ಬೆಂಗಳೂರು: ವೈಟ್ ಫೀಲ್ಡ್ ಬಳಿ ಬಸ್ಸಿನಿಂದ ಇಳಿದು ಓಫಾರ್ಮ್ ಸರ್ಕಲ್ ಬಳಿ ನಡೆದು ಬರುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ಲೈನ್ ತುಳಿದು ತಾಯಿ – ಮಗು ಸಜೀವ ದಹನ (Electricuted Case ) ಆಗಿದ್ದ ಪ್ರಕರಣಕ್ಕೆ ಇಲಿ ಕಾರಣ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ (Energy Minister KJ George) ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, ಔದುಂಬರ ಹೋಮ್ಸ್ ಅಪಾರ್ಟ್ಮೆಂಟ್‌ನಲ್ಲಿ ಖಾಸಗಿ ಟ್ರಾನ್ಸ್‌ಫಾರ್ಮರ್ ಅನ್ನು ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಇಲಿ ಹೋಗಿ ಹಾಳು ಮಾಡಿದ್ದರಿಂಧ ಟ್ರಿಪ್ ಆಗಿ ಈ ಅವಘಡ ಉಂಟಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಜೆ. ಜಾರ್ಜ್, ಈ ವಿದ್ಯುತ್ ಅವಘಡ ಆಗಬಾರದಿತ್ತು. ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಉಪ ನಿರ್ದೇಶಕರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ತನಿಖೆಗಾಗಿ 4 ಕಮಿಟಿಗಳನ್ನು ಮಾಡಿದ್ದೇವೆ. ಅಲ್ಲಿನ 5 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಪೊಲೀಸರು ಕೂಡ ಕ್ರಮ ತೆಗೆದುಕೊಂಡಿದ್ದಾರೆ. ಒಟ್ಟು ಮೂರು ಮಾದರಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಬೆಸ್ಕಾಂ ಆಂತರಿಕ ತನಿಖೆಯನ್ನು ಕೈಗೊಂಡಿದ್ದಾರೆ. ಚೀಫ್ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟೋರೇಟ್ (Chief Electrical inspectorate) ತನಿಖೆ ನಡೆಯುತ್ತಿದೆ.
ಮತ್ತೊಂದು ಸ್ವತಂತ್ರ ಏಜೆನ್ಸಿಯಿಂದ ತನಿಖೆ ನಡೆಸಲಾಗುತ್ತದೆ. ಅಲ್ಲದೆ, ಸುಮಂತ್ ಎಂಬ ನಿವೃತ್ತ ಇಂಜಿನಿಯರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಬರೀ ಕಾಡುಗೋಡಿಯಲ್ಲ. ರಾಜ್ಯಾದ್ಯಂತ ಎಚ್ಚರ ವಹಿಸಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಮೃತರ ಕುಟುಂಬಕ್ಕೆ ಕುಟುಂಬಕ್ಕೆ ೧೦ ಲಕ್ಷ ರೂಪಾಯಿ ಪರಿಹಾರ ಚೆಕ್ ನೀಡಲಾಗುತ್ತದೆ ಎಂದು ಕೆ.ಜೆ. ಜಾರ್ಜ್ ತಿಳಿಸಿದರು.
ಇಂಧನ ಇಲಾಖೆ ಎಂಡಿ ಮಹಂತೇಶ್ ಬೀಳಗಿ ಮಾತನಾಡಿ, ಮೈತ್ರಿ ಲೇಔಟ್‌ನ ಔದುಂಬರ ಅಪಾರ್ಟ್ಮೆಂಟ್‌ನಲ್ಲಿ ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಬಾಕ್ಸ್‌ಗೆ ಇಲಿ ನುಗ್ಗಿ ಶಾರ್ಟ್ ಸರ್ಕ್ಯೂಟ್ ಆಗಿದೆ. 11 ಕೆವಿ ಓವರ್ ಹೆಡ್ ಎಚ್‌ಟಿ ಮಾರ್ಗದಲ್ಲಿ 3.50ಕ್ಕೆ ಕೇಬಲ್ ನೆಲಕ್ಕೆ ಬಿದ್ದಿದೆ. ಇದರಿಂದ ಕಾಡುಗೋಡಿ ಉಪಕೇಂದ್ರದ ಫೀಡರ್ ಟ್ರಿಪ್ ಆಗಿತ್ತು. ಫೀಡರ್ ಅನ್ನು ಪುನಃ ಟೆಸ್ಟ್ ಚಾರ್ಜ್ ಮಾಡಲಾಗಿದೆ. ಈ ವೇಳೆ ವಿದ್ಯುತ್ ಪ್ರವಹಿಸುವುದು ತಿಳಿದುಬಂದಿಲ್ಲ. ಮುಂಜಾನೆ 5.30ಕ್ಕೆ ತಾಯಿ-ಮಗು ತುಂಡಾದ ವಿದ್ಯುತ್ ತಂತಿ ತುಳಿದಾಗ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ ಎಂದು ತಿಳಿಸಿದರು.
ಏನಿದು ಅವಘಡ?
ಎ.ಕೆ ಗೋಪಾಲ್ ಕಾಲೋನಿ ನಿವಾಸಿಗಳಾದ ಸಂತೋಷ್ ಮತ್ತು ಸೌಂದರ್ಯ ದಂಪತಿ ತಮ್ಮ ಪುಟ್ಟ ಮಗಳು ಲಿಯಾಳೊಂದಿಗೆ ನವೆಂಬರ್ 19ರಂದು ತಮಿಳುನಾಡಿನಿಂದ ವೈಟ್‌ಫೀಲ್ಡ್‌ಗೆ ಬಂದಿಳಿದಿದ್ದರು.
ಬೆಳಗ್ಗೆ ಐದು ಗಂಟೆಯ ಹೊತ್ತಿಗೆ ಬಸ್ಸಿನಿಂದ ಇಳಿದು ಸಂತೋಷ್, ಸೌಂದರ್ಯ ಪುಟ್ಟ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಅವರು ವೈಟ್‌ಫೀಲ್ಡ್ ಸಮೀಪದ ಓಫಾರ್ಮ್ ಸರ್ಕಲ್ ಬಳಿ ಇರುವ ಮನೆ ಕಡೆಗೆ ಸಾಗುತ್ತಿದ್ದರು. ಈ ವೇಳೆ ರಸ್ತೆ ಬದಿ ತುಂಡಾಗಿ ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಅವರಿಗೆ ಕಾಣಿಸಲಿಲ್ಲ. ಕತ್ತಲಲ್ಲಿ ಅವರು ವಿದ್ಯುತ್ ತಂತಿಯನ್ನು ತುಳಿದಿದ್ದರು. ಮತ್ತು ಒಮ್ಮೆಗೇ ಅವರ ದೇಹದಲ್ಲಿ ವಿದ್ಯುತ್ ಪ್ರವಹಿಸಿ ತಾಯಿ ಮತ್ತು ಮಗು ಸ್ಥಳದಲ್ಲೇ ಸುಟ್ಟು ಕರಕಲಾಗಿ ಹೋಗಿದ್ದರು.
ಇದನ್ನೂ ಓದಿ: Karnataka Politics : ನೆಪೋಟಿಸಂ, ಫೇವರಿಟಿಸಂ ಬಗ್ಗೆ ಮೋದಿ ಇನ್ನು ಮಾತನಾಡುವಂತಿಲ್ಲ: ಸುರ್ಜೇವಾಲ
ವಿದ್ಯುತ್ ತಂತಿ ತಗುಲಿ ಹೆಂಡತಿ ಮತ್ತು ಮಗಳಿಗೆ ಬೆಂಕಿ ಹತ್ತಿಕೊಂಡಿದ್ದನ್ನು ಸಂತೋಷ್ ಕಣ್ಣಾರೆ ಕಂಡಿದ್ದು, ಅವರಿವರ ಸಹಾಯಕ್ಕೆ ಅಂಗಲಾಚಿದ್ದರು. ಆದರೆ, ಯಾರೂ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಎಲ್ಲರ ಕಣ್ಣೆದುರೇ ತಾಯಿ ಮತ್ತು ಮಗು ಕರಕಲಾಗಿದ್ದರು.