Site icon Vistara News

ACB raid| ಮೊದಲ ಬಾರಿಗೆ ಹಾಲಿ ಶಾಸಕ ಜಮೀರ್‌ ಮನೆಗೆ ಎಸಿಬಿ ಭರ್ಜರಿ ದಾಳಿ, ಬೆಂಬಲಿಗರ ಪ್ರತಿಭಟನೆ

acb

ಬೆಂಗಳೂರು: ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ (Aniti corruption bureau-ACB) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಶಾಸಕರೊಬ್ಬರ ಮನೆಗೆ ದಾಳಿ ನಡೆಸಿದೆ. ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಅವರ ನಿವಾಸ ಮತ್ತು ಕಚೇರಿಗೆ ಇಂದು ಬೆಳ್ಳಂಬೆಳಗ್ಗೆ ಭಾರಿ ದಾಳಿ ನಡೆಸಿದೆ.

ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದಾಗ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಮನೆಯಲ್ಲೇ ಇದ್ದರು. ಬೆಂಗಳೂರಿನ ಕಂಟೋನ್ಮೆಂಟ್‌ ವಲಯದಲ್ಲಿರುವ ಐಷಾರಾಮಿ ಬಂಗಲೆ, ಸದಾಶಿವ ನಗರದ ಫ್ಲ್ಯಾಟ್‌ ಸೇರಿದಂತೆ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

ಎಸಿಬಿ ರಚನೆ ಆದ ಬಳಿಕ ಇದುವರೆಗೆ ನಾನಾ ಇಲಾಖೆಗಳ ಭ್ರಷ್ಟ ಅಧಿಕಾರಿಗಳನ್ನು ಬೇಟೆಯಾಡಿತ್ತು. ಆದರೆ ಉನ್ನತ ಮಟ್ಟದ ಅಧಿಕಾರಿಗಳು, ಹಾಲಿ ಶಾಸಕರ ವಿರುದ್ಧ ಇಂಥ ದಾಳಿ ನಡೆದಿರಲಿಲ್ಲ. ಐಎಎಸ್‌, ಐಪಿಎಸ್‌, ಎಂಎಲ್‌ಎಗಳು ಎಸಿಬಿ ಬಲೆಗೆ ಬಿದ್ದಿರಲಿಲ್ಲ.

ಲೋಕಾಯುಕ್ತ ಇದ್ದಾಗ ಶಾಸಕರ ಮನೆ ಮೇಲೆ ದಾಳಿ

ಲೋಕಾಯುಕ್ತ ಇದ್ದಾಗ ವೈ ಸಂಪಂಗಿ ಸೇರಿದಂತೆ ಕೆಲ ಶಾಸಕರ ಮನೆ ಮೇಲೆ ದಾಳಿ ನಡೆದಿತ್ತು. ಆದರೆ ಲೋಕಾಯುಕ್ತ ಹೋಗಿ ಎಸಿಬಿ ರಷನೆಯಾದ ಬಳಿಕ ಇದುವರೆಗೂ ಯಾವೊಬ್ಬ ಶಾಸಕನ ಮನೆ-ಕಚೇರಿ ಮೇಲೆ ದಾಳಿ ನಡೆದಿರಲಿಲ್ಲ. ಎಸಿಬಿ ಕಲೆಕ್ಷನ್‌ ಸೆಂಟರ್‌ ಆಗಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಸಂದೇಶ್‌ ಛೀಮಾರಿ ಹಾಕಿದ್ದರು.

ಬೆಂಬಲಿಗರಿಂದ ಪ್ರತಿಭಟನೆ

ಶಾಸಕ ಜಮೀರ್‌ ಮನೆ ಮತ್ತು ಕಚೇರಿ ಮೇಲೆ ಎಸಿಬಿ ದಾಳಿಯನ್ನು ಖಂಡಿಸಿ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸುತ್ತಿದ್ದಾರೆ. ಕೆಎಸ್‌ಆರ್‌ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸದಾಶಿವ ನಗರದ ಫ್ಲ್ಯಾಟ್‌ ಮೇಲೆ ದಾಳಿ

ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಸದಾಶಿವ ನಗರದಲ್ಲಿ ಹೊಂದಿರುವ ಐಷಾರಾಮಿ ಫ್ಲ್ಯಾಟ್‌ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಫ್ಲ್ಯಾಟ್‌ ಅನ್ನು ಜಮೀರ್‌ ಅವರು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದ್ದರು. ಆದರೆ ಸಂಬಂಧ ಹಳಸಿದ ಬಳಿಕ ಅದೇ ಫ್ಲ್ಯಾಟ್‌ ಅನ್ನು ವಾಪಸ್‌ ಪಡೆದಿದ್ದರು.

ಇದನ್ನೂ ಓದಿರಿ:‌ACB raid| ಕಾಂಗ್ರೆಸ್ ಶಾಸಕ ಜಮೀರ್‌ ಅಹ್ಮದ್‌ ಖಾನ್ ಮನೆ‌, ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ

Exit mobile version