ನವದೆಹಲಿ: ಸಾಮಾಜಿಕ ಜಾಲತಾಣಗಳು ಮಾಹಿತಿ ರವಾನಿಸುವ ಮಾಧ್ಯಮಗಳ ಜತೆಗೆ ವಂಚನೆಗೂ ದಾರಿ ಮಾಡಿಕೊಟ್ಟಿವೆ. ಜನರಿಗೆ ಜಾಹೀರಾತು ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ (Cyber Fraud) ಮಾಡಲಾಗುತ್ತಿದೆ. ಇದಕ್ಕೆ, ನಿದರ್ಶನ ಎಂಬಂತೆ, ಒಂದು ಪ್ಲೇಟ್ ಫ್ರೀ ಥಾಲಿ ಆಸೆಗೆ ಬಿದ್ದ ದೆಹಲಿ ಮಹಿಳೆಯೊಬ್ಬರು 90 ಸಾವಿರ ರೂ. ಕಳೆದುಕೊಂಡಿದ್ದಾರೆ. ಒಂದು ಪ್ಲೇಟ್ ಥಾಲಿ ಖರೀದಿಸಿದರೆ, ಇನ್ನೊಂದು ಪ್ಲೇಟ್ ಉಚಿತ ಎಂದು ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿದ ಸವಿತಾ ಶರ್ಮಾ ಎಂಬ ಬ್ಯಾಂಕ್ ಉದ್ಯೋಗಿಯು App ಒಂದನ್ನು ಡೌನ್‌ಲೋಡ್ ಮಾಡಿಕೊಂಡು 90 ಸಾವಿರ ರೂ. ಕಳೆದುಕೊಂಡಿದ್ದಾರೆ.
ಒಂದು ಪ್ಲೇಟ್ ಉಚಿತ ಥಾಲಿಗಾಗಿ ಮಹಿಳೆಯು App ಡೌನ್‌ಲೋಡ್ ಮಾಡಿಕೊಂಡ ಬಳಿಕ ಅನಾಮಧೇಯ ಕರೆ ಬಂದಿದೆ. ನಿಮಗೆ ಉಚಿತ ಥಾಲಿ ಸಿಗಬೇಕು ಎಂದರೆ ಮೊದಲು ರಿಜಿಸ್ಟರ್ ಆಗಬೇಕು ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾನೆ. ಆಗ ಮಹಿಳೆಯ ಮೊಬೈಲ್‌ಗೆ ವಂಚಕನು ಲಿಂಕ್ ಕಳುಹಿಸಿದ್ದಾನೆ. ಲಿಂಕ್ ಮೇಲೆ ಮಹಿಳೆಯು ಕ್ಲಿಕ್ ಮಾಡಿದ್ದಾರೆ. ಇದಾದ ಬಳಿಕ ಮಹಿಳೆಯ ಅಕೌಂಟ್‌ನಿಂದ 40 ಸಾವಿರ ರೂ. ಹಾಗೂ 50 ಸಾವಿರ ರೂ. ಕಡಿತವಾಗಿದೆ. ಬಳಿಕ ಮಹಿಳೆಯು ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.
ನ್ಯಾಯಾಧೀಶರಿಗೇ ವಂಚಿಸಿದ್ದ ದುರುಳರು
ಕೆಲ ತಿಂಗಳ ಹಿಂದಷ್ಟೇ ಮಹಾರಾಷ್ಟ್ರದ ಪುಣೆಯಲ್ಲಿ ಆನ್‌ಲೈನ್ ವಂಚಕರು ನಿವೃತ್ತ ನ್ಯಾಯಾಧೀಶರೊಬ್ಬರಿಗೇ 1.67 ಲಕ್ಷ ರೂ. ವಂಚಿಸಿದ್ದರು. ಮಹಾರಾಷ್ಟ್ರದ ಪುಣೆ ನಗರದ ಬಾವ್‌ಧನ್ ಖುರ್ದ್‌ನಲ್ಲಿ ವಾಸಿಸುತ್ತಿರುವ 70 ವರ್ಷದ ನಿವೃತ್ತ ನ್ಯಾಯಾಧೀಶರಿಗೆ ಕೊರಿಯರ್ ಸೇವಾ ಸಿಬ್ಬಂದಿಯ ಸೋಗಿನಲ್ಲಿ ದುರುಳರು ವಂಚನೆ ಮಾಡಿದ್ದರು.
ಅಮೆರಿಕದಲ್ಲಿರುವ ತಮ್ಮ ಮೊಮ್ಮಗಳಿಗೆ ನಿವೃತ್ತ ನ್ಯಾಯಾಧೀಶರು ಕೆಲ ದಿನಗಳ ಹಿಂದೆ ಸ್ವೀಟ್ ಹಾಗೂ ಬಟ್ಟೆಗಳನ್ನು ಖಾಸಗಿ ಸಂಸ್ಥೆಯ ಮೂಲಕ ಕೊರಿಯರ್ ಮಾಡಿದ್ದರು. ಆದರೆ, ನಿವೃತ್ತ ನ್ಯಾಯಾಧೀಶರಿಗೆ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿದ್ದು, ಆತ ಕೊರಿಯರ್ ಸರ್ವಿಸ್ ಸಿಬ್ಬಂದಿ ಎಂಬುದಾಗಿ ಹೇಳಿಕೊಂಡಿದ್ದ. “ನೀವು ಕೊಟ್ಟಿರುವ ವಿಳಾಸ ತಪ್ಪಾಗಿದೆ, ಒಂದಷ್ಟು ಮಾಹಿತಿ ಕೊಡಿ” ಎಂಬುದಾಗಿ ಕೇಳಿದ್ದರು. ಇದನ್ನು ಅವರು ನಂಬಿದ್ದರು.
“ನೀವು ಕೊಟ್ಟಿರುವ ವಿಳಾಸ ತಪ್ಪಾಗಿರುವ ಕಾರಣ ಅದನ್ನು ಸರಿಪಡಿಸಬೇಕು ಎಂದರೆ ನೀವು 5 ರೂಪಾಯಿ ಪಾವತಿಸಬೇಕು. ನಿಮಗೆ ನಾವೊಂದು ಲಿಂಕ್ ಕಳುಹಿಸಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿ, ಹಣ ಪಾವತಿಸಿ” ಎಂದಿದ್ದಾರೆ. ಅದರಂತೆ, ನಿವೃತ್ತ ನ್ಯಾಯಾಧೀಶರು ಲಿಂಕ್ ಮೇಲೆ ಕ್ಲಿಕ್ ಮಾಡಿ, ಹಣ ಪಾವತಿಸಿದ್ದಾರೆ. ಆದರೆ, ಇದಾದ ಬಳಿಕ ರಿಟೈರ್ಡ್ ಜಡ್ಜ್ ಬ್ಯಾಂಕ್ ಖಾತೆಯಿಂದ 1,67,997 ಲಕ್ಷ ರೂ. ಕಡಿತವಾಗಿತ್ತು.
ಇದನ್ನೂ ಓದಿ: Cyber Crime : ಯುಪಿಐ ಮೂಲಕ ಹಣ ಕಳಿಸಿ, ಬ್ಯಾಂಕ್ ಖಾತೆಗೇ ಕನ್ನ! ಹೊಸ ಮಾದರಿ ವಂಚನೆ ಬಗ್ಗೆ ಇರಲಿ ಎಚ್ಚರ