Site icon Vistara News

Loan App Fraud | 100 ಲೋನ್‌ ಅಪ್ಲಿಕೇಷನ್‌ ಬಳಸಿ 500 ಕೋಟಿ ರೂ. ವಂಚನೆ, ಕರ್ನಾಟಕದಲ್ಲೂ ಇತ್ತು ಈ ಜಾಲ!

China App

ನವದೆಹಲಿ: ಸುಮಾರು ೧೦೦ ಲೋನ್‌ ಅಪ್ಲಿಕೇಷನ್‌ಗಳ ಮೂಲಕ (Loan App Fraud) ೫೦೦ ಕೋಟಿ ರೂ. ವಂಚಿಸಿದ್ದಲ್ಲದೆ, ಜನರ ವೈಯಕ್ತಿಕ ಮಾಹಿತಿಯನ್ನು ಚೀನಾಗೆ ನೀಡುತ್ತಿದ್ದ ಬೃಹತ್‌ ಜಾಲವೊಂದನ್ನು ಪೊಲೀಸರು ಭೇದಿಸಿದ್ದು, ದೇಶಾದ್ಯಂತ ೨೨ ಜನರನ್ನು ಬಂಧಿಸಿದ್ದಾರೆ. ಕರ್ನಾಟಕ ಸೇರಿ ಹಲವೆಡೆ ವಂಚನೆ ಜಾಲ ವ್ಯಾಪಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಲಖನೌ ಮೂಲದ ಗ್ಯಾಂಗ್‌ನಿಂದ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಲ್‌ಸೆಂಟರ್‌ ತೆರೆದಿದ್ದ ದುಷ್ಕರ್ಮಿಗಳು ಜನರಿಗೆ ಕರೆ ಮಾಡಿ, ಈ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡರೆ ನಿಮಗೆ ಸಾಲ ನೀಡಲಾಗುವುದು ಎಂದು ಹೇಳುತ್ತಿದ್ದರು. ಜನ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡ ಬಳಿಕ ಅವರಿಂದ ವೈಯಕ್ತಿಕ ಮಾಹಿತಿ ಪಡೆಯಲು Access ಪಡೆಯುತ್ತಿದ್ದರು. ಸಾಲ ನೀಡಿದ ಬಳಿಕ ಜನರಿಂದ ಪಡೆದ ವೈಯಕ್ತಿಕ ಮಾಹಿತಿ, ಫೋಟೊ, ವಿಡಿಯೊ ತಿರುಚಿ, ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುವುದಾಗಿ ಹೆದರಿಸುತ್ತಿದ್ದರು. ಮರ್ಯಾದೆಗೆ ಹೆದರಿ ಜನ ಇವರ ಖಾತೆಗಳಿಗೆ ಲಕ್ಷಾಂತರ ರೂ. ಜಮೆ ಮಾಡುತ್ತಿದ್ದರು. ಇಂತಹ ಜಾಲದ ಮೇಲೆ ಎರಡು ತಿಂಗಳಿಂದ ನಿಗಾ ಇಟ್ಟಿದ್ದ ದೆಹಲಿ ಪೊಲೀಸರು, ದೇಶದ ಹಲವೆಡೆ ೨೨ ಮಂದಿಯನ್ನು ಬಂಧಿಸಿದ್ದಾರೆ.

ಚೀನಾ, ಹಾಂಕಾಂಗ್‌ಗೆ ಮಾಹಿತಿ ರವಾನೆ

ಸಾರ್ವಜನಿಕರಿಂದ ಪಡೆದ ಗೌಪ್ಯ ಮಾಹಿತಿಯನ್ನು ಲಖನೌ ಗ್ಯಾಂಗ್‌ನ ಸದಸ್ಯರು ಚೀನಾ ಹಾಗೂ ಹಾಂಕಾಂಗ್‌ಗೆ ರವಾನಿಸುತ್ತಿದ್ದರು ಎಂದು ಪೊಲೀಸ್‌ ತನಿಖೆಯಿಂದ ತಿಳಿದುಬಂದಿದೆ. ಚೀನಾದ ಏಳು ನಾಗರಿಕರು ವಂಚನೆಯಲ್ಲಿ ಭಾಗಿಯಾಗಿದ್ದು, ಇವರ ಆಣತಿ ಮೇರೆಗೇ ಆರೋಪಿಗಳು ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸ್‌ ತನಿಖೆ ವೇಳೆ ಬಯಲಾಗಿದೆ.

ಯಾವ ಅಪ್ಲಿಕೇಷನ್‌ಗಳ ಬಳಕೆ?

ಜನರಿಗೆ ಸಾಲ ನೀಡಿ, ಅವರಿಂದ ಗೌಪ್ಯ ಮಾಹಿತಿ ಪಡೆಯಲು ಲಖನೌ ಗ್ಯಾಂಗ್‌ ನೂರು ಅಪ್ಲಿಕೇಷನ್‌ಗಳನ್ನು ಬಳಸಿದೆ. ಕ್ಯಾಶ್‌ಪೋರ್ಟ್‌, ರುಪಿ ವೇ, ಲೋನ್‌ ಕ್ಯುಬ್‌, ಕೌ ರುಪಿ, ಸ್ಮಾರ್ಟ್‌ ವ್ಯಾಲೆಟ್‌, ಹಾಯ್‌ ರುಪಿ, ಸ್ವಿಫ್ಟ್‌ ರುಪಿ, ವ್ಯಾಲೆಟ್ವಿನ್‌, ಫಿಶ್‌ಕ್ಲಬ್‌, ಮ್ಯಾಜಿಕ್‌ ಬ್ಯಾಲೆನ್ಸ್‌, ಯೊಕ್ಯಾಶ್‌, ಫಾರ್ಚ್ಯೂನ್‌ ಟ್ರೀ, ರೆಡ್‌ ಮ್ಯಾಜಿಕ್‌ ಸೇರಿ ಹಲವು ಅಪ್ಲಿಕೇಷನ್‌ ಬಳಸುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ | Online fraud : ಆನ್‌ಲೈನ್‌ ವಂಚನೆ ಜಾಲಕ್ಕೆ ಪೊಲೀಸರ ಬಲೆ, 70 ಜನ ವಶಕ್ಕೆ

Exit mobile version