ಮುಂಬೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ವ್ಯಕ್ತಿಯೊಬ್ಬ ಜೀವ ಬೆದರಿಕೆ (Death Threat) ಹಾಕಿದ್ದಾನೆ. ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ ಅನಾಮಧೇಯ ವ್ಯಕ್ತಿಯು, ಮೋದಿ ಹಾಗೂ ಯೋಗಿ ಅವರ ಹತ್ಯೆ ಜತೆಗೆ ಮುಂಬೈನಲ್ಲಿರುವ ಜೆ. ಜೆ. ಆಸ್ಪತ್ರೆಯನ್ನು ಬಾಂಬಿಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಕಮ್ರಾನ್ ಖಾನ್ ಎಂಬುದಾಗಿ ಗುರುತಿಸಲಾಗಿದೆ. ಈತನನ್ನು ಮುಂಬೈನ ಸಿಯೋನ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ವಶಪಡಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತ ಜೀವ ಬೆದರಿಕೆಯೊಡ್ಡಲು ಏನು ನಿಖರ ಕಾರಣ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಆರೋಪಿ ವಿರುದ್ಧ ಮುಂಬೈನ ಆಜಾದ್ ಮೈದಾನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೋದಿಗೆ ಜೀವ ಬೆದರಿಕೆ ಇದೇ ಮೊದಲಲ್ಲ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಬರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಗೋರಖ್‌ಪುರ ನಿವಾಸಿ ಅರುಣ್ ಕುಮಾರ್ ಎಂಬಾತನು ಮೋದಿ ಹತ್ಯೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದ. ಬಳಿಕ ಪೊಲೀಸರು ಈತನನ್ನು ಬಂಧಿಸಿದ್ದರು. ಇನ್ನು ಕಳೆದ ಏಪ್ರಿಲ್‌ನಲ್ಲೂ ಮೋದಿ ಅವರು ಕೇರಳ ಭೇಟಿ ವೇಳೆ ಬಿಜೆಪಿ ಕಚೇರಿಗೆ ಬೆದರಿಕೆ ಒಡ್ಡಿ ಪತ್ರವೊಂದನ್ನು ಬರೆಯಲಾಗಿತ್ತು.
ಅಂಬಾನಿಗೆ ಬೆದರಿಕೆ ಹಾಕಿದವನ ಬಂಧನ
ಕೆಲ ದಿನಗಳ ಹಿಂದಷ್ಟೇ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ತೆಲಂಗಾಣದ 19 ವರ್ಷದ ಯುವಕನ್ನು ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಗಣೇಶ್ ರಮೇಶ್ ವನಪರ್ದಿ ಎಂದು ಗುರುತಿಸಲಾಗಿದ್ದು ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.
ಇದನ್ನೂ ಓದಿ: Mukesh Ambani: ಕೊನೆಗೂ ಪೊಲೀಸ್ ಬಲೆಗೆ ಬಿದ್ದ ಅಂಬಾನಿಗೆ ಜೀವ ಬೆದರಿಕೆ ಹಾಕಿದ 19 ವರ್ಷದ ಯುವಕ
ಮುಕೇಶ್ ಅಂಬಾನಿ ಅವರಿಗೆ ಅಪರಿಚಿತ ವ್ಯಕ್ತಿಯಿಂದ 400 ಕೋಟಿ ರೂ.ಗಳ ಬೆದರಿಕೆ ಇಮೇಲ್ ಬಂದ ಕೆಲವೇ ದಿನಗಳಲ್ಲಿ ಈ ಬಂಧಿಸಲಾಗಿತ್ತು. ಅಂಬಾನಿಯ ಕಂಪನಿಗೆ ಅಕ್ಟೋಬರ್ 30ರಂದು ಜೀವ ಬೆದರಿಕೆಯ ಇಮೇಲ್ ಬಂದಿತ್ತು. ಆ ಮೂಲಕ ನಾಲ್ಕು ದಿನಗಳ ಅಂತರದಲ್ಲಿ ಅಂಬಾನಿ ಅವರಿಗೆ ಮೂರನೇ ಬೆದರಿಕೆ ಇಮೇಲ್ ಬಂದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ