ಹಾಸನ: ತನ್ನ ಕಣ್ಣೆದುರೇ ಜಮೀನಿನ ಬೆಳೆ (Agriculture field) ಬೆಂಕಿಗೆ ಆಹುತಿಯಾಗಿ (Fire Accident) ಹೊತ್ತಿ ಉರಿಯುತ್ತಿದ್ದುದನ್ನು ಕಂಡು ಏನು ಮಾಡುವುದೆಂದು ತಿಳಿಯದೆ ರೈತ ಮಹಿಳೆ (Woman Farmer) ಬೆಂಕಿಯನ್ನು ನಂದಿಸಲು ಮುನ್ನುಗ್ಗಿ ತಾನೇ ಬೆಂಕಿಗೆ ಆಹುತಿಯಾಗಿದ್ದಾರೆ.
ಹಾಸನ ಜಿಲ್ಲೆ (Hasana News) ಆಲೂರು ತಾಲ್ಲೂಕಿನ ಹಾಚಗೋಡನಹಳ್ಳಿ ಗ್ರಾಮದಲ್ಲಿ ಬೆಂಕಿ ಆರಿಸಲು ಹೋದ ರೈತ ಮಹಿಳೆಯೇ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ರತ್ನಮ್ಮ (63) ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ ರೈತ ಮಹಿಳೆ.
ಮಾರ್ಚ್ 24ರ ಭಾನುವಾರ ರಾತ್ರಿ ರತ್ನಮ್ಮ ಅವರು ತಮ್ಮ ಜಮೀನಿಗೆ ಬೆಂಕಿ ಬಿದ್ದ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ್ದರು. ಕಣ್ಣೆದುರೇ ಬೆಳೆ ನಾಶವಾಗುತ್ತಿತ್ತು. ಏನು ಮಾಡುವುದೆಂದು ತಿಳಿಯದಾದ ರತ್ನಮ್ಮ ತಾವೇ ಮುನ್ನುಗ್ಗಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಅದು ಅವರ ಕೈ ಮೀರಿದ ಬೆಂಕಿಯಾಗಿತ್ತು. ಜೋರಾಗಿ ಉರಿಯುತ್ತಿದ್ದ ಬೆಂಕಿಗೆ ಸಿಲುಕಿದ ರತ್ನಮ್ಮ ಬೆಂಕಿಯಿಂದ ಹೊರಬರಲಾರದೆ ಸ್ಥಳದಲ್ಲೇ ಮೃತಪಟ್ಟರು.
ಸ್ಥಳೀಯರು ಅವರನ್ನು ರಕ್ಷಿಸಲು ಯತ್ನಿಸಿದರೂ ಫಲ ಸಿಗಲಿಲ್ಲ. ರತ್ನಮ್ಮ ಅವರ ಮೃತದೇಹವನ್ನು ಆಲೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಇದಾಗಿದೆ. ಇದೇ ಠಾಣೆ ವ್ಯಾಪ್ತಿಯಲ್ಲಿ ವಾರದ ಹಿಂದೆ ಮತ್ತೊಬ್ಬರು ಬೆಂಕಿ ಆರಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದರು.
ಇದನ್ನೂ ಓದಿ : Fire Accident: ದೇಗುಲದಲ್ಲಿ ಅಗ್ನಿ ದುರಂತ; 13 ಜನಕ್ಕೆ ಗಾಯ, ಸಿಎಂ ಸ್ವಲ್ಪದರಲ್ಲೇ ಪಾರು!
ರಸ್ತೆಯಲ್ಲಿ ಉರುಳಿ ಬಿದ್ದು ಹೊತ್ತ ಉರಿದ ಸ್ಪಿರಿಟ್ ಟ್ಯಾಂಕರ್
ವಿಜಯಪುರ: ಸ್ಪಿರಿಟ್ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಒಂದು ರಸ್ತೆ ಪಕ್ಕಕ್ಕೆ ಉರುಳಿ ಬಿದ್ದು ಬೆಂಕಿಯಲ್ಲಿ ಸುಟ್ಟು ಹೋದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹೊರಭಾಗದ ಕಲಬುರಗಿ ಬೈ ಪಾಸ್ ಬಳಿ ಘಟನೆ ನಡೆದಿದೆ.
ರಸ್ತೆಯಲ್ಲಿ ಸಾಗುತ್ತಿದ್ದ ಸ್ಪಿರಿಟ್ ಟ್ಯಾಂಕರ್ ಒಮ್ಮಿಂದೊಮ್ಮೆಗೇ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ರಸ್ತೆ ಪಕ್ಕದಲ್ಲಿ ಬೀಳುತ್ತಲೇ ಬೆಂಕಿ ಹೊತ್ತಿಕೊಂಡಿದೆ.
ಈ ನಡುವೆ, ಟ್ಯಾಂಕರ್ ಉರುಳಿ ಬೀಳುತ್ತಲೇ ಚಾಲಕ ಮತ್ತು ಕ್ಲೀನರ್ ವಾಹನದಿಂದ ಜಿಗಿದು ತಪ್ಪಿಸಿಕೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಸಿಂದಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಇದಾಗಿದೆ.