ಮುಂಬಯಿ: ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ವಿವಿಧ ಸುಳ್ಳು (fake) ಕ್ರಿಮಿನಲ್ ಪ್ರಕರಣಗಳನ್ನು (criminal case) ದಾಖಲಿಸುವುದು ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಬಾಂಬೆ ಹೈಕೋರ್ಟ್‌ನ (bombay high court) ಔರಂಗಾಬಾದ್ ಪೀಠ (Aurangabad bench) ಹೇಳಿದೆ. ವಿಚ್ಛೇದನಕ್ಕೆ ದಂಪತಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಪತಿ ಸಲ್ಲಿಸಿದ ಮನವಿಯ ಮೇರೆಗೆ ಕೆಳ ನ್ಯಾಯಾಲಯವು ದಂಪತಿಗೆ ವಿಚ್ಛೇದನವನ್ನು ನೀಡಿದರೆ, ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಲು ಪತ್ನಿ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ವೈ.ಜಿ. ಖೋಬ್ರಾಗಡೆ ಅವರ ಪೀಠವು ವಿಚಾರಣೆ ನಡೆಸುತ್ತಿದೆ. ದಂಪತಿಗೆ ನೀಡಿರುವ ವಿಚ್ಛೇದನವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. 2004 ರಲ್ಲಿ ಪರ್ಭಾನಿಯಲ್ಲಿ ವಿವಾಹವಾದ ದಂಪತಿ 2012 ರವರೆಗೆ ಒಟ್ಟಿಗೆ ವಾಸಿಸುತ್ತಿದ್ದರು. ಅವರಿಗೆ ಒಬ್ಬ ಮಗಳು ಇದ್ದಾಳೆ.
ಇದನ್ನೂ ಓದಿ: Physical Abuse: ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನಿಗೆ 106 ವರ್ಷ ಜೈಲು ಶಿಕ್ಷೆ
2012ರಲ್ಲಿ ಹೆಂಡತಿ ತನ್ನನ್ನು ತೊರೆದು ಮಗಳೊಂದಿಗೆ ತವರು ಮನೆಯಲ್ಲಿ ಹೆತ್ತವರೊಂದಿಗೆ ವಾಸಿಸುತ್ತಿದ್ದಾಳೆ ಎಂದು ವ್ಯಕ್ತಿ ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾನೆ. ಇದಾದ ಬಳಿಕ 2015ರಲ್ಲಿ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಪತ್ನಿ ಮನವಿ ಸಲ್ಲಿಸಿದ್ದು, ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿದ್ದರಿಂದ ಪತ್ನಿ ಗಂಡನೊಂದಿಗೆ ವಾಸಿಸಲು ಹೋಗಿದ್ದರು. ಆದರೆ ಆತ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಪತ್ನಿ ಗಂಡನ ವಿರುದ್ಧ ನಾಪತ್ತೆ ದೂರನ್ನು ದಾಖಲಿಸಿದ್ದರು. ಅವರು ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಕಾನೂನು ಹೋರಾಟವನ್ನು ಪ್ರಾರಂಭಿಸಿದರು.
ಪತ್ನಿ ತನ್ನ ಮತ್ತು ತನ್ನ ಕುಟುಂಬ ಸದಸ್ಯರ ವಿರುದ್ಧ ಸುಳ್ಳು ಕ್ರಿಮಿನಲ್ ದೂರುಗಳು ಸೇರಿದಂತೆ ವಿವಿಧ ಕೇಸುಗಳನ್ನು ದಾಖಲಿಸಿದ್ದಾರೆ. ಈ ಸುಳ್ಳು ದೂರುಗಳಿಂದಾಗಿ ತಾನು ಮತ್ತು ತನ್ನ ಕುಟುಂಬ ಸದಸ್ಯರು ಮಾನಸಿಕ ಕ್ರೌರ್ಯವನ್ನು ಅನುಭವಿಸಿರುವುದಾಗಿ ವ್ಯಕ್ತಿ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಅಲ್ಲದೇ ಪತ್ನಿ ತನ್ನ ತಂದೆ ಮತ್ತು ಸಹೋದರನ ವಿರುದ್ಧವೂ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಕಲಿ ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ . ಅನಂತರ ಅವರನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಲಾಯಿತು, ಆದರೆ ಪತ್ನಿಯಿಂದಾಗಿ ತನ್ನ ಕುಟುಂಬ ಸದಸ್ಯರು ಆಘಾತವನ್ನು ಅನುಭವಿಸಿದ್ದಾರೆ ಮತ್ತು ಸಮಾಜದಲ್ಲಿ ಅವರ ಖ್ಯಾತಿಯನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ತನಗೆ ಅತ್ತೆಯಂದಿರು ಕಿರುಕುಳ ನೀಡಿರುವುದಾಗಿ ಪ್ರಕರಣ ದಾಖಲಿಸಿಸಿರುವುದಾಗಿ ಮಹಿಳೆ ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.
ನ್ಯಾ. ಖೋಬ್ರಗಡೆ ಅವರು ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿದ ಅನಂತರ, ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸುವುದು ಮತ್ತು ದಾಂಪತ್ಯದ ಹಕ್ಕುಗಳನ್ನು ಮರುಸ್ಥಾಪಿಸುವುದು ಕ್ರೌರ್ಯವಲ್ಲ. ಆದರೆ, ಪತಿ, ಅವರ ತಂದೆ, ಸಹೋದರ ಮತ್ತು ಇತರ ಕುಟುಂಬ ಸದಸ್ಯರ ವಿರುದ್ಧ ಪೊಲೀಸ್ ಅಧಿಕಾರಿಗಳಿಗೆ ವಿವಿಧ ಸುಳ್ಳು, ಆಧಾರರಹಿತ ದೂರುಗಳನ್ನು ಸಲ್ಲಿಸುವುದು ಖಂಡಿತವಾಗಿಯೂ ಕ್ರೌರ್ಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳಿದ್ದಾರೆ.
ಮಹಿಳೆಯ ಕಡೆಯಿಂದ ಕ್ರೌರ್ಯವಿದೆ ಎಂದು ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪೀಠ ಒಪ್ಪಿತು. ದಂಪತಿಗೆ ವಿಚ್ಛೇದನ ನೀಡುವ ಕೆಳ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಹೇಳಿ ಹೈಕೋರ್ಟ್ ಮಹಿಳೆಯ ಅರ್ಜಿಯನ್ನು ವಜಾಗೊಳಿಸಿದೆ.