ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಅವರ ಪತ್ನಿ ಅಮೃತಾ ಫಡ್ನವಿಸ್ (Amruta Fadnavis) ಅವರಿಗೆ ಒಂದು ಕೋಟಿ ರೂಪಾಯಿ ಲಂಚದ ಆಮಿಷವೊಡ್ಡಿದ ಹಿನ್ನೆಲೆಯಲ್ಲಿ ಫ್ಯಾಷನ್ ಡಿಸೈನರ್ ಮಹಿಳೆಯೊಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈ ನ್ಯಾಯಾಲಯವು ಫ್ಯಾಷನ್ ಡಿಸೈನರ್ ಅನೀಕ್ಷಾ ಅನಿಲ್ ಜೈಸಿಂಘಾನಿಯನ್ನು (Aniksha Anil Jaisinghani) ಮಾರ್ಚ್ 21ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಅನೀಕ್ಷಾ ಜೈಸಿಂಘಾನಿಯು ಲಂಚದ ಆಮಿಷದ ಜತೆಗೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಅಮೃತಾ ಫಡ್ನವಿಸ್ ಅವರು ಫೆಬ್ರವರಿ 20ರಂದು ಮಲಬಾರ್ ಹಿಲ್ ಪೊಲೀಸರಿಗೆ ದೂರು ನೀಡಿದ್ದರು. ಫ್ಯಾಷನ್ ಡಿಸೈನರ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಅದರಂತೆ, ಪೊಲೀಸರು ಫ್ಯಾಷನ್ ಡಿಸೈನರ್ ಅನೀಕ್ಷಾರನ್ನು ಬಂಧಿಸಿ, ಶುಕ್ರವಾರ ಕೋರ್ಟ್‌ಗೆ ಹಾಜರುಪಡಿಸಿದರು. ನ್ಯಾಯಾಲಯವು ಅವರನ್ನು ಪೊಲೀಸ್ ಕಸ್ಟಡಿಗೆ ವಹಿಸಿದ್ದಾರೆ.
ಏನಿದು ಪ್ರಕರಣ?
ಜುವೆಲ್ಲರಿ, ಬಟ್ಟೆ, ಫುಟ್‌ವೇರ್ ಡಿಸೈನರ್ ಎಂದು ಹೇಳಿಕೊಂಡ ಅನೀಕ್ಷಾ ಜೈಸಿಂಘಾನಿಯು, 2021ರ ನವೆಂಬರ್‌ನಲ್ಲಿ ಅಮೃತಾ ಫಡ್ನವಿಸ್ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತು ಅಮೃತಾ ಅವರೇ ದೂರಿನಲ್ಲಿ ಉಲ್ಲೇಖಿಸಿದ್ದಾರೆ. “ಕಳೆದ 16 ತಿಂಗಳಿಂದ ನನಗೆ ಪರಿಚಯವಾಗಿರುವ ಅನೀಕ್ಷಾ ಸಿಂಘಾನಿಯು, ತನ್ನ ತಂದೆಯ ವಿರುದ್ಧದ ಕೇಸ್ ಖುಲಾಸೆಗೊಳಿಸಬೇಕು ಎಂಬುದಾಗಿ ಹೇಳಿದ್ದಾರೆ. ಇದಕ್ಕಾಗಿ ಲಂಚದ ಆಮಿಷವೊಡ್ಡಿದ್ದಾರೆ” ಎಂದು ತಿಳಿಸಿದ್ದಾರೆ.
“ನನಗೆ ವಾಯ್ಸ್ ನೋಟ್ಸ್ ಹಾಗೂ ವಿಡಿಯೊಗಳನ್ನು ಕಳುಹಿಸಿ ಒಂದು ಕೋಟಿ ರೂಪಾಯಿಯ ಲಂಚದ ಆಮಿಷವೊಡ್ಡಿದ್ದಾರೆ. ಹಾಗೆಯೇ, ಕೆಲವೊಮ್ಮೆ ನನಗೆ ಬೆದರಿಕೆ ಹಾಕಿದ್ದಾರೆ. ತನ್ನ ತಂದೆಯ ವಿರುದ್ಧದ ಪ್ರಕರಣ ಖುಲಾಸೆಗೊಳಿಸಲು ನೆರವು ನೀಡಿ ಎಂದು ಪದೇಪದೆ ಒತ್ತಾಯಿಸುತ್ತಿದ್ದಾರೆ” ಎಂಬುದಾಗಿ ಅಮೃತಾ ಫಡ್ನವಿಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅನೀಕ್ಷಾ ತಂದೆ ಯಾರು?
ಅನೀಕ್ಷಾ ಜೈಸಿಂಘಾನಿಯ ತಂದೆಯು ಬೆಟ್ಟಿಂಗ್ ದಂಧೆಕೋರನಾಗಿದ್ದಾನೆ. ಬೆಟ್ಟಿಂಗ್ ಬುಕ್ಕಿ ಆಗಿರುವ ಅನಿಲ್ ಜೈಸಿಂಘಾನಿಯನ್ನು ಈಗಾಗಲೇ ಮೂರು ಬಾರಿ ಪೊಲೀಸರು ಬಂಧಿಸಿದ್ದಾರೆ. ಆದರೂ, ಅನಿಲ್ ವಿರುದ್ಧ ಹಲವು ಕ್ರಿಮಿನಲ್ ಕೇಸ್‌ಗಳು ದಾಖಲಾಗಿದ್ದು, ತಲೆಮರೆಸಿಕೊಂಡಿದ್ದಾನೆ. ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗಲೇ ಅನಿಲ್ ವಿರುದ್ಧ ಹೆಚ್ಚಿನ ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ. ಅನಿಲ್ ವಿರುದ್ಧ ಸುಮಾರು 15 ಕೇಸ್ ದಾಖಲಾಗಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದೇವೇಂದ್ರ ಫಡ್ನವಿಸ್ ಬಂಧನಕ್ಕೆ ಮುಂದಾಗಿದ್ದ ಉದ್ಧವ್ ಸರ್ಕಾರ! ಮಹಾರಾಷ್ಟ್ರ ಸಿಎಂ ಶಿಂಧೆ ಮಾಹಿತಿ