ಬೆಂಗಳೂರು: ನಟಿ ಅಮೂಲ್ಯ (Actress Amulya) ಅವರ ಮಾವ, ಮಾಜಿ ಕಾರ್ಪೊರೇಟರ್ (corporater) ಹಾಗೂ ಬಿಜೆಪಿ ಮುಖಂಡ (BJP leader) ಆಗಿರುವ ರಾಮಚಂದ್ರ ಅವರ ಮನೆ ಮೇಲೆ ಚುನಾವಣಾ ಅಧಿಕಾರಿಗಳು ನಿನ್ನೆ ತಡರಾತ್ರಿ ದಾಳಿ (Election Officer Raid) ನಡೆಸಿದ್ದಾರೆ. ಆರ್.ಆರ್ ನಗರದಲ್ಲಿರುವ ಅವರ ನಿವಾಸದ ಮೇಲೆ ರಾತ್ರಿ 10 ಗಂಟೆ ಸುಮಾರಿಗೆ ದಾಳಿ ನಡೆದಿದ್ದು, ಮುಂಜಾನೆಯವರೆಗೂ ಪರಿಶೀಲನೆ ನಡೆಯಿತು.
10 ವಾಹನಗಳಲ್ಲಿ ಬಂದಿರುವ ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳಿಂದ ಪರಿಶೀಲನೆ ನಡೆಯಿತು. ರಾಮಚಂದ್ರ ಅವರು ನಟಿ ಅಮೂಲ್ಯ ಅವರ ಮಾವನಾಗಿದ್ದು, ಸದ್ಯ ರಾಮಚಂದ್ರ, ನಟಿ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಮನೆಯಲ್ಲೇ ಇದ್ದಾರೆ.
ನಿರಂತರ ಪರಿಶೀಲನೆಯ ನಂತರ ಮನೆ ಕೆಲಸದವರನ್ನು ಒಬ್ಬೊಬ್ಬರನ್ನಾಗಿ ಮನೆ ಒಳಗಿನಿಂದ ಹೊರ ಬಿಡಲಾಯಿತು. ಸತತ 4 ಗಂಟೆಗಳ ಕಾಲ ಶೋಧ ಕಾರ್ಯ ನಡೆದ ಬಳಿಕ ಚುನಾವಣಾ ಅಧಿಕಾರಿಗಳ ದಾಳಿ ಅಂತ್ಯವಾಗಿದ್ದು, ಕೆಲವು ದಾಖಲೆಗಳನ್ನು ಪಡೆದು ಅಧಿಕಾರಿಗಳು ತೆರಳಿದ್ದಾರೆ.
ಚುನಾವಣಾ ಅಧಿಕಾರಿಗಳು, ಅಬಕಾರಿ ಪೊಲೀಸ್, ವಾಣಿಜ್ಯ ತೆರಿಗೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ ಎಂದು ಗೊತ್ತಾಗಿದೆ. ದಾಳಿ ವೇಳೆ ಯಾವುದೇ ಅಕ್ರಮ ಹಣವಾಗಲಿ, ಅಕ್ರಮ ಲಿಕ್ಕರ್ ಆಗಲಿ, ಅಕ್ರಮ ಚಿನ್ನಾಭರಣವಾಗಲೀ ಪತ್ತೆಯಾಗಿಲ್ಲ.
ದಾಳಿ ಮಾಹಿತಿ ತಿಳಿದು ಬಿಜೆಪಿ ಕಾರ್ಯಕರ್ತರು ಮನೆ ಬಳಿ ಜಮಾಯಿಸಿದ್ದರು. ದಾಳಿ ಮುಗಿಸಿ ಹೊರಟ ಅಧಿಕಾರಿಗಳಿಗೆ “ಚೊಂಬು ಸಿಗ್ತಾ, ಚೊಂಬು- ಡಿಕೆ ಚೊಂಬು” ಎಂದು ಬಿಜೆಪಿ ಕಾರ್ಯಕರ್ತರು ವ್ಯಂಗ್ಯ ಮಾಡಿದರು. ಮನೆ ಮುಂದೆ ಜಮಾಯಿಸಿದ್ದ ಕಾರ್ಯಕರ್ತರು ಕಾಂಗ್ರೆಸ್‌ಗೆ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನಿಂದ ಅಧಿಕಾರ ದುರುಪಯೋಗ
ಕಾಂಗ್ರೆಸ್‌ನವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮನೆ ಮೇಲೆ ದಾಳಿ ಮಾಡಿಸಿದ್ದಾರೆ” ಎಂದು ಬಿಜೆಪಿ ಮುಖಂಡ ರಾಮಚಂದ್ರ ಈ ಕುರಿತು ಹೇಳಿಕೆ ನೀಡಿದ್ದಾರೆ. “ಕಾಂಗ್ರೆಸ್‌ನವರು ಈ ಭಾಗದಲ್ಲಿ ಇಂದು ಹಣ ಹಂಚಿಕೆ ಮಾಡ್ತಿದ್ರು. ಅದಕ್ಕೆ ನಾವು ಅಡ್ಡಿ ಪಡಿಸುತ್ತೇವೆ ಅಂತ ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಆರ್‌ಓಗೆ ಪದೇ ಪದೆ ಪೋನ್ ಬರ್ತಾನೆ ಇತ್ತು. ಅವ್ರನ್ನು ಎರಡು ದಿನಕ್ಕಾದ್ರು ಒಳಕ್ಕೆ ಹಾಕಿಸಿ ಅಂತ ಫೋನ್‌ನಲ್ಲಿ ಹೇಳ್ತಿದ್ರು” ಎಂದು ರಾಮಚಂದ್ರ ಹೇಳಿದ್ದಾರೆ.
“ಏನೋ ದೊಡ್ಡದಾಗಿ ಸಿಗುತ್ತೆ, ಕೂಲ್ ಆಗುತ್ತೆ ಅಂತ ಬಂದ್ರು, ಹಾಟ್ ಆಗಿ ಹೋದ್ರು. ಮೊಮ್ಮಕ್ಕಳ ಹುಟ್ಟುಹಬ್ಬಕ್ಕಾಗಿ ಲಿಕ್ಕರ್ ತರಿಸಿದ್ದೆ. ಚುನಾವಣೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬ ಮಾಡಬಾರದು ಅಂತಾ ಸುಮ್ನೇ ಇದ್ದೆವು. ಅದನ್ನು ವಶಕ್ಕೆ ಪಡೆದಿದ್ದಾರೆ. ಏನು ವಶಕ್ಕೆ ಪಡೆದಿದ್ದೇವೆ ಅಂತ ಒಂದು ಸಹಿ ಪಡೆದಿದ್ದಾರೆ” ಎಂದಿದ್ದಾರೆ. “ಈ ಭಾಗದಲ್ಲಿ ಬಿಜೆಪಿಗೆ ಲೀಡ್ ಬರುತ್ತೆ. ಕಳೆದ ಬಾರಿ 18 ಸಾವಿರ ಲೀಡ್ ಬಂದಿತ್ತು. ಅದನ್ನು ಸಹಿಸಲಾಗದೆ ಅಧಿಕಾರ ಮಿಸ್‌ಯೂಸ್ ಮಾಡಿದ್ದಾರೆ” ಎಂದು ರಾಮಚಂದ್ರ ಆರೋಪಿಸಿದರು.
ಇದನ್ನೂ ಓದಿ: Lok Sabha Election: ಕರ್ನಾಟಕ ಸೇರಿ 13 ರಾಜ್ಯದಲ್ಲಿ ನಾಳೆ 2ನೇ ಹಂತದ ಮತದಾನ; ಪಿನ್ ಟು ಪಿನ್ ಮಾಹಿತಿ ಇಲ್ಲಿದೆ