ಬೆಂಗಳೂರು: ಸಿನಿಮಾ ನಿರ್ಮಾಣ ಮಾಡಿ ನಷ್ಟ ಅನುಭವಿಸಿದ ಸ್ಯಾಂಡಲ್‌ವುಡ್ ನಿರ್ಮಾಪಕನೊಬ್ಬ ಅಡ್ಡದಾರಿಯಲ್ಲಿ ಹಣ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಜತೆಗೆ ಅವನ ಮೂವರು ಸಹಚರರರು ಕೂಡಾ ಕಂಬಿ ಎಣಿಸುತ್ತಿದ್ದಾರೆ.
ಅಡ್ಡ ದಾರಿ ಹಿಡಿದ ನಿರ್ಮಾಪಕನ ಹೆಸರು ಮಂಜುನಾಥ್. ಕಾಮಿಡಿ ಸ್ಟಾರ್ ಕೋಮಲ್ ಕುಮಾರ್ ಅಭಿನಯದ ಲೊಡ್ಡೆ ಸಿನಿಮಾವನ್ನು ನಿರ್ಮಿಸಿದ್ದ ಮಂಜುನಾಥ ಭಾರಿ ನಷ್ಟ ಅನುಭವಿಸಿದ್ದರು. ಚಿತ್ರ ಸಂಪೂರ್ಣವಾಗಿ ನೆಲ ಕಚ್ಚಿದ್ದರಿಂದ ಹಾಕಿದ ಕೋಟ್ಯಂತರ ರೂ. ನೀರಿನಲ್ಲಿಟ್ಟ ಹೋಮದಂತಾಗಿತ್ತು. ಹೀಗೆ ಕೈ ಸುಟ್ಟುಕೊಂಡ ಅವರು ಹಣವನ್ನು ಮರಳಿ ಪಡೆಯಲು ಆರಿಸಿಕೊಂಡಿದ್ದು ಮಾತ್ರ ವಂಚನೆಯ ದಾರಿಯನ್ನು.
ರಿಯಲ್ ಎಸ್ಟೇಟ್ ವ್ಯವಹಾರ
ನಷ್ಟ ಭರ್ತಿಗಾಗಿ ಅವರು ಆರಿಸಿಕೊಂಡಿದ್ದು ರಿಯಲ್ ಎಸ್ಟೇಟ್ ಕ್ಷೇತ್ರವನ್ನು. ಆದರೆ, ಅಲ್ಲಿ ಒಳ್ಳೆಯ ದಾರಿಯಲ್ಲಿ ಹೋಗಲಿಲ್ಲ. ಬದಲಾಗಿ ಅಡ್ಡ ದಾರಿ ಹಿಡಿದರು. ರಾಜಾಜಿನಗರದಲ್ಲಿ ಸೈಟ್, ನಿವೇಶನಗಳನ್ನು ಮಾರಾಟ ಮಾಡಿಸು ಕಂಪನಿ ಆರಂಭಿಸಿದರು. ಈಗಲ್ ಟ್ರೀ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಡಾಟ್ ಎಂಬ ಹೆಸರಲ್ಲಿ ಕಚೇರಿ ಶುರು ಮಾಡಿದರು. ಈ ಬಗ್ಗೆ ಹಲವು ಜಾಹಿರಾತು ನೀಡಲಾಗಿತ್ತು. ಜಾಹೀರಾತು ನೋಡಿ ಪುಷ್ಪಕುಮಾರ್ ಎಂಬ ವ್ಯಕ್ತಿ ನಿರ್ಮಾಪಕ ಮಂಜುನಾಥ್ ಅವರನ್ನು ಸಂಪರ್ಕಿಸಿದ್ದರು.
ಆಗ ಮಂಜುನಾಥ್ ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ಪಷ್ಪಕುಮಾರ್‌ಗೆ ಭರವಸೆ ನೀಡಿದರು. ಅಲ್ಲದೆ, ಹಂತ ಹಂತವಾಗಿ 2 ಲಕ್ಷ ರೂ. ಹಣವನ್ನು ಪಡೆದರು. ಯಾರದ್ದೋ ಸೈಟ್ ತೋರಿಸಿ ಅದನ್ನು ಕೊಡಿಸುವುದಾಗಿ ಪುಷ್ಪಕುಮಾರ್‌ಗೆ ನಂಬಿಸಿದ್ದರು. ಆದರೆ ಪುಷ್ಪರಾಜ್ ದಾಖಲೆಗಳನ್ನು ತೋರಿಸಲು ಮಂಜುನಾಥ್‌ಗೆ ಕೇಳಿಕೊಂಡರು. ದಾಖಲೆಗಳು ಲಭ್ಯವಿಲ್ಲದಿದ್ದಾಗ ಮಂಜುನಾಥ್ ಅವರ ಬಂಡವಾಳ ಬಯಲಾಗಿದೆ.
ಈ ಬಗ್ಗೆ ಪುಷ್ಪಕುಮಾರ್ ಕೂಡಲೇ ರಾಜಾಜಿನಗರ ಠಾಣೆಗೆ ದೂರು ನೀಡಿದರು. ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ನಿರ್ಮಾಪಕ ಮಂಜುನಾಥ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಧನ ಸಹಾಯದ ಮೆಸೆಜ್ ಕಳುಹಿಸಿ ಚಂದ್ರಶೇಖರ ಕಂಬಾರ ಹೆಸರಿನಲ್ಲಿ ವಂಚನೆ