Site icon Vistara News

Deepavali Crackers : ಪಟಾಕಿ ಸಿಡಿಸಲು ಎರಡೇ ಗಂಟೆ ಅವಕಾಶ; ದೀಪಾವಳಿಗೆ Strict Rules

Firecrakers

ಬೆಂಗಳೂರು: ದೇಶಾದ್ಯಂತ ದೀಪಾವಳಿ ಹಬ್ಬವನ್ನು (Deepavali Festival) ಸಂಭ್ರಮದಿಂದ ಆಚರಿಸಲು ಜನರು ಸಿದ್ಧರಾಗಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಬ್ಬದ ಮೂಡ್‌ ಶುರುವಾಗಿದೆ. ಈ ನಡುವೆ ಬೆಂಗಳೂರಿನಲ್ಲಿ (Restrictions in Bangalore) ರಾತ್ರಿ ಎಂಟರಿಂದ 10ರವರೆಗೆ ಎರಡು ಗಂಟೆ ಮಾತ್ರ ಪಟಾಕಿ (Deepavali Crackers) ಸಿಡಿಸಲು ಅವಕಾಶ ನೀಡಲಾಗಿದೆ. ಅದರ ಜತೆಗೆ ಬೆಂಗಳೂರಿನ 60 ಜಾಗದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ (Crackers Market) ಅವಕಾಶ ಕಲ್ಪಿಸಲಾಗಿದೆ.

ದೀಪಾವಳಿ ಸಂದರ್ಭದಲ್ಲಿ ಸಂಭವಿಸುವ ಸಾಲು ಸಾಲು ಪಟಾಕಿ ದುರಂತಗಳ ಹಿನ್ನೆಲೆ, ವಾಯು ಮಾಲಿನ್ಯ, ಶಬ್ದ ಮಾಲಿನ್ಯದಿಂದ ಆಗುತ್ತಿರುವ ತೊಂದರೆಗಳನ್ನು ಗಮನಿಸಿ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದೆ. ಬಿಬಿಎಂಪಿ, ಪೊಲೀಸ್ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅಗ್ನಿಶಾಮಕ ದಳಗಳು ಕಟ್ಟುನಿಟ್ಟಿನ ನಿಯಮ ಪಾಲನೆಗೆ ಮುಂದಾಗಿವೆ.

ಪ್ರತಿ ವರ್ಷ ಬೆಂಗಳೂರಿನಲ್ಲಿ ನೂರಾರು ಜಾಗದಲ್ಲಿ ಪಟಾಕಿ ಮಾರಾಟ‌ ಮಾಡಲಾಗುತ್ತದೆ. ಆದರೆ, ಈ ಬಾರಿ ಕೇವಲ 60 ಜಾಗದಲ್ಲಿ ಮೈದಾನದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಎರಡೇ ಗಂಟೆ ಪಟಾಕಿ ಸಿಡಿಸಲು ಅವಕಾಶ, ಹಗಲು ಹೊಡೆಯುವಂತಿಲ್ಲ

ದೀಪಾವಳಿ ಸಂದರ್ಭದಲ್ಲಿ ರಾತ್ರಿ 8ರಿಂದ 10 ಗಂಟೆವರೆಗೂ ಮಾತ್ರ ಪಟಾಕಿ‌ ಸಿಡಿಸಲು ಅವಕಾಶವಿದೆ. ಉಳಿದಂತೆ ಹಗಲು ಹೊತ್ತಿನಲ್ಲಿ ಕೂಡಾ ಪಟಾಕಿ ಸಿಡಿಸುವಂತಿಲ್ಲ. ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಸಿಡಿಸಿದ್ರೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಎಚ್ಚರಿಸಲಾಗಿದೆ.

ಪಟಾಕಿ ನಿಯಮಗಳ ಪಾಲನೆ ಮತ್ತು ಅದರ ಮೇಲುಸ್ತುವಾರಿಗಾಗಿ ಬೆಸ್ಕಾಂ, ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್, ಬಿಬಿಎಂಪಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿದೆ. ಅಕ್ರಮ ದಾಸ್ತಾನು, ಹಸಿರು ಪಟಾಕಿ ಹೊರತುಪಡಿಸಿ ಅನ್ಯ ಪಟಾಕಿಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ.

ಹಬ್ಬಕ್ಕೂ ಮುನ್ನವೇ ಪಟಾಕಿ ಸಿಡಿತ ಪ್ರಕರಣ ದಾಖಲು

ಈ ನಡುವೆ ದೀಪಾವಳಿ ಹಬ್ಬಕ್ಕೂ ಮುನ್ನವೇ ಪಟಾಕಿ ದುರಂತ ಸಂಭವಿಸಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಪಟಾಕಿ ಸಿಡಿದು 7 ವರ್ಷದ ಬಾಲಕನಿಗೆ ಕಣ್ಣಿಗೆ ಗಾಯವಾಗಿದೆ. ಆತನನ್ನು ಚಿಕಿತ್ಸೆಗಾಗಿ ಮಿಂಟೋ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Deepavali 2023: ದೀಪಾವಳಿಯಂದು ಅಭ್ಯಂಗ ಸ್ನಾನ ಮಾಡುವುದೇಕೆ? ಇದರ ಪ್ರಯೋಜನ ತಿಳಿದಿರಲಿ

ಪಟಾಕಿ ಮಳಿಗೆಗಳ ಓಪನ್‌ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಆನೇಕಲ್‌: ಅತ್ತಿಬೆಲೆ ಸೇರಿದಂತೆ ಆನೇಕಲ್ ತಾಲೂಕಿನಾದ್ಯಂತ 30 ಮಳಿಗೆಗಳನ್ನು ತೆರೆಯಲು ಹೈಕೋರ್ಟ್‌ ಗ್ರೀನ್ ಸಿಗ್ನಲ್ ನೀಡಿದೆ. ಅತ್ತಿಬೆಲೆಯಿಂದ ಚಂದಾಪುರದವರೆಗೆ ಪಟಾಕಿ ಮಳಿಗೆಗಳನ್ನು ಪ್ರತಿವರ್ಷ ತೆರೆಯಲಾಗುತ್ತದೆ. ಆದರೆ, ಈ ಬಾರಿ ಅದಕ್ಕೆ ಅವಕಾಶ ನೀಡಲಾಗಿರಲಿಲ್ಲ. ಹೀಗಾಗಿ ಪಟಾಕಿ ಮಾರಾಟಗಾರರು ಹೈಕೋರ್ಟ್‌ ಮೊರೆ ಹೊಕ್ಕಿದ್ದರು. ಇದೀಗ ಹೈಕೋರ್ಟ್‌ 17ನೇ ತಾರೀಖಿನವರೆಗೆ ಪಟಾಕಿ ಮಾರಾಟಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ.

ಹೈಕೋರ್ಟ್ ಆದೇಶದ ಬಳಿಕ ರಸ್ತೆಯುದ್ದಕ್ಕೂ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದ್ದು, ಗ್ರಾಹಕರೂ ಮುಗಿಬಿದ್ದಿದ್ದಾರೆ. ಇಲ್ಲಿ ಖರೀದಿ ಭರಾಟೆ ಎಷ್ಟು ಜೋರಾಗಿದೆ ಎಂದರೆ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

Exit mobile version