Site icon Vistara News

Drone terror | ಕಾಶ್ಮೀರ ಗಡಿ ಭಾಗದಲ್ಲಿ ಪಾಕಿಸ್ತಾನಿ ಡ್ರೋನ್‌ ಹಾರಾಟ, ಭದ್ರತಾ ಪಡೆಗಳ ದೌಡು

drone

ಸಾಂಬಾ (ಕಾಶ್ಮೀರ):  ಜಮ್ಮು ವಲಯದ ರಿಯಾಸಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗ್ರಾಮಸ್ಥರ ಸಹಕಾರದಿಂದ ನಡೆದ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಮೂಲಕ ಲಷ್ಕರೆ ತಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಬಂಧಿಸಿದ ಘಟನೆ ಇನ್ನೂ ಹಸಿರಾಗಿರುವ ನಡುವೆಯೇ ಇನ್ನೊಂದು ಆತಂಕಕಾರಿ ಘಟನೆ ನಡೆದಿದೆ. ಸಾಂಬಾ ಜಿಲ್ಲೆಯ ಭಾರತ- ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಬರುವ ರಾಜಪುರ ಪ್ರದೇಶದಲ್ಲಿ ಭಾನುವಾರ ಪಾಕಿಸ್ತಾನ ಮೂಲದ ಡ್ರೋನ್‌ (drone terror) ಒಂದು ಸಂಚರಿಸಿರುವುದು ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಈ ಭಾಗದಲ್ಲಿ ಡ್ರೋನ್‌ ಒಂದು ಹಾರಾಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮಸ್ಥರು ಕೂಡಲೇ ಈ ವಿಚಾರವನ್ನು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳು ಮುಂಜಾನೆ ಐದು ಗಂಟೆಗೆ ಅಲ್ಲಿ ತಲುಪಿದ್ದು ತನಿಖೆ ಆರಂಭ ಮಾಡಿದ್ದಾರೆ. ಅಧಿಕಾರಿಗಳ ಪ್ರಕಾರ, ಈ ಡ್ರೋನ್‌ ಚಿಲ್ಯಾರಿ ಎಂಬ ಗ್ರಾಮದಲ್ಲಿ ಕಂಡುಬಂದಿದ್ದು ೧೨ ನಿಮಿಷಗಳ ಕಾಲ ಹಾರಾಡಿರುವುದು ಬೆಳಕಿಗೆ ಬಂದಿದೆ. ಚಿಲ್ಯಾರಿ ಮೂಲಕ ಭಾರತ ಪ್ರವೇಶಿಸಿದ ಈ ಡ್ರೋನ್‌ ಚಕ್‌ ದುಲ್ಮಾ ಗ್ರಾಮದ ಮೂಲಕ ಮರಳಿದೆ. ಡ್ರೋನ್‌ ಮೇಲೆ ಹಾರಾಡಿದ್ದು ಬಿಟ್ಟರೆ ಈ ಎರಡೂ ಗ್ರಾಮಗಳಲ್ಲಿ ಯಾವುದೇ ವಸ್ತುಗಳನ್ನು ಬೀಳಿಸಿದ್ದು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ತಿಂಗಳಲ್ಲಿ ಎರಡನೇ ಬಾರಿ
ಸಾಂಬಾ ಜಿಲ್ಲೆಯಲ್ಲಿ ಡ್ರೋನ್‌ ಹಾರಾಟ ನಡೆದಿರುವುದು ಇದು ತಿಂಗಳಲ್ಲಿ ಎರಡನೇ ಬಾರಿ. ಇದಕ್ಕೆ ಮೊದಲು ಜೂನ್‌ ತಿಂಗಳಲ್ಲಿ ಸೋನೂರ-ಘಗ್ವಾಲ್‌ ಪ್ರದೇಶದಲ್ಲಿ ಇದೇ ರೀತಿ ಡ್ರೋನ್‌ ಹಾರಿತ್ತು.

ಮೇ ತಿಂಗಳಲ್ಲಿ ಕಥುರಾ ಜಿಲ್ಲೆಯಲ್ಲಿ ಹಾರಾಡಿದ ಪಾಕಿಸ್ತಾನಿ ಡ್ರೋನನ್ನು ಭದ್ರತಾ ಪಡೆಗಳು ಪಾಕಿಸ್ತಾನದ ಡ್ರೋನ್‌ ಒಂದನ್ನು ಹೊಡೆದು ಉರುಳಿಸಿದ್ದವು. ಆ ಡ್ರೋನ್‌ನಲ್ಲಿ ಏಳು ಮ್ಯಾಗ್ನೆಟಿಕ್‌ ಬಾಂಬ್‌ ಗಳು ಮತ್ತು ಗ್ರೆನೇಡ್‌ ಲಾಂಚರ್‌ಗಳು ಪತ್ತೆಯಾಗಿದ್ದವು.

ಯಾಕೆ ಡ್ರೋನ್‌ ಅಪಾಯಕಾರಿ?

ರಿಯಾಸಿ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರಜೌರಿ ಮೂಲದ ತಾಲಿಬ್‌ ಹುಸೇನ್‌ ಮತ್ತು ಪುಲ್ವಾಮಾದ ಫೈಸಲ್‌ ಮೊಹಮ್ಮದ್‌ ದಾರ್‌ ಎಂಬವರನ್ನು ಬಂಧಿಸಲಾಗಿತ್ತು. ಇವರಿಬ್ಬರೂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರೆ ತಯ್ಬಾ ಸಂಘಟನೆಗೆ ಸೇರಿದವರಾಗಿದ್ದು, ರಜೌರಿ ಮತ್ತು ದಕ್ಷಿಣ ಕಾಶ್ಮೀರದಲ್ಲಿ ನಡೆದ ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆಂಬ ಮಾಹಿತಿಯನ್ನು ಕಲೆ ಹಾಕಲಾಗಿದೆ. ಬಂಧಿತರಿಂದ ಎರಡು ಎಎಲ್‌ ರೈಫಲ್‌ಗಳು, ಏಳು ಗ್ರೆನೇಡುಗಳು, ಒಂದು ಪಿಸ್ತೂಲು ಮತ್ತು ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದ ಉಗ್ರ ಸಂಘಟನೆಗಳು ಡ್ರೋನ್‌ ಮೂಲಕ ಇವರಿಗೆ ಪೂರೈಕೆ ಮಾಡಿವೆ ಎಂದು ಸಂಶಯಿಸಲಾಗಿದೆ.

ಇದನ್ನೂ ಓದಿ| ಅಮರನಾಥ ಯಾತ್ರಿಕರ ಮೇಲೆ ದಾಳಿಗೆ ಸ್ಕೆಚ್‌, ಇಬ್ಬರು ಮೋಸ್ಟ್‌ ವಾಂಟೆಡ್‌ ಉಗ್ರರು ಅರೆಸ್ಟ್, ಒಬ್ಬ I love NAMO ಎಂದಿದ್ದ!

Exit mobile version