ಮುಂಬಯಿ: ದೇಶಾದ್ಯಂತ ಭಾರಿ ಸುದ್ದಿ ಮಾಡಿದ ಕ್ರೂಸ್‌ನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ನಟ ಶಾರುಖ್ ಅವರ ಪುತ್ರ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಲಾಗಿದೆ. ಮಾದಕ ದ್ರವ್ಯ ನಿಯಂತ್ರಣ ದಳ (ಎನ್‌ಸಿಬಿ) ಈ ಸಂಬಂಧ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಖಾನ್ ಹೆಸರೇ ಇಲ್ಲ.
ಕಳೆದ ವರ್ಷದ ಅಕ್ಟೋಬರ್ 2ರಂದು ಎನ್‌ಸಿಬಿಯ ಮುಂಬಯಿ ವಲಯ ಕಚೇರಿ ಅಧಿಕಾರಿಗಳು ಇಲ್ಲಿನ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಮತ್ತು ಕಾರ್ಡೇಲಿಯ ಎಂಬ ಕಂಪನಿ ನಿರ್ವಹಿಸುತ್ತಿದ್ದ ಕ್ರೂಸ್ ಮೇಲೆ ದಾಳಿ ಮಾಡಿತ್ತು. ಆವತ್ತೇ ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದರೆ ಮರು ದಿನ ಆರ್ಯನ್ ಖಾನ್‌ನನ್ನು ಬಂಧಿಸಲಾಗಿತ್ತು. ಮುಂಬಯಿಯಿಂದ ಗೋವಾ ಕಡೆಗೆ ಹೊರಟಿದ್ದ ಈ ಕ್ರೂಸ್‌ನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿತ್ತು ಎಂದು ಎನ್‌ಸಿಬಿ ಆರೋಪಿಸಿತ್ತು.
ಶಾರುಖ್ ಖಾನ್-ಗೌರಿ ದಂಪತಿಯ ಪುತ್ರ ಈ ಕೇಸಿನಲ್ಲಿ ಸಿಕ್ಕಿಬಿದ್ದಿದ್ದು ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿತ್ತು. ಆರ್ಯನ್ ಖಾನ್ ತನಗೆ ಡ್ರಗ್ಸ್ ವಿಚಾರ ಗೊತ್ತಿಲ್ಲ ಎಂದು ಪರಿಪರಿಯಾಗಿ ಹೇಳಿಕೊಂಡರೂ ಎನ್‌ಸಿಬಿ ಅಧಿಕಾರಿಗಳು ಒಪ್ಪಿರಲಿಲ್ಲ. ಮುಂಬಯಿಯ ಆರ್ಥರ್ ಜೈಲು ಸೇರಿದ್ದ ಆರ್ಯನ್‌ಗೆ ಕೊನೆಗೆ ಅಕ್ಟೋಬರ್ 28ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.
ಸಮೀರ್ ವಾಂಖೆಡೆಗೆ ಹಿನ್ನಡೆ
ಡ್ರಗ್ಸ್ ಪ್ರಕರಣವನ್ನು ಆರಂಭಿಕ ಹಂತದಲ್ಲಿ ನಿರ್ವಹಿಸಿದ ಆಗಿನ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಕೇಸಿನ ನಿರ್ವಹಣೆಯಲ್ಲಿ ಹಲವು ತಪ್ಪುಗಳನ್ನು ಮಾಡಿದ್ದಾರೆ ಎಂದು ಎನ್‌ಸಿಬಿ ಡಿಜಿ ಎಸ್.ಎನ್. ಪ್ರಧಾನ್ ಅವರು ಹೇಳಿದ್ದಾರೆ. ಈ ನಡುವೆ ಅಮಾನತುಗೊಂಡಿರುವ ವಾಂಖೆಡೆಗೆ ಸಂಬಂಧಿಸಿದ ಗುಪ್ತಚರ ವರದಿ ಕೂಡಾ ಬರಲಿದ್ದು, ಅದರಲ್ಲಿ ಹೆಚ್ಚಿನ ಮಾಹಿತಿಗಳು ಬಯಲಾಗಲಿವೆ. ಆರ್ಯನ್ ಖಾನ್ ಗೆ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಸಮೀರ್ ವಾಂಖೆಡೆ ನಿರಾಕರಿಸಿದ್ದಾರೆ. ತಾನು ಈಗ ಈ ಪ್ರಕರಣದ ವಿಚಾರಣೆಯಲ್ಲಿ ಇಲ್ಲ., ಹಾಗಾಗಿ ಏನೂ ಹೇಳುವುದಿಲ್ಲ ಎಂದಿದ್ದಾರೆ.