ಬೆಂಗಳೂರು: ನೀವು ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದರೂ ಕಾನೂನಿನ ಸುಳಿಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಅಡಗುದಾರಿಗಳು ಇರುತ್ತವೆ. ಆದರೆ, ವನ್ಯಜೀವಿ ಸಂರಕ್ಷಣಾ ಕಾಯಿದೆಯಿಂದ (Wildlife Protection Act, 2022-Amendment) ಬಚಾವಾಗುವುದು ಅಷ್ಟು ಸುಲಭವಲ್ಲ. ಯಾಕೆಂದರೆ, ಇದು ಹಲವಾರು ಒಳಸುಳಿಗಳು ಇರುವ ಚಕ್ರವ್ಯೂಹ. ಒಳಗೆ ಹೋದರೆ ಸಿಕ್ಕಾಕಿಕೊಂಡಂತೆಯೇ. ಇದಕ್ಕೆ ಅತ್ಯುತ್ತಮ ಉದಾಹರಣೆ ಚಿತ್ರ ನಟ ಸಲ್ಮಾನ್ ಖಾನ್ (Salman Khan). ಸಲ್ಮಾನ್ ಖಾನ್ ಮುಂಬಯಿಯಲ್ಲಿ ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಹಲವರ ಸಾಮೂಹಿಕ ನರಮೇಧಕ್ಕೆ (Mass Genocide) ಕಾರಣವಾದರೂ ಅದರಲ್ಲಿ ಹೇಗೋ ಬಚಾವಾಗಿದ್ದಾರೆ. ಅದರೆ, ಒಂದು ಗುಂಪಿನ ಭಾಗವಾಗಿ ಕೃಷ್ಣ ಮೃಗವನ್ನು ಕೊಂದ ಪ್ರಕರಣದಲ್ಲಿ (Forest act) ಜೈಲು ಪಾಲಾಗಬೇಕಾದ ಸನ್ನಿವೇಶ ಎದುರಾಗಿದೆ. ಪ್ರತಿ ದಿನ ಎನ್ನುವಂತೆ ಅದು ಬೆನ್ನಟ್ಟುತ್ತಲೇ ಇದೆ.
ಈಗ ರಾಜ್ಯದಲ್ಲಿ ಹುಲಿಯುಗುರು ಧರಿಸಿದ ಪ್ರಕರಣ ದೊಡ್ಡ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಸ್ಪರ್ಧಿಯಾಗಿದ್ದ ರೈತ ವರ್ತೂರು ಸಂತೋಷ್ ಅವರನ್ನು ದೊಡ್ಮನೆಯಿಂದಲೇ ಅರೆಸ್ಟ್ ಮಾಡಿದ ಬಳಿಕ ಸಾರ್ವಜನಿಕ ವಲಯದಲ್ಲಿ ಇದು ಭಾರಿ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕರು ಗಣ್ಯರು, ಸೆಲೆಬ್ರಿಟಿಗಳು, ಜನಸಾಮಾನ್ಯರ ಚಿತ್ರಗಳನ್ನು ಹಾಕಿ ಅವರು ಹುಲಿಯುಗುರು ಧರಿಸಿದ್ದು ಅವರ ವಿರುದ್ಧವೂ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಿ ಎಂಬ ಕೂಗೆದ್ದಿತ್ತು. ಒತ್ತಡಕ್ಕೆ ಮಣಿದ ಅರಣ್ಯಾಧಿಕಾರಿಗಳು ಈಗ ಚಿತ್ರ ನಟರಾದ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವರ ಮನೆಗೆ ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ಅವರಿಂದ ಹುಲಿಯುಗುರಿನ ಪೆಂಡೆಂಟ್ ಪಡೆದು ತಪಾಸಣೆಗೆ ಕಳುಹಿಸಿದ್ದಾರೆ. ಹಲವು ಸ್ವಾಮೀಜಿಗಳು ಕೂಡಾ ಈ ಬಲೆಯಲ್ಲಿದ್ದಾರೆ. ಅರ್ಚಕರನ್ನು ಬಂಧಿಸಲಾಗಿದೆ.
ಹಾಗಿದ್ದರೆ ಈ ಪ್ರಕರಣಗಳು ಮುಂದೆ ಏನಾಗುತ್ತವೆ? ಸಾಮಾಜಿಕ ಜಾಲತಾಣದ ಗುರುತಿಸಲಾಗುವ ಎಲ್ಲರನ್ನು ಅರಣ್ಯಾಧಿಕಾರಿಗಳು ವಿಚಾರಣೆ ಮಾಡುತ್ತಾರಾ? ಈ ರೀತಿ ಸಿಕ್ಕಿಬಿದ್ದರೆ ಏನಾಗುತ್ತದೆ? ಎಂಬುದನ್ನು ತಿಳಿಯಬೇಕಾದರೆ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಬಲವನ್ನು ಗಮನಿಸಬೇಕು.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಮೊದಲು ಜಾರಿಗೆ ಬಂದಿದ್ದು 1972ರಲ್ಲಿ. ಇದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಅತ್ಯಂತ ಬಲಿಷ್ಠವಾದ ಕಾಯಿದೆಯಾಗಿದೆ. ಇದನ್ನು 1982, 1991, 1993, 2002 ಮತ್ತು 2006ರಲ್ಲಿ ತಿದ್ದುಪಡಿ ಮಾಡಲಾಗಿದೆ. 2022ರಲ್ಲಿ ಕಾಯಿದೆ 50 ವರ್ಷದ ತುಂಬಿದ ಹಿನ್ನೆಲೆಯಲ್ಲಿಯೂ ತಿದ್ದುಪಡಿ ಮಾಡಲಾಗಿದೆ. ಈಗ ಜಾರಿಯಲ್ಲಿರುವುದು ವನ್ಯಜೀವಿ ಸಂರಕ್ಷಣಾ ಕಾಯಿದೆ (2022) ತಿದ್ದುಪಡಿ.
ಕಾಯಿದೆಯ ಮುಖ್ಯ ಉದ್ದೇಶ ಏನು?
ಇಂದಿರಾ ಗಾಂಧಿ ಅವರು ಜಾರಿಗೆ ತಂದಿರುವ ಕಾಯಿದೆಯ ಮೂಲ ಉದ್ದೇಶ ವನ್ಯಜೀವಿಗಳ ಬೇಟೆಯನ್ನು ತಡೆಯುವುದು. ಅದರ ಜತೆಗೆ ವನ್ಯಜೀವಿ ಪ್ರದೇಶಗಳು ಮತ್ತು ಆ ಪ್ರದೇಶಗಳಲ್ಲಿನ ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳ ರಕ್ಷಣೆ ಮತ್ತು ನಿರ್ವಹಣೆ, ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಂತಹ ಹೊಸ ಸಂರಕ್ಷಿತ ಪ್ರದೇಶಗಳನ್ನು ಸ್ಥಾಪಿಸುವುದು ಹಾಗೂ ಅಕ್ರಮ ವನ್ಯಜೀವಿ ವ್ಯಾಪಾರದ ನಿಯಂತ್ರಣ ಮಾಡುವುದು ಉದ್ದೇಶಗಳಾಗಿ ಬೆರೆತಿವೆ.
ರಾಷ್ಟ್ರೀಯ ಮತ್ತು ರಾಜ್ಯ ವನ್ಯಜೀವಿ ಮಂಡಳಿ, ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳ ಸ್ಥಾಪನೆಯೂ ಇದೇ ಕಾಯಿದೆಯ ಅವಕಾಶಗಳಡಿ ನಡೆದಿದೆ. ಇದು ಪ್ರಾಣಿಗಳ ರಕ್ಷಣೆಯ ನಿಟ್ಟಿನಲ್ಲಿ ಹೊಸ ಹಾದಿ ತೋರಿದೆ.
ಕಾಯಿದೆಯಲ್ಲಿ ಏನೇನಿದೆ?
- ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯಿದೆಯಲ್ಲಿ ಈಗ ನಾಲ್ಕು ಶೆಡ್ಯೂಲ್‌ಗಳಿವೆ.
- ಶೆಡ್ಯೂಲ್ I: ಅಳಿವಿನಂಚಿನಲ್ಲಿರುವ ಪ್ರಾಣಿಗಳು ಸೇರಿದಂತೆ ಹೆಚ್ಚಿನ ಮಟ್ಟದ ರಕ್ಷಣೆಯ ಅಗತ್ಯ ಇರುವ ಪ್ರಾಣಿ ಪ್ರಭೇದಗಳು ಈ ಶೆಡ್ಯೂಲ್‌ನಲ್ಲಿವೆ. ಈ ಪಟ್ಟಿಯಲ್ಲಿರುವ ಪ್ರಾಣಿಗಳ ಬೇಟೆ, ಮಾಂಸ ಮಾರಾಟ ಅಥವಾ ಸಾಕುವುದು ಕೂಡಾ ನಿಷೇಧ.
- . ಶೆಡ್ಯೂಲ್ II: ಸ್ವಲ್ಪ ಕಡಿಮೆ ಮಟ್ಟದ ರಕ್ಷಣೆಗೆ ಒಳಪಡುವ ಪ್ರಾಣಿ ಪ್ರಭೇದಗಳಿವೆ. ಇವುಗಳ ಮಾರಾಟಕ್ಕೆ ನಿಷೇಧವಿದೆ.
- ಶೆಡ್ಯೂಲ್ III: ಇದರಲ್ಲಿ ಸಂರಕ್ಷಿತ ಸಸ್ಯ ಜಾತಿಗಳು ಸೇರಿವೆ. ಜತೆಗೆ ಶೆಡ್ಯೂಲ್ I ಮತ್ತು ಶೆಡ್ಯೂಲ್ IIಕ್ಕಿಂತ ಕಡಿಮೆ ಮಟ್ಟದ ರಕ್ಷಣೆ ಹೊಂದಿರುವ ಪ್ರಾಣಿಗಳನ್ನು ಸೇರಿಸಲಾಗಿದೆ.
- ಶೆಡ್ಯೂಲ್ IV: ಇದರಲ್ಲಿ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯವರ್ಗದ ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶ (CITES) ಅಡಿಯಲ್ಲಿ ಅನುಬಂಧಗಳಲ್ಲಿ ಪಟ್ಟಿ ಮಾಡಲಾದ ಪ್ರಾಣಿಗಳು ಬರುತ್ತವೆ. ಇದು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದ ವಿಭಾಗವಾಗಿದೆ.
ಕಾಡು ಪ್ರಾಣಿಗಳ ಯಾವುದೇ ವಸ್ತುವನ್ನು ಇಟ್ಟುಕೊಳ್ಳುವಂತಿಲ್ಲ
ಕಾಯಿದೆಯ ಪ್ರಕಾರ ವನ್ಯಜೀವಿಗಳಿಗೆ ಸೇರಿದ ಯಾವುದೇ ಅಂಗಾಂಗಳು ಸರ್ಕಾರದ ಆಸ್ತಿಯಾಗಿರುತ್ತದೆ. ಅದನ್ನು ಬೇರೆ ಯಾರೂ ಹೊಂದುವಂತಿಲ್ಲ. ಈ ಕಾರಣಕ್ಕಾಗಿ ವನ್ಯಜೀವಿಗಳ ದೇಹದ ವಸ್ತುಗಳನ್ನು ಬಳಸಬಾರದು. ವನ್ಯಜೀವಿ ಅಂಗಾಗಗಳನ್ನು ಹೊಂದುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಕಲಂ 9, 19, 40, 42, 44, 48 ಎ, 49ಎ, 49ಬಿ, 51:52 58 ರ ಪ್ರಕಾರ ಅಪರಾಧವಾಗಿದೆ.
-ಸತ್ತ ಆನೆಗಳ ಯಾವ ಅಂಗಾಂಗಳನ್ನು ಇಟ್ಟುಕೊಳ್ಳೋಕೆ ಅವಕಾಶವಿಲ್ಲ. ಒಂದ್ವೇಳೆ ಆನೆ ಸತ್ತರೆ ಉಗುರು, ಕೂದಲು, ದಂತಗಳನ್ನು ಬಳಸಬಾರದು. ನಿಯಮ ಮರೆತು ಬಳಕೆ ಮಾಡಿದ್ರೆ ವನ್ಯಜೀವ ಕಾಯ್ದೆ ಪ್ರಕಾರ ಶಿಕ್ಷೆ ಆಗಲಿದೆ.
-ಆನೆ ಸತ್ತರೆ ಅದನ್ನು ಹೂಳಬಾರದು,ಸುಡಲೇಬೇಕು. ಆನೆ ದೇಹ ಸಂಪೂರ್ಣವಾಗಿ ಸುಟ್ಟು ಹೋಗೋವರೆಗೆ ನಿಗಾ ಇಡಬೇಕು. ಆನೆ ದೇಹ ಸುಟ್ಟ ನಂತರ ಅದರ ಮೂಳೆಗಳನ್ನು ನೀರಿನಲ್ಲಿ ಬಿಡಬೇಕು ಎನ್ನುವುದು ನಿಯಮ
– ಸತ್ತ ಹುಲಿಯ ಯಾವ ಭಾಗಗಳನ್ನೂ ಇಟ್ಟುಕೊಳ್ಳಲು ಕಾನೂನಿನಡಿ ಅವಕಾಶ ಇಲ್ಲ.
-ಮೃತ ಜಿಂಕೆಯ ಯಾವ ಭಾಗಗಳನ್ನೂ ಇಟ್ಟುಕೊಳ್ಳಲು ಅವಕಾಶ ಇಲ್ಲ. ಕೃಷ್ಣಮೃಗ, ಪಚ್ಚೆ ಜಿಂಕೆ ಇದರ ಅಂಗಗಳನ್ನೂ ಇಟ್ಟುಕೊಳ್ಳುವಂತಿಲ್ಲ.
– -ನವಿಲು ಗರಿಯನ್ನು ಇಟ್ಟುಕೊಳ್ಳುವುದಕ್ಕೆ ಅವಕಾಶ ಇದೆ. ಆದರೆ ನವಿಲನ್ನು ಹತ್ಯೆ ಮಾಡಿ ಗರಿಗಳನ್ನು ಇಟ್ಕೊಳ್ಳುವಂತಿಲ್ಲ.
ಹಾಗಿದ್ದರೆ ಕೆಲವರ ಬಳಿ ಇದೆಯಲ್ಲಾ? ಅನುಮತಿ ಇದೆಯಾ?
– ನಾವು ಜಿಂಕೆಗಳ ಕೊಂಬುಗಳನ್ನು ಗೋಡೆಯ ಮೇಲೆ ಹಾಕಿರುವುದನ್ನು ಕಾಣುತ್ತೇವೆ. ಹಾಗೆ ಹಾಕಬೇಕು ಎಂದಾದರೆ ಅದಕ್ಕೆ ವಲಯದ ಅರಣ್ಯ ಅಧಿಕಾರಿಗಳಿಂದ ಅನುಮತಿ ಕಡ್ಡಾಯ.
-ಸತ್ತ ಕಾಡು ಪ್ರಾಣಿಗಳ ವಸ್ತುಗಳನ್ನು ಇಟ್ಟುಕೊಳ್ಳಬೇಕು ಅಂದರೆ ವನ್ಯ ಸಂರಕ್ಷಣ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಲೇಬೇಕು. ಲೈಸೆನ್ಸ್ ಪಡೆದು ಬಳಸಬಹುದು.
-ಒಂದು ವೇಳೆ ಮನೆಯಲ್ಲಿ ಹಿಂದಿನಿಂದಲೇ ಈ ವಸ್ತುಗಳು ಇವೆಯೆಂದು ಇಟ್ಟುಕೊಂಡರೂ ಅದನ್ನು ಅರಣ್ಯಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರವಾನಿಗೆ ಪಡೆದಿರಬೇಕು. ಇದು ಹಿಂದಿನಿಂದ ಬಂದಿದೆ ಎನ್ನುವುದು ಕಾರಣವಾಗುವುದಿಲ್ಲ.
– ಯಾರಾದರೂ ಇದು ನಕಲಿ, ಕೃತಕ ಎಂದು ಹೇಳಿ ತಪ್ಪಿಸಿಕೊಳ್ಳುವಂತಿಲ್ಲ. ಅವರ ಬಳಿ ಇರುವ ವಸ್ತು ಯಾವುದು ಎಂದು ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡುತ್ತದೆ.
-ಇದು ಬಹುಹಳೆಯದು ಎಂದು ನಂಬಿಸಲೂ ಸಾಧ್ಯವಿಲ್ಲ. ಅದಕ್ಕೆ ಎಷ್ಟು ವರ್ಷ ಆಗಿದೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ.
– ಸಿಕ್ಕಿರುವ ದಂತ, ಉಗುರು ಯಾವ ಹುಲಿ, ಆನೆಯದ್ದು ಎಂಬುದರ ಬಗ್ಗೆಯು ಹಿಂದಿನ ದಾಖಲೆಗಳ ಪರಿಶೀಲನೆ ನಡೆಯುತ್ತದೆ. ಹಿಂದೆ ನಿಗೂಢವಾಗಿ ಸತ್ತ ಹುಲಿ, ಆನೆಗೆ ಸಂಬಂಧಿಸಿದ ವಸ್ತು ಇದಾಗಿದ್ದರೆ ಆ ಪ್ರಾಣಿಗಳ ಕೊಲೆ ತನಿಖೆಗೂ ಇದು ಕನೆಕ್ಟ್ ಆಗುತ್ತದೆ.
ತಪ್ಪಿತಸ್ಥರಿಗೆ ಏನು ಶಿಕ್ಷೆ ಕಾದಿದೆ?
– ವನ್ಯಜೀವಿಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡದ್ದು ಸಾಬೀತಾದರೆ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ.
-ನ್ಯಾಯಾಲಯದಲ್ಲಿ ಸಾಬೀತಾದರೆ ಮೂರರಿಂದ ಏಳು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.
-ಆರೋಪ ಸಾಬೀತಾದರೆ 3 ರಿಂದ 7 ವರ್ಷಗಳವರೆಗೆ ಶಿಕ್ಷೆ ಆಗುತ್ತದೆ. 10,000 ರಿಂದ 25,000ದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ.