ನವ ದೆಹಲಿ: ಅಮೆರಿಕದ ಡಾಕ್ಟರನೊಬ್ಬ 12 ಮಹಿಳೆಯರನ್ನು ಕೃತಕವಾಗಿ ಗರ್ಭವತಿಯರನ್ನಾಗಿಸಲು ತನ್ನದೇ ವೀರ್ಯ ಬಳಸಿ ಸಿಕ್ಕಿ ಬಿದ್ದಿದ್ದಾನೆ.
ಈತನ ಹೆಸರು ಡಾ.ಜೋನ್ಸ್. ಇವನು ಹಾಗೂ ಇವನು ಕೆಲಸ ಮಾಡುತ್ತಿದ್ದ ವಿಮೆನ್ಸ್ ಹೆಲ್ತ್‌ಕೇರ್ ಆಫ್ ವೆಸ್ಟರ್ನ್ ಕೊಲರಾಡೊ ಈಗ ಪೇಚಿಗೆ ಸಿಲುಕಿವೆ. ಈತನ ಮೇಲೆ ವೈದ್ಯಕೀಯ ನಿರ್ಲಕ್ಷ್ಯ, ವಂಚನೆ, ಒಪ್ಪಂದದ ಉಲ್ಲಂಘನೆ ಕೇಸುಗಳನ್ನು ಹಾಕಲಾಗಿದೆ.
ಈತನಿಂದ ವಂಚನೆಗೆ ಒಳಗಾಗಿರುವ ಒಬ್ಬಾಕೆ ಮಹಿಳೆಗೆ ಅಮೆರಿಕದ ಕೊಲರಾಡೊ ನ್ಯಾಯಾಲಯ 8.75 ಕೋಟಿ ಡಾಲರ್ ಪರಿಹಾರ ಕೊಡುವಂತೆ ಆದೇಶಿಸಿದೆ. ತನ್ನ ತಾಯಿಗೆ ಈತ ಅಜ್ಞಾತ ದಾನಿಯ ವೀರ್ಯ ಎಂದು ತನ್ನದೇ ವೀರ್ಯ ನೀಡಿ ವಂಚಿಸಿದ್ದಾನೆ ಎಂದು ಮಹಿಳೆಯೊಬ್ಬಳು ದೂರು ನೀಡಿದ್ದರು. ತನಿಖೆ ನಡೆಸಿದಾಗ, ಈತ 1975ರಿಂದ 1995ರ ನಡುವೆ ಇನ್ನೂ ಕನಿಷ್ಠ 11 ಮಂದಿಗೆ ಹೀಗೆ ವಂಚಿಸಿರಬಹುದು ಎಂಬುದು ಬಯಲಾಗಿದೆ.
2019ರಲ್ಲಿ ಈತನ ಮೇಲೆ ಕೊಲರಾಡೊದ ಮೈಯಾ ಎಮನ್ಸ್ ಬೋರಿಂಗ್ ಮತ್ತಿತರ 7 ಕುಟುಂಬಗಳು ಕೇಸು ದಾಖಲಿಸಿ ಕೋರ್ಟಿಗೆ ಹೋಗಿದ್ದವು. ಇದರಲ್ಲಿ 5 ಕುಟುಂಬಗಳು ದೊಡ್ಡ ಮೊತ್ತದ ಪರಿಹಾರ ಧನಕ್ಕೆ ಕೋರ್ಟಿನ ಹೊರಗೆ ಪ್ರಕರಣವನ್ನು ಸೆಟಲ್ ಮಾಡಿಕೊಂಡಿವೆ.
ನಿವೃತ್ತನಾಗಿರುವ ಡಾ.ಜೋನ್ಸ್‌ಗೆ ಈಗ 80 ವರ್ಷ. ತನ್ನ ಮೇಲಿನ ಆರೋಪವನ್ನು ಆತ ಪೂರ್ತಿ ಅಲ್ಲಗಳೆದಿಲ್ಲ. ʻʻನಾನಿದನ್ನು ನಿರಾಕರಿಸುವುದಿಲ್ಲ. ಒಪ್ಪಿಕೊಳ್ಳುವುದೂ ಇಲ್ಲʼʼ ಎಂದಿದ್ದಾನೆ.
ಕೆಲವು ತಿಂಗಳ ಹಿಂದೆ ಭಾರತದಲ್ಲೂ ಇಂಥ ಪ್ರಕರಣಗಳು ನಡೆಯುತ್ತಿವೆ ಎಂಬ ದೂರುಗಳು ಹುಟ್ಟಿಕೊಂಡಿದ್ದವು. ಸಮರ್ಥ ವೀರ್ಯದಾನಿಗಳ ಕೊರತೆ ಹಾಗೂ ವೀರ್ಯದಾನಿಗಳಿಗೆ ನೀಡಬೇಕಾದ ಹಣವನ್ನು ಉಳಿಸಲು ಕೆಲವು ಫರ್ಟಿಲಿಟಿ ಕ್ಲಿನಿಕ್‌ಗಳು ಇಂಥ ಅಡ್ಡದಾರಿ ಹಿಡಿಯುತ್ತಿವೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: Honey trap | ಡಾಕ್ಟರ್ ರೂಮ್‌ಗೆ ಯುವತಿ ಕಳುಹಿಸಿ ಕೋಟಿ ರೂ. ಕಿತ್ತಿದ್ದ ಟೀಮ್ ಅರೆಸ್ಟ್