Site icon Vistara News

Jacqueline Fernandez | 215 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ʼರಕ್ಕಮ್ಮʼ ಜಾಕ್ವೆಲಿನ್‌ಗೆ ಸಂಕಷ್ಟ

Jacqueline Fernandez

ನವದೆಹಲಿ: ವಿಕ್ರಾಂತ್‌ ರೋಣ ಸಿನಿಮಾದ “ರಾ ರಾ ರಕ್ಕಮ್ಮ” ಹಾಡಿನ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ (Jacqueline Fernandez) ಅವರಿಗೆ ೨೧೫ ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸುಲಿಗೆ ಪ್ರಕರಣದಲ್ಲಿ ಫರ್ನಾಂಡಿಸ್‌ ಅವರನ್ನು ಆರೋಪಿಯನ್ನಾಗಿಸಿದ್ದು, ಶೀಘ್ರದಲ್ಲಿಯೇ ನಟಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸುವ ಸಾಧ್ಯತೆ ಇದೆ.

ದಿಲ್ಲಿ ಮೂಲದ ಉದ್ಯಮಿಗೆ ವಂಚಕ (Conman) ಸುಕೇಶ್‌ ಚಂದ್ರಶೇಖರ್‌ ಸುಮಾರು ೨೧೫ ಕೋಟಿ ರೂ. ವಂಚಿಸಿದ ಪ್ರಕರಣ ಇದಾಗಿದ್ದು, ಸುಕೇಶ್‌ ಚಂದ್ರಶೇಖರ್‌ ಜತೆಗೆ ಜಾಕ್ವೆಲಿನ್‌ ಫರ್ನಾಂಡಿಸ್‌ ನಂಟು ಹೊಂದಿರುವ ಕುರಿತು ನಟಿ ವಿರುದ್ಧ ಇ.ಡಿ ತನಿಖೆ ನಡೆಸುತ್ತಿದೆ. ಇದಕ್ಕೂ ಮೊದಲು ಇ.ಡಿ ಅಧಿಕಾರಿಗಳು ಜಾಕ್ವೆಲಿನ್‌ರನ್ನು ಹಲವು ಬಾರಿ ವಿಚಾರಣೆ ನಡೆಸಿದ್ದಾರೆ.

ಸುಕೇಶ್‌ ಚಂದ್ರಶೇಖರ್‌ ವಂಚಕ ಎಂಬುದು ಬಾಲಿವುಡ್‌ ನಟಿಗೆ ಗೊತ್ತಿತ್ತು ಹಾಗೂ ಸುಲಿಗೆಯಿಂದ ಬಂದ ಹಣದಲ್ಲಿ ನಟಿಯೂ ಪಾಲುದಾರಳು ಎಂಬುದು ಇ.ಡಿ ಅಧಿಕಾರಿಗಳಿಗೆ ಗೊತ್ತಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿಯೇ, ಪ್ರಕರಣದಲ್ಲಿ ಫರ್ನಾಂಡಿಸ್‌ರನ್ನು ಆರೋಪಿಯನ್ನಾಗಿಸಿದ್ದಾರೆ ಎನ್ನಲಾಗಿದೆ. ಸುಕೇಶ್‌ ಜತೆ ನಂಟು ಹೊಂದಿರುವ ನಟಿಯು ಇದಕ್ಕೂ ಮೊದಲು ವಂಚಕನಿಂದ ೧೦ ಕೋಟಿ ರೂ. ಮೌಲ್ಯದ ಉಡುಗೊರೆ ಪಡೆದಿದ್ದರು ಎಂಬ ಆರೋಪವೂ ಇದೆ. ಸುಕೇಶ್‌ ವಿರುದ್ಧ ೩೨ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಹಲವು ರಾಜ್ಯಗಳ ಪೊಲೀಸರು ಹಾಗೂ ಕೇಂದ್ರೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.

ಇದನ್ನೂ ಓದಿ | ‌Vikrant Rona | ರಾ ರಾ ರಕ್ಕಮ್ಮ ಹಾಡಿಗೆ ಜಪಾನ್‌ ಹುಡುಗಿಯ ಮೋಹಕ ಡ್ಯಾನ್ಸ್

Exit mobile version