ನವದೆಹಲಿ: ಇಂಗ್ಲಿಷ್ ಭಾಷಾ ವ್ಯಾಮೋಹ ಇಲ್ಲದೇ ಇರುವವರು ಯಾರು ಹೇಳಿ? ಇಂಗ್ಲಿಷ್ ಭಾಷೆ ಬರದೇ ಇದ್ದರೂ ಕಂಗ್ಲಿಷ್ ಆದರೂ ಮಾತನಾಡಲು ಮುಂದಾಗುತ್ತಾರೆ. ಈ ಭರಾಟೆಯಲ್ಲಿ ಅಪಾರ್ಥವಾಗಿ ಅವಾಂತರ ಆಗುವುದಿದೆ. ದಿಲ್ಲಿಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಇಂಗ್ಲಿಷ್ ಪದದ ಎಡವಟ್ಟಿನಿಂದಾಗಿ ಯುವಕನೊಬ್ಬ ಅನ್ಯಾಯವಾಗಿ ಹಲ್ಲೆಗೆ ಒಳಗಾಗಿದ್ದಾನೆ. ಇಷ್ಟೇ ಅಲ್ಲ, ಆಕ್ರಮಣಕಾರಿ ನಾಯಿ ಎಂದೇ ಕರೆಯಲಾಗುವ ಪಿಟ್ ಬುಲ್ ದಾಳಿಯಿಂದಲೂ ಗಂಭೀರವಾಗಿ ಗಾಯಗೊಂಡಿದ್ದಾನೆ!
ದಿಲ್ಲಿಯ ಮಾಳವೀಯ ನಗರದಲ್ಲಿ ಶುಕ್ರವಾರ ರಾತ್ರಿ ಕುಡಿಯುವ ನೀರು ತರಲು ಟ್ಯಾಟೂ ಕಲಾವಿದ 27 ವರ್ಷದ ಥಾಪಾ ಕಿರಾಣಿ ಅಂಗಡಿಗೆ ಹೋಗಿದ್ದ. ನೀರು ಕೊಡಿ ಎಂದು ಇಂಗ್ಲಿಷ್‌ನಲ್ಲಿ ಕೇಳಿದ್ದ. ಆತನ ದುರಾದೃಷ್ಟಕ್ಕೆ ಅವನು ಹೇಳಿದ್ದು ಅಂಗಡಿ ಮಾಲೀಕ ಕೈಫ್ ಗೆ ಅರ್ಥವಾಗಲಿಲ್ಲ. ಈ ನೇಪಾಳಿ ಯುವಕ ತನ್ನನ್ನು ಬೈಯುತ್ತಿದ್ದಾನೆ ಎಂದೇ ತಪ್ಪಾಗಿ ಅರ್ಥ ಮಾಡಿಕೊಂಡ. ಥಾಪಾಗೆ ಥಳಿಸಲು ಆರಂಭಿಸಿದ. ಥಾಪಾ ಇನ್ನೊಮ್ಮೆ, ಮತ್ತೊಮ್ಮೆ ಇಂಗ್ಲಿಷ್ ನಲ್ಲಿ, ತಾನು ಕೇಳಿದ್ದು ನೀರನ್ನು ಎಂದರೂ ಆ ಅಂಗಡಿ ಮಾಲೀಕನಿಗೆ ಅರ್ಥವಾಗಲಿಲ್ಲ. ಥಾಪಾಗೆ ಗೂಸಾ ಬೀಳುವುದು ನಿಲ್ಲಲಿಲ್ಲ.
ಥಾಪಾನ ಗ್ರಹಚಾರಕ್ಕೆ, ಅಂಗಡಿ ಮಾಲೀಕ ಸಾಕಿದ್ದ ಪಿಟ್‌ಬುಲ್ ನಾಯಿ ಒಂದೇ ಸಮನೆ ಕೂಗತೊಡಗಿತು. ಅಂಗಡಿ ಮಾಲೀಕ ಕೈಫ್ ಆ ನಾಯಿಯನ್ನು ಥಾಪಾ ಮೇಲೆ ಛೂ ಬಿಟ್ಟ. ತಕ್ಷಣ ಅದು ಆ ಯುವಕನ ಮೇಲೆ ಎರಗಿ ಕಚ್ಚಲು ಶುರು ಮಾಡಿತು. ಈ ಜಗಳ ನೋಡಲು ನೂರಾರು ಜನ ಸೇರಿದ್ದರೂ, ಯಾರೊಬ್ಬರೂ ಥಾಪಾನ ನೆರವಿಗೆ ಬರಲಿಲ್ಲ. ನಾಯಿ ಆತನ ಮೇಲೆ ಹರಿಹಾಯ್ದು ಕುತ್ತಿಗೆ, ತಲೆಯ ಹಿಂಭಾಗ ಮತ್ತು ಕೈಗಳನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿತು. ಒಂದು ಕಿವಿಯನ್ನು ಕಚ್ಚಿ ಸಂಪೂರ್ಣವಾಗಿ ಹರಿದು ಹಾಕಿತು.
ಇದನ್ನೂ ಓದಿ : ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..!
ಕಿವಿ ಜೋಡಿಸಲು ಸರ್ಜರಿ
ಕೈ, ಕಾಲು, ತಲೆಯಿಂದ ರಕ್ತ ಒಂದೇ ಸಮನೆ ಸುರಿಯುತ್ತಿತ್ತು. ಹೇಗೋ ರೂಮಿಗೆ ತಲುಪಿದ. ಥಾಪಾನನ್ನು ರೂಮ್ ಮೇಟ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ. ಅಲ್ಲಿನ ವೈದ್ಯರು ಕಿವಿಗೆ ಸರ್ಜರಿ ಮಾಡಿದ್ದಾರೆ.
ಡೆಹರಾಡೂನ್ ಮೂಲದವನಾದ ಥಾಪಾ ಕೆಲಸದ ನಿಮಿತ್ತ ದಿಲ್ಲಿಯ ಮಾಳವೀಯ ನಗರಕ್ಕೆ ಬಂದಿದ್ದ. ಇದೀಗ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದೆ. ಪೊಲೀಸರು ಆರೋಪಿ ಮೇಲೆ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ತನ್ನನ್ನು ವಿನಾಕಾರಣ ಥಳಿಸಿದ ಅಂಗಡಿ ಮಾಲೀಕನ ಮೇಲೆ ಪೊಲೀಸರು ಇನ್ನೂ ಕ್ರಮ ಕೈಗೊಂಡಿಲ್ಲ ಎನ್ನುವುದು ಥಾಪಾನ ನೋವಿನ ದನಿ.
ಇದನ್ನೂ ಓದಿ : ಸರ್ಕಾರ ಕೊಟ್ಟರೂ ಪೊಲೀಸರು ಕೊಡಲಿಲ್ಲ: ಬೆಂಗಳೂರಿನಲ್ಲಿ 24/7 ಹೋಟೆಲ್ ನಡೆಸಲು ಅನುಮತಿಗೆ ಮನವಿ