ಕೋಲ್ಕೊತಾ: ಕೋಲ್ಕೊತಾದಿಂದ ಮಂಗಳವಾರ ಚೀನಾಕ್ಕೆ ಹಾರಾಟ ಆರಂಭಿಸಿದ್ದ ಸ್ಪೈಸ್‌ಜೆಟ್ ಬೋಯಿಂಗ್ ೭೩೭ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆಯಾದ್ದರಿಂದ, ವಿಮಾನ ಮತ್ತೆ ಕೋಲ್ಕತಾಗೆ ಹಿಂತಿರುಗಿತು.
ಟೇಕಾಫ್ ಆದ ಬಳಿಕ ವಿಮಾನದಲ್ಲಿ ಹವಾಮಾನ ತಿಳಿಸುವ ರಾಡಾರ್ ಸ್ಥಗಿತವಾಗಿರುವುದನ್ನು ಗಮನಿಸಿದ ಪೈಲಟ್‌ಗಳು ವಿಮಾನವನ್ನು ಕೋಲ್ಕತಾಗೆ ಹಿಂತಿರುಗಿಸಿದರು. ಸರಕು ಸಾಗಣೆ ಮಾಡುವ ವಿಮಾನ ಇದಾಗಿತ್ತು.
ಕೋಲ್ಕತಾದಿಂದ ಚೀನಾದ ಚೊಂಗ್‌ಕಿಂಗ್‌ಗೆ ವಿಮಾನ ಹಾರಾಟ ಆರಂಭಿಸಿತ್ತು. ಆದರೆ ರಾಡಾರ್‌ನಲ್ಲಿ ಹವಾಮಾನ ವಿವರಗಳು ಕಾಣಿಸದ ಕಾರಣ ಪೈಲಟ್ ಸಿಬ್ಬಂದಿ ವಿಮಾನವನ್ನು ಕೋಲ್ಕತಾಗೆ ಹಿಂತಿರುಗಿಸಿದರು ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದ್ದಾರೆ.
18 ದಿನಗಳಲ್ಲಿ ೮ ಸಲ ತಾಂತ್ರಿಕ ದೋಷ
ಸ್ಪೈಸ್ ಜೆಟ್‌ನಲ್ಲಿ ಕಳೆದ ೧೮ ದಿನಗಳಲ್ಲಿ ೮ ಸಲ ತಾಂತ್ರಿಕ ದೋಷಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA) ಏರ್‌ಲೈನ್‌ಗೆ ಸೂಚಿಸಿದೆ. ಕಳೆದ ಮಂಗಳವಾರ ದಿಲ್ಲಿಯಿಂದ ದುಬೈಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿದ್ದರಿಂದ ಕರಾಚಿಯಲ್ಲಿ ಇಳಿಸಲಾಗಿತ್ತು.