ಚೆನ್ನೈ: ಅಂಕ ಸಾಧನೆ, ರ‍್ಯಾಂಕ್ ಬರಬೇಕು ಎಂಬ ಒತ್ತಡ, ಸಣ್ಣ ವಯಸ್ಸಿನಲ್ಲೇ ಎಂಜಿನಿಯರಿಂಗ್ ಮಾಡಬೇಕು, ಡಾಕ್ಟರ್ ಆಗಬೇಕು ಎಂಬ ದೊಡ್ಡ ಕನಸು ಕಾಣುವುದು, ಅಂದುಕೊಂಡಿದ್ದು ಆಗದಿದ್ದರೆ ಬದುಕುವುದೇ ವ್ಯರ್ಥ ಎಂಬ ಹಠದಿಂದಾಗಿ ಇತ್ತೀಚೆಗೆ ವಿದ್ಯಾರ್ಥಿಗಳು ಎರಡು ಅಂಕ ಕಡಿಮೆ ಬಂದರೂ ಆತ್ಮಹತ್ಯೆ (NEET Aspirant Suicide) ಮಾಡಿಕೊಳ್ಳುತ್ತಿರುವ ಪ್ರಕರಣಗಳು ಜಾಸ್ತಿಯಾಗಿವೆ. ಇದಕ್ಕೆ ನಿದರ್ಶನ ಎಂಬಂತೆ ತಮಿಳುನಾಡಿನಲ್ಲಿ ಕೋಚಿಂಗ್ ಸೆಂಟರ್‌ಗೆ ಪ್ರವೇಶ ನಿರಾಕರಿಸಲಾಯಿತು ಎಂದು ವಿದ್ಯಾರ್ಥಿನಿಯೊಬ್ಬಳು ರೈಲು ಚಲಿಸುತ್ತಿರುವಾಗ ಹಳಿ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಮಿಳುನಾಡಿನ ಅಬಥರನಪುರಂನ ನಿಶಾ (18)ಗೆ ನೀಟ್ ಅಧ್ಯಯನ ಮಾಡಬೇಕು ಎಂಬ ಬಯಕೆ ಇತ್ತು. ಆಕೆ ನೆಯ್‌ವೇಲಿಯಲ್ಲಿ ಕೋಚಿಂಗ್ ಕ್ಲಾಸ್‌ಗೆ ಪ್ರವೇಶ ಪಡೆಯಬೇಕು ಎಂದು ಬಯಸಿದ್ದಳು. ಆದರೆ, ಕೋಚಿಂಗ್ ಸೆಂಟರ್‌ನಿಂದ ಆಕೆಯ ಪ್ರವೇಶ ನಿರಾಕರಣೆ ಮಾಡಿದ ಕಾರಣ ಮನನೊಂದು ವಂಡಲೂರ್ ರೈಲು ನಿಲ್ದಾಣದ ಬಳಿ ರೈಲು ಚಲಿಸುತ್ತಿದ್ದಾಗ ಹಳಿ ಮೇಲೆ ಜಿಗಿದಿದ್ದಾಳೆ. ರೈಲಿನ ಪೈಲಟ್ ರೈಲು ನಿಲ್ಲಿಸಲು ಪ್ರಯತ್ನಿಸಿದರೂ ಅಷ್ಟೊತ್ತಿಗಾಗಲೇ ಆಕೆ ಚಕ್ರಗಳ ಅಡಿಗೆ ಸಿಲುಕಿದ್ದಳು ಎಂದು ತಿಳಿದುಬಂದಿದೆ.
ರೈಲು ರಕ್ಷಣಾ ಪಡೆಯ (RPF) ಸಿಬ್ಬಂದಿಯೂ ಕೂಡಲೇ ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. “ನೆಯ್‌ವೇಲಿಯ ಇಂದಿರಾ ನಗರದಲ್ಲಿರುವ ಆಕಾಶ್+ಬೈಜೂಸ್ (Akash+Byju’s) ಸೆಂಟರ್‌ಗೆ ಪ್ರವೇಶ ಪಡೆಯಲು ಇಚ್ಛಿಸಿದ್ದಳು. ಅಭ್ಯರ್ಥಿಗಳು ಪಡೆಯುವ ಅಂಕಗಳ ಆಧಾರದ ಮೇಲೆ ತರಬೇತಿ ಕೇಂದ್ರವು ಪ್ರವೇಶ ನೀಡುತ್ತದೆ. ನನ್ನ ಮಗಳು ಟೆಸ್ಟ್‌ನಲ್ಲಿ 399 ಅಂಕಗಳನ್ನು ಪಡೆದಿದ್ದಳು. ಆದರೆ, 400ಕ್ಕೂ ಅಧಿಕ ಅಂಕ ಪಡೆದವರಿಗೆ ಕೋಚಿಂಗ್ ಸೆಂಟರ್ ಪ್ರವೇಶ ನೀಡಿದೆ. ಇದರಿಂದಾಗಿ ನನ್ನ ಮಗಳು ಖಿನ್ನತೆಗೊಳಗಾಗಿದ್ದಳು” ಎಂದು ನಿಶಾಳ ತಂದೆ ಉಧೀರ್‌ಭಾರತಿ ತಿಳಿಸಿದ್ದಾರೆ.
ದೇಶದಲ್ಲಿ ಎಂಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನೀಟ್ ಕೈಗೊಳ್ಳಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದವರು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಾರೆ. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ನೀಟ್‌ಗೆ ಹೆಚ್ಚಿನ ತರಬೇತಿ ಪಡೆಯುತ್ತಾರೆ. ಆದರೆ, ಕೇವಲ ಕೋಚಿಂಗ್ ಕ್ಲಾಸ್‌ಗೆ ಪ್ರವೇಶ ಸಿಗಲಿಲ್ಲ ಎಂದು ವಿದ್ಯಾರ್ಥಿನಿಯು ಆತ್ಮಹತ್ಯೆ ಮಾಡಿಕೊಂಡಿರುವುದು ವಿದ್ಯಾರ್ಥಿಗಳ ಮೇಲೆ ಎಷ್ಟು ಒತ್ತಡ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ: Student death : ಪರೀಕ್ಷೆ ಭಯದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ; ನದಿಯಲ್ಲಿ ಶವ ಪತ್ತೆ