೆ. ಮೇಲಿಂದ ಹಾರಿ ಬಿದ್ದ ಸ್ಥಿತಿಯಲ್ಲಿರುವ ಶವವನ್ನು ಇರುವೆಗಳು ಮುತ್ತಿಕೊಂಡಿವೆ.

Medical student death

ಸುಮನ್‌ ಪತ್ತಾರ್‌ ಅವರು ಶುಕ್ರವಾರ ಬೆಳಗ್ಗೆ 7 ಗಂಟೆಗೆ ಹಾಸ್ಟೆಲ್‌ನಿಂದ ಹೊರಬಂದ ಬಗ್ಗೆ ಮಾಹಿತಿ ಇದ್ದು ನಂತರ ನಾಪತ್ತೆಯಾಗಿದ್ದರು. ಈ ಬಗ್ಗೆ ನವನಗರದ ಮಹಿಳಾ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು. ಪೊಲೀಸರು ಮತ್ತು ಇತರರು ಹಲವಾರು ಕಡೆಗಳಲ್ಲಿ ಹುಡುಕಿದ್ದರು. ಇದೀಗ ಅವರ ಶವ ಸೇತುವೆ ಕೆಳಗಡೆ ಸಿಕ್ಕಿದೆ.

ಪೋಲಿಸರು ಮೃತ ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತಿದ್ದು, ಇದು ಆತ್ಮಹತ್ಯೆಯೇ? ಕೊಲೆಯೇ? ಏನು ಕಾರಣ ಎಂಬಿತ್ಯಾದಿ ವಿಚಾರಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯುತಿದೆ.

Exit mobile version