Site icon Vistara News

ಡಿಜೆ ವ್ಯಾನ್‌ನಲ್ಲಿ ವಿದ್ಯುದಾಘಾತ: 10 ಮಂದಿ ದಾರುಣ ಸಾವು, ಹಲವರು ಗಂಭೀರ

DJ vehicle

ಕೂಚ್‌ ಬಿಹಾರ್‌ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಕೂಚ್‌ ಬಿಹಾರ್‌ನಲ್ಲಿ ಪ್ರಯಾಣಿಕರು ತುಂಬಿದ್ದ ಡಿಜೆ ಪಿಕಪ್‌ ವ್ಯಾನ್‌ನಲ್ಲಿ ವಿದ್ಯುತ್‌ ಆಘಾತ ಸಂಭವಿಸಿ ೧೦ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾನುವಾರ ರಾತ್ರಿ ೧೨ ಗಂಟೆಯ ಹೊತ್ತಿಗೆ ನಡೆದ ದುರಂತದಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.

ಡಿಜೆ ಸಿಸ್ಟಮ್‌ಗೆ ಸಂಬಂಧಿಸಿದ ಜನರೇಟರ್‌ನಲ್ಲಿ ವಯರಿಂಗ್‌ ಶಾರ್ಟ್‌ ಸರ್ಕ್ಯೂಟ್‌ ಆಗಿ ಇಡೀ ವಾಹನದಲ್ಲಿ ವಿದ್ಯುತ್‌ ಹರಿದು ಈ ದುರಂತ ಸಂಭವಿಸಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ವ್ಯಾನ್‌ ಕೂಚ್‌ಬಿಹಾರ್‌ನಿಂದ ಜಲ್ಪೇಶ್‌ ಕಡೆಗೆ ಹೋಗುತ್ತಿತ್ತು. ಘಟನೆ ನಡೆದ ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಹತ್ತು ಮಂದಿ ಆಗಲೇ ಪ್ರಾಣ ಕಳೆದುಕೊಂಡಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ವಾಹನದಲ್ಲಿ ಒಟ್ಟು ೨೭ ಮಂದಿ ಇದ್ದರು.

ಮೇಖಲಿಗಂಜ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಧಾರ್ಲಾ ಸೇತುವೆಯ ಮೇಲೆ ರಾತ್ರಿ ೧೨ ಗಂಟೆಗೆ ಘಟನೆ ನಡೆದಿದೆ. ಜನರೇಟರ್‌ನ್ನು ಹೊತ್ತು ಸಾಗುತ್ತಿದ್ದ ವಾಹನ ವಿದ್ಯುತ್‌ ಆಘಾತಕ್ಕೆ ಒಳಗಾಯಿತು ಎಂದು ಮತಭಂಗದ ಎಎಸ್‌ಪಿ ಆಗಿರುವ ಅಮಿತ್‌ ವರ್ಮಾ ತಿಳಿಸಿದ್ದಾರೆ.

ವಾಹನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಸೀತಾಳ್‌ ಕುಚಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರದೇಶದವರು. ಅವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನದ ಚಾಲಕ ತಪ್ಪಿಸಿಕೊಂಡು ಪರಾರಿಯಾಗಿದ್ದು, ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಜನರೇಟರ್‌ ಹೊತ್ತೊಯ್ಯುವ ವಾಹನದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಅಪಾಯಕಾರಿ ಮತ್ತು ಕಾನೂನುಬಾಹಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ| Elephanth Death | ವಿದ್ಯುತ್‌ ತಂತಿ ಸ್ಪರ್ಶಿಸಿ ಕಾಡಾನೆಗಳ ಸಾವು

Exit mobile version