ಬೆಂಗಳೂರು: ರಾಜಧಾನಿಯಲ್ಲಿ ಭಿಕ್ಷುಕನೊಬ್ಬ ಮಾಡಿದ ಎಡವಟ್ಟಿನ (Fake Alert) ಪರಿಣಾಮ ಪೊಲೀಸರು ಹಲವು ಗಂಟೆಗಳ ಕಾಲ ತಲೆ ಕೆಡಿಸಿಕೊಂಡರು. ಬಾಂಬ್ ಸ್ಕ್ವಾಡ್ ಕರೆಸಿ ತಪಾಸಣೆ ನಡೆಸಿದ್ದೂ ಆಯಿತು. ಏರಿಯಾದ ಜನ ಹೈ ಟೆನ್ಷನ್ ಅನುಭವಿಸುವಂತೆ ಈತ ಮಾಡಿದ್ದಾನೆ!
ಕಲಾಸಿಪಾಳ್ಯ ಬಳಿಯ ಎಟಿಎಂ ಮೆಷಿನ್ ಒಂದರ ಬಳಿಯಲ್ಲಿ ಭಿಕ್ಷುಕ ನಡೆಸಿದ ಆಟ ಪೊಲೀಸರಿಗೆ ತಲೆನೋವು ತಂದಿಟ್ಟಿತು. ಸೋಮವಾರ ಬೆಳಗ್ಗೆ ಹತ್ತು ಘಂಟೆಯ ಸುಮಾರಿಗೆ ಈ ಭಿಕ್ಷುಕ ಕೋಟಕ್ ಮಹಿಂದ್ರ ಬ್ಯಾಂಕ್‌ನ ಎಟಿಎಂನಲ್ಲಿ ಬಾಕ್ಸ್ ತಂದಿಟ್ಟು ಹೋಗಿದ್ದ. ಈ ಬಾಕ್ಸ್‌ಗಳನ್ನು ಎಟಿಎಂ ಒಳಭಾಗದಲ್ಲಿ ಹಣವನ್ನು ತುಂಬಲು ಉಪಯೋಗ ಮಾಡಲಾಗುತ್ತದೆ. ಭಿಕ್ಷುಕ ಮೂರು ಖಾಲಿ ಬಾಕ್ಸ್‌ಗಳನ್ನು ಇಟ್ಟು ಹೋಗಿದ್ದು, ಅದು ಅನುಮಾನಾಸ್ಪದವಾಗಿ ಕಂಡು ಬಂದಿತ್ತು.
ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಒಂದೋ ಎಟಿಎಂನಲ್ಲಿದ್ದ ಹಣವನ್ನು ಕಳ್ಳತನ ಮಾಡಿ ಬಾಕ್ಸ್ ಇಟ್ಟಿರಬೇಕು. ಇಲ್ಲವಾದಲ್ಲಿ ಬಾಕ್ಸ್‌ನಲ್ಲಿ ಏನಾದರೂ ಅನುಮಾನಾಸ್ಪದ ವಸ್ತುಗಳು, ಅಥವಾ ಸ್ಫೋಟಕ ಇರಬಹುದು ಎಂಬ ಭಯ ಹುಟ್ಟಿಹಾಕಿತ್ತು. ಇದರಿಂದ ಫುಲ್ ಅಲರ್ಟ್ ಆಗಿದ್ದ ಪೊಲೀಸರು ಬಾಂಬ್ ಸ್ಕ್ವಾಡ್ ಕರೆಸಿ ಪರಿಶೀಳಿಸಿದ್ದರು.
ನಂತರ ಸಿಸಿಟಿವಿಯಲ್ಲಿ ಭಿಕ್ಷುಕನ ಚಲನವಲನ ಪತ್ತೆಯಾಯಿತು. ಈ ಭಿಕ್ಷುಕ ಬೇರೊಂದು ಎಟಿಎಂನಲ್ಲಿದ್ದ ಬಾಕ್ಸ್ ಇಲ್ಲಿ ತಂದಿಟ್ಟಿದ್ದಾನೆಂಬುದು ಪತ್ತೆಯಾಯಿತು. ಸದ್ಯ ಹಣ ತುಂಬುವ ಬಾಕ್ಸ್ ಆತನ ಕೈಗೆ ಹೇಗೆ ಸಿಕ್ಕಿತು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಹೀಗಾಗಿ ಆತನಿಗಾಗಿ ಪೊಲೀಸರ ಹುಡುಕಾಟ ನಡೆದಿದೆ.
ಹತ್ತಾರು ಜನರಿಗೆ ವಂಚಿಸಿದ ಖದೀಮ ಓಲಾ ಡ್ರೈವರ್!
ಬೆಂಗಳೂರು: ಖತರ್‌ನಾಕ್ ಓಲಾ ಚಾಲಕನೊಬ್ಬ ವಂಚನೆಗೆ (fraud Case) ಹೊಸ ದಾರಿ ಕಂಡುಕೊಂಡಿದ್ದಾನೆ. ಓಲಾ ಡ್ರೈವರ್ ಭರತ್ ಎಂಬಾತನ ವಂಚನೆ ಪ್ಲಾನ್‌ಗೆ ಪೊಲೀಸರೇ ಚಕಿತರಾಗಿದ್ದಾರೆ.
ಏರ್‌ಪೋರ್ಟ್‌ನಿಂದ ಬೆಂಗಳೂರು ನಗರದಲ್ಲಿ ಎಲ್ಲೇ ಹೋದರೂ 5 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಿದ್ದ. 5194 ಸಾವಿರ ರೂಪಾಯಿಯ ಒಂದೇ ಸ್ಕ್ರೀನ್ ಶಾಟ್ ಇಟ್ಟುಕೊಂಡು ಹೀಗೆ ಹತ್ತಾರು ಜನರಿಗೆ ವಂಚಿಸಿದ್ದಾನೆ.
ಇವನ ವಂಚನೆ ವಿಧಾನ ಹೀಗಿರುತ್ತಿತ್ತು: ಓಲಾ ಆ್ಯಪ್ ಆನ್ ಮಾಡಿಕೊಳ್ಳುತ್ತಿದ್ದ ಆರೋಪಿ ರಾತ್ರಿ ವೇಳೆಯಲ್ಲಿ ಫೀಲ್ಡ್‌ಗೆ ಇಳಿಯುತ್ತಿದ್ದ. ಪ್ಯಾಸೆಂಜರ್‌ಗಳು ಓಲಾ ಬುಕ್ ಮಾಡುತ್ತಿದ್ದರು. ಆತ ಬುಕ್ಕಿಂಗ್ ಸ್ವೀಕರಿಸಿ ಇನ್ನೇನು ಪ್ಯಾಸೆಂಜರ್ ಕಾರು ಹತ್ತುವಾಗ ಟ್ರಿಪ್ ಕ್ಯಾನ್ಸಲ್ ಮಾಡುತ್ತಿದ್ದ. ನಂತರ ಸುಮ್ಮನೆ ಅನುಮಾನ ಬಾರದಂತೆ ಓಟಿಪಿ ಹೇಳಿ ಎನ್ನುತ್ತಿದ್ದ.
ನಂತರ ಗ್ರಾಹಕರನ್ನು ಸ್ಥಳಕ್ಕೆ ಡ್ರಾಪ್ ಮಾಡಿ ಬಳಿಕ ತನ್ನ ಬಳಿಯಲ್ಲಿ ಇರುತ್ತಿದ್ದ 5194 ರೂಪಾಯಿಯ ಸ್ರ್ಕೀನ್ ಶಾಟ್ ತೋರಿಸುತ್ತಿದ್ದ. ಪ್ರಯಾಣಿಕರು ಇದನ್ನು ನೋಡಿ ಇಷ್ಟೊಂದು ಹಣ ಆಯ್ತಾ ಅಂತ ಶಾಕ್ ಆಗುತ್ತಿದ್ದರು. ಬೇರೆ ದಾರಿ ಕಾಣದೆ ಹಣ ಕೊಡುತ್ತಿದ್ದರು. ವಾದಿಸಿದರೆ ಜಗಳವಾಡುತ್ತಿದ್ದುದಲ್ಲದೆ, ಕಸ್ಟಮರ್ ಕೇರ್‌ಗೆ ಕರೆ ಮಾಡಿ ಮಾತನಾಡಿ ಎನ್ನುತ್ತಿದ್ದ. ಹೆಚ್ಚಿನವರು ಕಸ್ಟಮರ್ ಕೇರ್‌ಗೆ ಕರೆ ಮಾಡುವ ಕಿರಿಕಿರಿ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಈ ಮೋಸಗಾರ ಅರ್ಥ ಮಾಡಿಕೊಂಡಿದ್ದ.
ಹೀಗೆ ಹಲವಾರು ಜನರಿಗೆ ಈತ ವಂಚಿಸಿದ್ದಾನೆ. ಹೆಚ್ಚಿನವರಿಗೆ ತಮಗೆ ಮೋಸವಾಗಿದೆ ಎಂಬುದು ಕೂಡ ತಿಳಿದಿಲ್ಲ. ಇದೀಗ ಏರ್‌ಪೋರ್ಟ್ ಪೊಲೀಸರಿಂದ ವಂಚನೆ ಆರೋಪಿ ಭರತ್‌ಗಾಗಿ ಹುಡುಕಾಟ ನಡೆದಿದೆ.
ಫುಡ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ
ಲಂಚ ಸ್ವೀಕರಿಸುತ್ತಿದ್ದ ವೇಳೆ ಫುಡ್ ಇನ್‌ಸ್ಪೆಕ್ಟರ್ ಹಾಗೂ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರುಕಟ್ಟೆ ಸೊಸೈಟಿ (TAPCMS) ಸೆಕ್ರೆಟರಿಯನ್ನು ಲೋಕಾಯುಕ್ತ ಪೊಲೀಸರು (Lokayukta police) ಹಿಡಿದಿದ್ದಾರೆ. ಫುಡ್ ಇನ್‌ಸ್ಪೆಕ್ಟರ್ ಶ್ರೀಧರ್ ಹಾಗೂ TAPCMS ಸೆಕ್ರೆಟರಿ ಹಾಗೂ ಮ್ಯಾನೇಜರ್ ಉಮೇಶ್ ಲೋಕಾ ಬಲೆಗೆ ಬಿದ್ದಿದ್ದಾರೆ.
ಶ್ರೀಧರ್, ಉತ್ತರಹಳ್ಳಿ ಮತ್ತು ಕೆಂಗೇರಿ ವಿಭಾಗದ ಫುಡ್ ಇನ್‌ಸ್ಪೆಕ್ಟರ್ ಆಗಿದ್ದಾರೆ. ನ್ಯಾಯಬೆಲೆ ಅಂಗಡಿ ಲೈಸೆನ್ಸ್‌ಗೆ ಇವರರಿಬ್ಬರೂ ಲಂಚದ ಬೇಡಿಕೆ ಇಟ್ಟಿದ್ದರು. ರಫೀಕ್ ಎಂಬವರ ಬಳಿ 2.5 ಲಕ್ಷ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಸಂಬಂಧ ರಫೀಕ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. 1.5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದಿದ್ದಾರೆ. ಅದಕ್ಕೂ ಮೊದಲೇ ಫುಡ್ ಇನ್‌ಸ್ಪೆಕ್ಟರ್ 1 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದ. ಸದ್ಯ ಇಬ್ಬರನ್ನೂ ಬಂಧಿಸಿ ಲೊಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Fraud Case: ಆರೋಪಿಯೂ ನಕಲಿ, ಮಾಲೀಕನೂ ನಕಲಿ; ಎಲ್ಲಾ ಮೋಸ; ನ್ಯಾಯಾಲಯಕ್ಕೇ ಹತ್ತಾರು ಬಾರಿ ವಂಚನೆ!