Site icon Vistara News

Gurgaon Mall Incident: ಜಾಬ್‌ ಇಂಟರ್‌ವ್ಯೂಗೆ ಕರೆದು ಗುರುಗ್ರಾಮ ಮಾಲ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ

Rape

ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿರುವ ಸಹಾರಾ ಮಾಲ್‌ಗೆ ೨೭ ವರ್ಷದ ಮಹಿಳೆಯೊಬ್ಬರನ್ನು ಜಾಬ್‌ ಇಂಟರ್‌ವ್ಯೂಗೆ ಕರೆದು, ಮಾಲ್‌ನ ಪಾರ್ಕಿಂಗ್‌ ಸ್ಥಳದಲ್ಲಿಯೇ (Gurgaon Mall Incident) ಅವರ ಮೇಲೆ ಅತ್ಯಾಚಾರ ಎಸಗಲಾಗಿದೆ. ಉದ್ಯೋಗದ ಸಂದರ್ಶನಕ್ಕೆಂದು ಕರೆದ ವ್ಯಕ್ತಿಯು ಪಾರ್ಕಿಂಗ್‌ ಏರಿಯಾಗೆ ಕರೆದೊಯ್ದು, ನೀರಿನಲ್ಲಿ ಮತ್ತು ಬರುವ ಔಷಧ ಮಿಶ್ರಣ ಮಾಡಿ ಮಹಿಳೆಗೆ ಕೊಟ್ಟಿದ್ದಾನೆ. ನೀರು ಕುಡಿದ ಮಹಿಳೆಗೆ ಅಮಲೇರಿದ ಬಳಿಕ ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಎಂಜಿನಿಯರಿಂಗ್‌ ಪದವಿ ಮುಗಿಸಿರುವ, ಗುರುಗ್ರಾಮದ ಡಿಎಲ್‌ಎಫ್‌ ನಿವಾಸಿಯಾದ ಮಹಿಳೆಯು ಆನ್‌ಲೈನ್‌ ಪೋರ್ಟಲ್‌ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದಾರೆ. ಇದಾದ ಬಳಿಕ ಮಹಿಳೆಗೆ ಒಬ್ಬ ವ್ಯಕ್ತಿಯ ಮೊಬೈಲ್‌ ನಂಬರ್‌ ಸಿಕ್ಕಿದ್ದು, ಆತನ ಜತೆ ಮಾತನಾಡಿದ್ದಾರೆ. ತನ್ನ ಹೆಸರನ್ನು ತುಷಾರ್‌ ಶರ್ಮಾ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಯು, ಉದ್ಯೋಗ ಗ್ಯಾರಂಟಿ ಎಂಬ ಭರವಸೆ ನೀಡಿ, ಸಹಾರಾ ಮಾಲ್‌ನಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಿದ್ದಾನೆ. ಅದರಂತೆ ಮಾಲ್‌ಗೆ ತೆರಳಿದ ಮಹಿಳೆಯು ಅತ್ಯಾಚಾರಕ್ಕೀಡಾಗಿದ್ದಾರೆ.

ಮಹಿಳೆಯು ಸೆಕ್ಟರ್‌ ೫೧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. “ಉದ್ಯೋಗದ ಭರವಸೆ ನೀಡಿದ ವ್ಯಕ್ತಿಯು ಮಾಲ್‌ಗೆ ಬರುವಂತೆ ಸೂಚಿಸಿದೆ. ಮಾಲ್‌ ಹೊರಗೆ ಭೇಟಿಯಾದ ಆತ, ಪಾರ್ಕಿಂಗ್‌ ಏರಿಯಾಗೆ ಕರೆದೊಯ್ದು ನೀರು ಕೊಟ್ಟ. ಇದಾದ ಬಳಿಕ ನನಗೆ ಅಮಲೇರಿದಂತಾಯಿತು. ಬಳಿಕ ನನ್ನನ್ನು ಕಾರಿನಲ್ಲಿ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದೆ. ನಂತರ ನನ್ನನ್ನು ಪಾರ್ಕಿಂಗ್‌ ಏರಿಯಾದಲ್ಲಿಯೇ ಬಿಟ್ಟು ಹೋದ” ಎಂಬುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪೋರ್ಚುಗಲ್‌ ಚರ್ಚುಗಳಲ್ಲಿ 5000 ಮಕ್ಕಳ ಮೇಲೆ ಪಾದ್ರಿಗಳಿಂದ ಅತ್ಯಾಚಾರ!

Exit mobile version