ಚಂಡೀಗಢ: ಮಾಜಿ ರೂಪದರ್ಶಿ, ಮೋಸ್ಟ್ ವಾಂಟೆಡ್ ದರೋಡೆಕೋರನಾಗಿದ್ದ ಸಂದೀಪ್ ಗಡೋಲಿಯ ಮಾಜಿ ಪ್ರೇಯಸಿ ದಿವ್ಯಾ ಪಹುಜಾ (Divya Pahuja) ಅವರ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮರಣೋತ್ತರ ವರದಿಯಿಂದ (Post Mortem Report ತಿಳಿದುಬಂದಿದೆ. ಹರಿಯಾಣದ ಹಿಸಾರ್‌ನಲ್ಲಿರುವ ಅಗ್ರೋಹ ಮೆಡಿಕಲ್ ಕಾಲೇಜ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ದಿವ್ಯಾ ಪಹುಜಾ ಅವರ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದಿವ್ಯಾ ಪಹುಜಾ ಅವರ ತಲೆಯಿಂದ ಗುಂಡು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.
ದಿವ್ಯಾ ಪಹುಜಾ ಗೆಳೆಯ, ಹೋಟೆಲ್ ಮಾಲೀಕ ಅಭಿಜಿತ್ ಸಿಂಗ್‌ನಿಂದ ಎರಡು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಮಹಿಳಾ ವೈದ್ಯರು ಸೇರಿ ನಾಲ್ವರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಇದಾದ ಬಳಿಕ ಆಕೆಯ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಗುರುಗ್ರಾಮದಲ್ಲಿ ದಿವ್ಯಾ ಪಹುಜಾ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸ್ನೇಹಿತನಿಂದಲೇ ಹತ್ಯೆಯಾಗಿದ್ದ ದಿವ್ಯಾ ಪಹುಜಾ
27 ವರ್ಷದ ಪಹುಜಾ ಅವರನ್ನು ಜನವರಿ 2ರಂದು ಗುರುಗ್ರಾಮದ ಹೋಟೆಲ್ ಕೋಣೆಯೊಂದರಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಆಕೆಯ ಸ್ನೇಹಿತ ಮತ್ತು ಹೋಟೆಲ್ ಮಾಲಕ ಅಭಿಜಿತ್ ಗುಂಡಿಕ್ಕಿ ಹತ್ಯೆ ಮಾಡಿದ್ದ. ಬಳಿಕ ಶವವನ್ನು ಬಿಎಂಡಬ್ಲ್ಯು ಕಾರಿನಲ್ಲಿಟ್ಟು ಅಭಿಜಿತ್ ಸಹಚರರಾದ ಬಾಲರಾಜ್ ಮತ್ತು ರವಿ ತೆಗೆದುಕೊಂಡು ಹೋಗಿದ್ದರು. ತನಿಖೆ ವೇಳೆ ಪಟಿಯಾಲ ಬಸ್ ನಿಲ್ದಾಣದ ಆವರಣದಲ್ಲಿ ನಿಂತಿದ್ದ ಬಿಎಂಡಬ್ಲ್ಯು ಕಾರು ಪತ್ತೆಯಾಗಿತ್ತು. ಹರಿಯಾಣದ ತೊಹ್ನಾದ ಕಾಲುವೆಯೊಂದರಲ್ಲಿ ಜನವರಿ 13ರಂದು ದಿವ್ಯಾ ಪಹುಜಾ ಶವ ಪತ್ತೆಯಾಗಿತ್ತು.
ಯಾರಿವರು ದಿವ್ಯಾ ಪಹುಜಾ?
ಈಕೆ 2016ರಲ್ಲಿ ಗುರುಗ್ರಾಮ್‌ನ ಮೋಸ್ಟ್ ವಾಂಟೆಡ್ ದರೋಡೆಕೋರನಾಗಿದ್ದ ಸಂದೀಪ್ ಗಡೋಲಿಯ ಗರ್ಲ್‌ಫ್ರೆಂಡ್ ಆಗಿದ್ದಳು. ತನ್ನ ಬಾಯ್‌ಫ್ರೆಂಡ್‌ನ ನಕಲಿ ಎನ್‌ಕೌಂಟರ್‌ಗೆ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಪಹುಜಾ ಏಳು ವರ್ಷಗಳ ಕಾಲ ಜೈಲಿನಲ್ಲಿದ್ದಳು. ಕಳೆದ ವರ್ಷ ಜುಲೈನಲ್ಲಿ ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದಳು.
ಜನವರಿ 1ರಂದು ತನ್ನ ಸ್ನೇಹಿತ ಅಭಿಜಿತ್ ಸಿಂಗ್‌ನೊಂದಿಗೆ ಈಕೆ ಹೊರಗೆ ಹೋಗಿದ್ದಾಳೆ ಮತ್ತು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಕುಟುಂಬದಿಂದ ಗುರುಗ್ರಾಮ್‌ನ ಸೆಕ್ಟರ್ 14 ಪೊಲೀಸ್ ಠಾಣೆಯ ಅಧಿಕಾರಿಗಳು ದೂರು ಸ್ವೀಕರಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಗುರುಗ್ರಾಮ್‌ದಲ್ಲಿರುವ ಹೋಟೆಲ್ ಸಿಟಿ ಪಾಯಿಂಟ್‌ನಲ್ಲಿ ಆಕೆ ತಂಗಿದ್ದು ತಿಳಿದುಬಂದಿತ್ತು.
ಇದನ್ನೂ ಓದಿ: Divya Pahuja: ದಿವ್ಯಾ ಪಹುಜಾ ಶವ ಪತ್ತೆ; ಕಾಲುವೆಯಲ್ಲಿತ್ತು ಮಾಜಿ ರೂಪದರ್ಶಿಯ ಮೃತದೇಹ
ಇದು ಅಭಿಜಿತ್ ಸಿಂಗ್ ಒಡೆತನದಲ್ಲಿದೆ. ಪಹುಜಾಳ ಫೋನ್ ಹಲವಾರು ಗಂಟೆಗಳ ಕಾಲ ಸ್ವಿಚ್ ಆಫ್ ಆಗಿತ್ತು. ಪೊಲೀಸರು ಹೋಟೆಲ್‌ಗೆ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಾರಿಡಾರ್‌ನಲ್ಲಿ ಶವವನ್ನು ಶೀಟ್‌ನಲ್ಲಿ ಸುತ್ತಿ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿತ್ತು. ಮಾಡೆಲ್ ಹತ್ಯೆಗೆ ಸಂಬಂಧಿಸಿ ಸಿಂಗ್ ಮತ್ತು ಅವನ ಇಬ್ಬರು ಸಹಾಯಕರನ್ನು ಬಂಧಿಸಲಾಗಿದೆ. ಮೃತದೇಹವನ್ನು ತನ್ನ ಬಿಎಂಡಬ್ಲ್ಯುನಲ್ಲಿ ಹಾಕಿ ಅದು ಸಿಗದಂತೆ ವಿಲೇವಾರಿ ಮಾಡಲು ಸಿಂಗ್ ತನ್ನ ಸಹಾಯಕರಿಗೆ ₹10 ಲಕ್ಷ ನೀಡಿದ್ದ ಎನ್ನುವುದು ತಿಳಿದು ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ