Site icon Vistara News

Diwali Bonus: ದೀಪಾವಳಿ ಬೋನಸ್‌ ಕೊಡದ ಮಾಲೀಕನನ್ನೇ ಕೊಂದ ಇಬ್ಬರು ಕಾರ್ಮಿಕರು

Diwali Bonus

Dhaba owner strangled, beaten to death by staff for not giving diwali bonus In Maharashtra

ಮುಂಬೈ: ದೇಶಾದ್ಯಂತ ಸಡಗರ-ಸಂಭ್ರಮದಿಂದ ದೀಪಾವಳಿ (Deepavali 2023) ಆಚರಣೆ ಮಾಡಲಾಗುತ್ತಿದೆ. ಅದರಲ್ಲೂ, ಗಾರ್ಮೆಂಟ್ಸ್‌ ಕಂಪನಿಗಳಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳು ಬೋನಸ್‌, ಗಿಫ್ಟ್‌, ಸ್ವೀಟ್‌ ಬಾಕ್ಸ್‌ ನೀಡಿವೆ. ಇದರಿಂದಾಗಿ ಉದ್ಯೋಗಿಗಳ ಸಂಭ್ರಮವು ದ್ವಿಗುಣವಾಗಿದೆ. ಇದರ ಬೆನ್ನಲ್ಲೇ, ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾಲೀಕನು ದೀಪಾವಳಿ ಬೋನಸ್‌ (Diwali Bonus) ಕೊಡಲಿಲ್ಲ ನೌಕರರಿಬ್ಬರು ಆತನನ್ನು ಕೊಲೆ ಮಾಡಿದ್ದಾರೆ.

ಹೌದು, ಮಹಾರಾಷ್ಟ್ರದ ನಾಗ್ಪುರ ನಿವಾಸಿಯಾದ ರಾಜು ಭಾವುರಾವ್‌ ಧೆಂಗ್ರೆ (48) ಎಂಬುವವರು ದೀಪಾವಳಿ ಬೋನಸ್‌ ನೀಡದ ಕಾರಣಕ್ಕಾಗಿ ಹತ್ಯೆಗೀಡಾಗಿದ್ದಾರೆ. ರಾಜು ಭಾವುರಾವ್‌ ಧೆಂಗ್ರೆ ಅವರು ನಾಗ್ಪುರ ಡಾಬಾದ ಮಾಲೀಕರಾಗಿದ್ದು, ಇವರನ್ನು ಶನಿವಾರ (ನವೆಂಬರ್‌ 11) ರಾತ್ರಿ ಹತ್ಯೆ ಮಾಡಲಾಗಿದೆ. ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಚೋಟು ಹಾಗೂ ಆದಿ ಎಂಬುವರೇ ಧೆಂಗ್ರೆ ಅವರನ್ನು ಕಟ್ಟಿಹಾಕಿ, ಚಾಕು ಇರಿದು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Crime logo

ರಾತ್ರೋರಾತ್ರಿ ಜಗಳ

ಚೋಟು ಹಾಗೂ ಆದಿಯು ಕೆಲ ತಿಂಗಳ ಹಿಂದಷ್ಟೇ ಡಾಬಾದಲ್ಲಿ ಕೆಲಸಕ್ಕೆ ಸೇರಿದ್ದಾರೆ. ಇಬ್ಬರೂ ಮಧ್ಯಪ್ರದೇಶದವರಾಗಿದ್ದು, ಏಜೆಂಟ್‌ ಮೂಲಕ ಕೆಲಸಕ್ಕೆ ಸೇರಿದ್ದಾರೆ. ಊರು ಬಿಟ್ಟು ಊರು ಬಂದವರು ಎಂದು ರಾಜು ಭಾವುರಾವ್‌ ಧೆಂಗ್ರೆ ಅವರು ಒಳ್ಳೆಯ ಸಂಬಳ, ವಸತಿ, ಊಟ ಕೊಟ್ಟು ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ, ದೀಪಾವಳಿ ಬೋನಸ್‌ ಹಾಗೂ ರಜೆಯ ವಿಷಯಕ್ಕೆ ಧೆಂಗ್ರೆ ಹಾಗೂ ಇಬ್ಬರು ಕೆಲಸಗಾರರ ಮಧ್ಯೆ ಜಗಳ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Bonus Declared: ರೈಲ್ವೆ ಇಲಾಖೆಯ ಸಿಬ್ಬಂದಿಗೆ 78 ದಿನಗಳ ವೇತನ ಬೋನಸ್ ಘೋಷಿಸಿದ ಕೇಂದ್ರ!

ಊರಿಗೆ ಹೋಗಲು ರಜೆ ಬೇಕು ಹಾಗೂ ದೀಪಾವಳಿ ಬೋನಸ್‌ ಕೊಡಬೇಕು ಎಂದು ಇಬ್ಬರೂ ಆಗ್ರಹಿಸಿದ್ದಾರೆ. ಆಗ ಇದಕ್ಕೆ ರಾಜು ಭಾವುರಾವ್‌ ಧೆಂಗ್ರೆ ನಿರಾಕರಿಸಿದ್ದಾರೆ. ರಾಜು ಭಾವುರಾವ್‌ ಧೆಂಗ್ರೆ ಅವರು ಮಲಗುವ ತನಕ ಕಾದ ಚೋಟು ಹಾಗೂ ಆದಿ, ಮಲಗಿಕೊಂಡ ಬಳಿಕ ರಾಜು ಭಾವುರಾವ್‌ ಧೆಂಗ್ರೆ ಅವರನ್ನು ಹತ್ಯೆ ಮಾಡಿದ್ದಾರೆ. ಮಾಲೀಕನ ಕಾರನ್ನೇ ಕದ್ದ ಅವರು ಪರಾರಿಯಾಗಿದ್ದಾರೆ. ಅವರು ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುವಾಗ ಕಾರು ಅಪಘಾತವಾಗಿದ್ದು, ಅದನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು, ಇಬ್ಬರಿಗಾಗಿ ಬಲೆ ಬೀಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version