ನವ ದೆಹಲಿ: ದೆಹಲಿಯ ದ್ವಾರಕಾದಲ್ಲಿ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿದ ಪ್ರಕರಣವನ್ನು (Delhi Acid Attack) ಭೇದಿಸಿರುವ ಪೊಲೀಸರು, ಆರೋಪಿ ಹುಡುಗರು ಸೇಡು ತೀರಿಸಿಕೊಳ್ಳಲು 17 ವರ್ಷದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿದ್ದಾರೆ. ಆರೋಪಿಗಳು ಫ್ಲಿಪ್‌ಕಾರ್ಟ್ ಮೂಲಕ ಆ್ಯಸಿಡ್ ಖರೀದಿಸಿದ್ದರು ಎಂದು ತಿಳಿಸಿದ್ದಾರೆ. ಗಂಭೀರ ಸ್ವರೂಪದ ಗಾಯಗಳಿಂದ ಬಳಲುತ್ತಿರುವ ಯುವತಿಯನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆ್ಯಸಿಡ್ ಎರಚಿದ ಇಬ್ಬರ ಪೈಕಿ ಸಚಿನ್ ಎಂಬಾತನ ಜತೆಗಿನ ಸ್ನೇಹವನ್ನು ಸಂತ್ರಸ್ತ ಯುವತಿಯು ಕಳೆದ ಕೆಲವು ತಿಂಗಳಿಂದ ಕಡಿದುಕೊಂಡಿದ್ದಳು. ಆತನ ಜತೆಗೆ ಮಾತನಾಡಲು ನಿರಾಕರಿಸುತ್ತಿದ್ದಳು. ಇದರಿಂದ ಕೋಪಗೊಂಡ ಆರೋಪಿ ಸಚಿನ್ ತನ್ನ ಸ್ನೇಹಿತರಾದ ವೀರೇಂದ್ರ ಮತ್ತು ಹರ್ಷಿತ್ ಅವರೊಂದಿಗೆ ಆ್ಯಸಿಡ್ ದಾಳಿಯ ಪ್ಲ್ಯಾನ್ ಮಾಡಿದ್ದ ಎಂದು ದಿಲ್ಲಿಯ ಸ್ಪೆಷಲ್ ಕಮಿಷನರ್ ಸಾಗರ್ ಪ್ರೀತ್ ಹೂಡಾ ಅವರು ಮಾಹಿತಿ ನೀಡಿದ್ದಾರೆ.
ಹರ್ಷಿತ್ ಎಂಬಾತ ಬೈಕ್ ಓಡಿಸುತ್ತಿದ್ದರೆ, ಆರೋಪಿ ಸಚಿನ್ ಬುಧವಾರ ಬೆಳಗ್ಗೆ ಸಂತ್ರಸ್ತ ಯುವತಿಗೆ ಆ್ಯಸಿಡ್ ಎರಚಿದ್ದಾನೆ. ಅಲ್ಲದೇ, ಪೊಲೀಸರ ದಾರಿ ತಪ್ಪಿಸವುದಕ್ಕಾಗಿ, ಮುಖ್ಯ ಆರೋಪಿ ಸಚಿನ್‌ನ ಮೊಬೈಲ್ ಹಾಗೂ ಸ್ಕೂಟಿಯನ್ನು ವೀರೇಂದ್ರ ಎಂಬಾತ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದ ಎಂದು ಹೂಡಾ ಅವರು ತಿಳಿಸಿದ್ದಾರೆ.
ಐಸಿಯುವಿನಲ್ಲಿ ಚಿಕಿತ್ಸೆ
ತೀವ್ರ ಗಾಯಗಳಿಂದ ಬಳಲುತ್ತಿರುವ ಯುವತಿಗೆ ಐಸಿಯುದಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈಕೆ ಬುಧವಾರ ಮುಂಜಾನೆ 7.30ರ ಹೊತ್ತಿಗೆ ತನ್ನ ತಂಗಿ ಜತೆ ಪಿಎಸ್ ಮೋಹನ್ ಗಾರ್ಡನ್ ಏರಿಯಾದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್ನಲ್ಲಿ ಸಚಿನ್ ಮತ್ತು ಹರ್ಷಿತ್ ಆ್ಯಸಿಡ್ ಎರಚಿ ಪರಾರಿಯಾಗಿದ್ದರು. ಈ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹುಡುಗಿ ಅಡ್ಮಿಟ್ ಆಗಿರುವ ಸಫ್ದರ್ಜಂಗ್ ಆಸ್ಪತ್ರೆಗೆ ದ್ವಾರಕಾ ಜಿಲ್ಲೆಯ ಡಿಸಿಪಿ ಭೇಟಿಕೊಟ್ಟಿದ್ದಾರೆ. ಹುಡುಗಿಯ ಸಂಬಂಧಿಕರು, ಪಾಲಕರೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಇನ್ನು ಸಂತ್ರಸ್ತ ಹುಡುಗಿಯ ಮುಖ ಸುಟ್ಟು ಹೋಗಿದೆ. ಅಕ್ಕನ ಮೇಲೆ ಆ್ಯಸಿಡ್ ದಾಳಿ ಆಗುತ್ತಿದ್ದಂತೆ, ಜತೆಗಿದ್ದ ತಂಗಿ ಮನೆಗೆ ಓಡಿಹೋಗಿ ವಿಷಯ ತಿಳಿಸಿದ್ದಾಳೆ. ಬಳಿಕ ಮನೆಯವರೆಲ್ಲ ಸ್ಥಳಕ್ಕೆ ಓಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ | Video| ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ; ಉರಿ ತಾಳಲಾರದೆ ನೋವಿನಿಂದ ಕಿರುಚುತ್ತ ರಸ್ತೆ ತುಂಬ ಓಡಿದ ಹುಡುಗಿ