ನವದೆಹಲಿ: ಸಿಬಿಐ, ಕಸ್ಟಮ್ಸ್, ಮಾದಕ ದ್ರವ್ಯ ಮತ್ತು ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸುತ್ತಿದ್ದ ಗ್ಯಾಂಗ್ ವೊಂದು (Fake CBI Gang) ಬಹುರಾಷ್ಟ್ರೀಯ ಕಂಪನಿಯ ನಿವೃತ್ತ ಹಿರಿಯ ಅಧಿಕಾರಿಯೊಬ್ಬರಿಗೆ (retired officer) 85 ಲಕ್ಷ ರೂ. ವಂಚಿಸಿರುವ ಕುರಿತು ಆಂಧ್ರಪ್ರದೇಶದ (andrapradesh) ವಿಶಾಖಪಟ್ಟಣಂ (Visakhapatnam) ಮತ್ತು ದೆಹಲಿಯಲ್ಲಿ (delhi) ಪ್ರಕರಣ ದಾಖಲಿಸಲಾಗಿದೆ.
ಹಣವನ್ನು ಚೆಕ್ ಮೂಲಕ ಪಡೆದ ಗ್ಯಾಂಗ್ ದೆಹಲಿಯ ಉತ್ತಮ್ ನಗರದಲ್ಲಿ ಹೆಚ್‌ಡಿಎಫ್‌ಸಿ ಖಾತೆಯನ್ನು ನಿರ್ವಹಿಸುತ್ತಿದ್ದ ‘ರಾಣಾ ಗಾರ್ಮೆಂಟ್ಸ್’ ಎಂಬ ಕಂಪನಿಗೆ ವರ್ಗಾಯಿಸಿದೆ. ವಿಶಾಖಪಟ್ಟಣಂನಲ್ಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಗ್ಯಾಂಗ್ ‘ರಾಣಾ ಗಾರ್ಮೆಂಟ್ಸ್’ ನಡೆಸುತ್ತಿದ್ದ ಎಚ್‌ಡಿಎಫ್‌ಸಿ ಖಾತೆಯಿಂದ ಭಾರತದಾದ್ಯಂತ 105 ಖಾತೆಗಳಿಗೆ ಈ ಹಣವನ್ನು ವರ್ಗಾಯಿಸಿದೆ. ಈ ಕುರಿತು ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಉತ್ತಮ್ ನಗರ ಶಾಖೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಭಾರತದಾದ್ಯಂತ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿರುವ ಜರ್ಮನಿಯ ಪ್ರಧಾನ ಕಚೇರಿಯ ಫಾರ್ಮಾ ಸಂಸ್ಥೆಯೊಂದರ 57 ವರ್ಷದ ನಿವೃತ್ತ ಅಸೋಸಿಯೇಟ್ ಜನರಲ್ ಮ್ಯಾನೇಜರ್ ವಂಚನೆಯ ಕುರಿತು ಪ್ರತಿಕ್ರಿಯಿಸಿದ್ದು, ನನಗೆ ಮೂರು ವರ್ಷಗಳ ಸೇವೆ ಉಳಿದಿತ್ತು. ಆದರೆ ಮಗನನ್ನು ಕಾಲೇಜಿಗೆ ಕಳುಹಿಸಲು ಸಮಯ ಬೇಕಾಗಿದ್ದರಿಂದ ಸ್ವಯಂ ನಿವೃತ್ತಿ ತೆಗೆದುಕೊಂಡೆ. ಮೇ 2ರಂದು ನಿವೃತ್ತಿ ಪರಿಹಾರ ಸಿಕ್ಕಿದೆ. ಮಗನ ವೀಸಾ ನೇಮಕಾತಿ ಮೇ 17ರಂದು ಆಗಿತ್ತು. ಆದರೆ ಮೇ 14ರಂದು, ನನ್ನ ದಾಖಲೆಗಳನ್ನು ಪರಿಶೀಲಿಸಿದ ಅನಂತರ ಹಿಂದಿರುಗಿಸುವುದಾಗಿ ಹೇಳಿ 85 ಲಕ್ಷ ರೂ.ವನ್ನು ಕಳುಹಿಸುವಂತೆ ಗ್ಯಾಂಗ್ ನನ್ನನ್ನು ವಂಚಿಸಿರುವುದಾಗಿ ಹೇಳಿದ್ದಾರೆ.
ವಿಶಾಖಪಟ್ಟಣಂ ಕ್ರೈಂ ಬ್ರಾಂಚ್ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ವಿಶಾಖಪಟ್ಟಣಂನಲ್ಲಿರುವ ಬ್ಯಾಂಕ್‌ನಲ್ಲಿ ಕೆಲವರು ಇದರಲ್ಲಿ ಭಾಗಿಯಾಗಿರಬಹುದು. ಯಾಕೆಂದರೆ ಗ್ಯಾಂಗ್‌ಗೆ ನಿವೃತ್ತಿಯ ಅನಂತರ ಅವರು ಪಡೆದ ನಿಖರವಾದ ಮೊತ್ತ ಸೇರಿದಂತೆ ಅವರ ಖಾತೆಯ ಬಗ್ಗೆ ಎಲ್ಲವೂ ತಿಳಿದಿತ್ತು. ಹತ್ತಿರದ ಹೆಚ್‌ಡಿಎಫ್‌ಸಿ ಬ್ಯಾಂಕ್‌ಗೆ ಹೋಗಿ ಚೆಕ್ ಡ್ರಾಪ್ ಮಾಡಲು ಗ್ಯಾಂಗ್ ಹೇಳಿತು ಎಂದು ನಿವೃತ್ತ ಅಧಿಕಾರಿ ದೂರಿದ್ದಾರೆ.
ಕ್ರೈಂ ಬ್ರಾಂಚ್ ವಿಶಾಖಪಟ್ಟಣಂನಲ್ಲಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಿಂದ ಹಲವಾರು ದಾಖಲೆಗಳನ್ನು ತೆಗೆದುಕೊಂಡಿದೆ. ಅವರು ಬ್ಯಾಂಕ್ ಅಧಿಕಾರಿಗಳನ್ನು ಭೇಟಿಯಾದಾಗ ಪ್ರಕರಣ ಕುರಿತು ಪ್ರತಿಕ್ರಿಯಿಸಲು ಬ್ಯಾಂಕ್ ನಿರಾಕರಿಸಿದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ಉತ್ತಮ್ ನಗರ ಶಾಖೆಯ ಪೊಲೀಸರು ರಾಣಾ ಗಾರ್ಮೆಂಟ್ಸ್ ಗೆ ಭೇಟಿ ನೀಡಿದ್ದಾರೆ. ರಾಣಾ ಗಾರ್ಮೆಂಟ್ಸ್ ಮಾಲೀಕರು ಈ ಸ್ಥಳವನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ನಿವೃತ್ತ ಅಧಿಕಾರಿ ಹೇಳಿದರು.
ನಿವೃತ್ತಿ ಅಧಿಕಾರಿಯ ಬ್ಯಾಂಕ್ ಖಾತೆಗೆ ಹಣ ಜಮೆಯಾದ ಬಳಿಕ ಡಿಸಿಪಿ ಸೈಬರ್ ಕ್ರೈಮ್ ಬಾಲ್ಸಿಂಗ್ ರಜಪೂತ್ ಎಂದು ಹೇಳಿ ಒಬ್ಬ ವ್ಯಕ್ತಿ ಕರೆ ಮಾಡಿದ್ದೂ, ಹಲವಾರು ಮಾದಕ ದ್ರವ್ಯ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ತಮ್ಮ ಹೆಸರು ಬಂದಿದೆ ಮತ್ತು ಈ ಎಲ್ಲಾ ಪ್ರಕರಣಗಳಿಗೆ ಅವರ ಆಧಾರ್ ಲಿಂಕ್ ಮಾಡಲಾಗಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: Murder Case : ಬಾಡಿಗೆ ಹಣ ಪಡೆಯಲು ಕಿರಿಕ್; ಬೆಡ್ ರೂಮ್‌ನಲ್ಲೇ ಪತ್ನಿ ಕೊಂದಿದ್ದ ಹಂತಕ ಅರೆಸ್ಟ್
ಎಫ್ ಐ ಆರ್ ನಲ್ಲಿ ಏನಿದೆ?
ಇನ್ನೊಬ್ಬ ಕರೆ ಮಾಡಿ ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಬೇಕಿದೆ. ಕೂಡಲೇ ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದರು. ನಕಲಿ ಡಿಸಿಪಿ ಸ್ವಲ್ಪ ಹೊತ್ತು ಮಾತನಾಡಿ, ನೀವು ನಿರಪರಾಧಿಯಂತೆ ಕಾಣುತ್ತೀರಿ. ಹೀಗಾಗಿ 85 ಲಕ್ಷ ರೂ. ವನ್ನು ತನಿಖೆಗಾಗಿ ತೆಗೆದುಕೊಂಡು ಏನೂ ತಪ್ಪಿಲ್ಲ ಎಂದು ಕಂಡುಬಂದರೆ ಮರಳಿ ಕೊಡುವುದಾಗಿ ಹೇಳಿದ್ದರು. ಸ್ಕೈಪ್‌ನಲ್ಲಿ ಎರಡು ದಿನಗಳ ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮನೆಯಿಂದ ಹೊರಹೋಗಲು ಅಥವಾ ಯಾರಿಗೂ ಕರೆ ಮಾಡಲು ಅವರು ಬಿಡಲಿಲ್ಲ ಎಂದು ನಿವೃತ್ತ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.
ವಂಚನೆ ಬಗ್ಗೆ ಎಚ್ಚರವಿರಲಿ
ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಪತ್ತೆಯಾದ ಮಾಹಿತಿಗಳ ಬಗ್ಗೆ ವಿವರಣೆ ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಅಪರಿಚಿತ ಸಂಖ್ಯೆಗಳಿಂದ ವಾಟ್ಸಾಪ್ ವಿಡಿಯೋ ಕರೆಗಳಿಗೆ ಉತ್ತರಿಸದಂತೆ ನಿವೃತ್ತ ಅಧಿಕಾರಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ವಿಶಾಖಪಟ್ಟಣ ಸೈಬರ್ ಪೊಲೀಸರಿಗೆ 300 ಕೋಟಿ ರೂ. ವಂಚನೆ ಮೊತ್ತದ ಕುರಿತು ದೂರುಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.