ಬೆಂಗಳೂರು: ಜನರಿಗೆ ಈಗ ಸೈಬರ್ ವಂಚನೆ, ಫೋನ್ ಮಾಡಿ ಮೋಸ ಮಾಡುವವರ ಬಗ್ಗೆ ಸಾಕಷ್ಟು ಪರಿಚಯ ಆಗಿದೆ. ಆದರೆ ವಂಚಕರು (Fraud Case) ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಾ ಜನರನ್ನು ತಮ್ಮ ಬಲೆಗೆ ಬೀಳಿಸುತ್ತಲೇ ಇದ್ದಾರೆ. ಬೆಂಗಳೂರಿನ ಟೆಕ್ಕಿ ಯುವತಿಯೊಬ್ಬರು (Techie woman) ಇಂಥಹುದೇ ಜಾಲದ ಕೈಗೆ ಸಿಲುಕಿ ಈಗಾಗಲೇ 96 ಸಾವಿರ ರೂ. ಕಳೆದುಕೊಂಡಿದ್ದಾರೆ. ಅವರಿಗೆ ವಾಹನ ಹಿಟ್ ಅಂಡ್ ರನ್ (Hit and run Case) ಆಗಿದೆ, ನಿಮ್ಮ ಖಾತೆಯಿಂದ ಉಗ್ರರ ಅಕೌಂಟ್‌ಗಳಿಗೆ ಹಣ (Terror Funding) ಹೋಗಿದೆ ಎಂದೆಲ್ಲ ಹೆದರಿಸಿ ಹಣ ವಸೂಲಿ ಮಾಡಲಾಗಿದೆ.
ಸೈಬರ್ ಕ್ರಿಮಿನಲ್‌ಗಳು (Cyber Criminals) ಬೆಂಗಳೂರಿನ ಐಟಿ ಉದ್ಯೋಗಿಯಾಗಿರುವ ಮಹಿಳೆಗೆ ಕರೆ ಮಾಡಿ ನಿಮ್ಮ ವಾಹನ ಹಿಟ್ ಅಂಡ್ ರನ್‌ನಲ್ಲಿ ಭಾಗಿಯಾಗಿದೆ ಎಂದು ಹೇಳಿದ್ದರು. ವಿದ್ಯಾವಂತೆಯೇ ಆಗಿರುವ ಆಕೆಯನ್ನೂ ನಂಬಿಸಿ ಆಕೆಯ ಅಕೌಂಟ್ ನಂಬರ್ ಪಡೆದುಕೊಂಡು ಅದರ ಪರಿಶೀಲನೆ ಮಾಡಿದಂತೆ ಮಾಡಿ ಟೆರರ್ ಫಂಡಿಂಗ್ ಆರೋಪವನ್ನು ಮಾಡಿ ಹೆದರಿಸಲಾಗಿದೆ.
ಮಾನ್ಯತಾ ಟೆಕ್ ಪಾರ್ಕ್ ನಿವಾಸಿಯಾಗಿರುವ 26 ವರ್ಷದ ಮೋನಿಕಾ ಚೌಹಾನ್ ಎಂಬವರೇ ಈ ರೀತಿ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡವರು. ಅವರು ತಾವು 96 ಸಾವಿರ ರೂ. ಕಳೆದುಕೊಂಡಿದ್ದಾಗಿ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ವಂಚನೆಯ ಘಟನೆ ನಡೆದಿರುವುದು ಆಗಸ್ಟ್ 26ರಂದು ರಾತ್ರಿ. ಆವತ್ತು ಮಧ್ಯರಾತ್ರಿ ಮೋನಿಕಾ ಅವರಿಗೆ ಒಂದು ಆಟೋಮೇಟೆಡ್ ಫೋನ್ ಕಾಲ್ ಬರುತ್ತದೆ. ಅಂದರೆ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಕಾಲ್. ಅದರಲ್ಲಿ ಮಾತನಾಡುವ ಧ್ವನಿ ನೀವು ಮುಂಬಯಿಯಲ್ಲಿ ಒಂದು ಟ್ರಾಫಿಕ್ ಉಲ್ಲಂಘನೆ ಕೇಸಿನಲ್ಲಿ ಭಾಗಿಯಾಗಿದ್ದೀರಿ, ಅದಕ್ಕೆ ಸಂಬಂಧಿಸಿ ನಿಮಗೆ ಕೋರ್ಟ್‌ನಿಂದ ಚಲನ್ ಬಂದಿದೆ ಎಂದು ಹೇಳಲಾಗುತ್ತದೆ.
ನೀವು ಈ ವಿಷಯದಲ್ಲಿ ಆರ್‌ಟಿಒ ಅವರನ್ನು ಮಾತನಾಡಲು ಬಯಸುತ್ತೀರಿ ಎಂದರೆ 1ನ್ನು ಒತ್ತಿ ಎಂದು ತಿಳಿಸಲಾಗುತ್ತದೆ. ಮೋನಿಕಾ ಅವರು 1ನ್ನು ಪ್ರೆಸ್ ಮಾಡಿದಾಗ ಕಾಲ್ ಮುಂಬಯಿಯ ಅಂಧೇರಿಯ ಆರ್‌ಟಿಒ ಅಧಿಕಾರಿ ಎಂದು ಹೇಳಲಾದ ವ್ಯಕ್ತಿಗೆ ಕನೆಕ್ಟ್ ಆಗುತ್ತದೆ.
ಕಾಲ್ ರಿಸೀವ್ ಮಾಡಿದ ಅವನು, ಮೋನಿಕಾ ಅವರೇ ನಿಮ್ಮ ವಾಹನ ಹಿಟ್ ಎಂಡ್ ರನ್ ಕೇಸಿನಲ್ಲಿ ಭಾಗಿಯಾಗಿದೆ. ಈ ವಿಚಾರದಲ್ಲಿ ನೀವು ಮುಂಬಯಿಯಲ್ಲಿ ನಡೆಯುವ ಕೋರ್ಟ್ ಕಲಾಪಕ್ಕೆ ಬರಬೇಕಾಗುತ್ತದೆ ಎಂದಿದ್ದಾನೆ. ಆಗ ಮೋನಿಕಾ ಅವರು ʻನಾನು ಮುಂಬಯಿಯಲ್ಲಿಲ್ಲ, ಬೆಂಗಳೂರಿನಲ್ಲಿದ್ದೇನೆʼ ಎನ್ನುತ್ತಾರೆ. ಆಗ ಆ ಆರ್‌ಟಿಒ ಅಧಿಕಾರಿ, ಈ ವಿಚಾರದಲ್ಲಿ ನೀವು ಮುಂಬಯಿ ಪೊಲೀಸ್ ಅಧಿಕಾರಿಗೆ ಮಾತನಾಡಬೇಕಾಗುತ್ತದೆ. ಅವರಿಗೆ ಕರೆ ಟ್ರಾನ್ಸ್‌ಫರ್ ಮಾಡುತ್ತೇನೆ ಎನ್ನುತ್ತಾರೆ.
ಮುಂದೆ ಮಾತನಾಡುವುದು ಮುಂಬಯಿಯ ಪೊಲೀಸ್ ಅಧಿಕಾರಿ. ಅವನ ಜತೆ ಮಾತನಾಡಿದ ಮೋನಿಕಾ ಅವರು, ʻʻನಾನು ಇರುವುದು ಬೆಂಗಳೂರಿನಲ್ಲಿ. ನನ್ನ ಬಳಿ ಯಾವುದೇ ವೆಹಿಕಲ್ ಇಲ್ಲ ಮತ್ತು ನಾನು ಇತ್ತೀಚೆಗೆ ಮುಂಬಯಿಗೆ ಹೋಗೇ ಇಲ್ಲʼʼ ಎಂದು ವಿವರಿಸುತ್ತಾರೆ. ಆಗ ಆ ಪೊಲೀಸ್ ಅಧಿಕಾರಿ, ನಾನು ನಿಮಗೆ ಸ್ಕೈಪ್ ಮೂಲಕ ಕನೆಕ್ಟ್ ಆಗುತ್ತೇನೆ. ಆಗ ನೀವು ನಿಮ್ಮ ಹೇಳಿಕೆ ದಾಖಲಿಸಲು ಅನುಕೂಲವಾಗುತ್ತದೆʼʼ ಎಂದಿದ್ದಾನೆ. ಅದರ ಜತೆಗೆ ತಾನೊಬ್ಬ ಪೊಲೀಸ್ ಅಧಿಕಾರಿ ಎನ್ನುವುದನ್ನು ಋಜುವಾತುಪಡಿಸಲು ಐಡೆಂಟಿಟಿ ಕಾರ್ಡ್ ಕೂಡಾ ಕಳುಹಿಸುತ್ತಾನೆ.
ಮೋನಿಕಾ ಅವರು ಸ್ಕೈಪ್ ಮೂಲಕ ಜಾಯಿನ್ ಆಗಿ ತಮ್ಮ ಹೇಳಿಕೆಯನ್ನು ದಾಖಲಿಸುತ್ತಾರೆ. ಅಷ್ಟು ಹೊತ್ತಿಗೆ ಆ ಕಡೆಯಲ್ಲಿರುವ ವ್ಯಕ್ತಿ ಆಕೆಯ ಆಧಾರ್ ಮತ್ತು ಇತರ ದಾಖಲೆಗಳನ್ನು ಪಡೆದುಕೊಳ್ಳುತ್ತಾನೆ. ಆಧಾರ್ ಕಾರ್ಡ್ ಕಳುಹಿಸಿದ ಬೆನ್ನಿಗೇ ಆತ ʻನೀವು ಹಲವಾರು ಅಕೌಂಟ್‌ಗಳನ್ನು ಹೊಂದಿದ್ದೀರಿ. ಇದನ್ನು ಟೆರರ್ ಫಂಡಿಂಗ್‌ಗೆ ಬಳಸಲಾಗುತ್ತಿದೆʼ ಎಂದು ಹೆದರಿಸುತ್ತಾನೆ.
ಮೋನಿಕಾ ಅವರು ನಾನು ಅಂಥ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳುತ್ತಾರಾದರೂ ಆತ ಕೇಳುವುದಿಲ್ಲ. ನಮ್ಮ ಫೈನಾನ್ಸ್ ಟೀಮ್ ನಿಮ್ಮನ್ನು ಸಂಪರ್ಕ ಮಾಡುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್‌ಗಳನ್ನು ಪರಿಶೀಲಿಸಲಾಗುತ್ತದೆ ಎಂದು ಹೇಳುತ್ತಾನೆ.
ನಿಮಗೆ ಭಾರಿ ಕಾನೂನು ಸಮಸ್ಯೆಯಾಗುತ್ತದೆ ಎಂದೆಲ್ಲ ಹೆದರಿಸಿದ ಬಳಿಕ ಮೋನಿಕಾ ಅವರು ಹಣಕಾಸು ಅಧಿಕಾರಿ ಎಂದು ಹೇಳಲಾದ ವ್ಯಕ್ತಿಯನ್ನು ಸಂಪರ್ಕ ಮಾಡುತ್ತಾರೆ. ಆತ ಬೇರೆ ಬೇರೆ ರೀತಿಯಲ್ಲಿ ಮೋನಿಕಾ ಅವರನ್ನು ಮಾತನಾಡಿಸಿ, ಆಕೆಯ ಕೈಯಿಂದ ಒಂದು ಅಕೌಂಟ್‌ಗೆ 48,325 ರೂ. ಹಾಕಿಸುತ್ತಾನೆ. ಈ ಮೊತ್ತವನ್ನು ಹಣಕಾಸು ವ್ಯವಹಾರದ ಎಲ್ಲ ದಾಖಲೆ ಪರಿಶೀಲನೆ ಬಳಿಕ ಮರಳಿಸಲಾಗುತ್ತದೆ ಎನ್ನುತ್ತಾನೆ. ಬಳಿಕ ಅಷ್ಟೇ ಮೊತ್ತವನ್ನು ಇನ್ನೊಂದು ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಿಸಿಕೊಳ್ಳಲಾಗುತ್ತದೆ.
ಇದನ್ನೂ ಓದಿ: Fraud Case : ಚೀಟಿ ಕಟ್ಟಿಸಿಕೊಂಡು ಕೋಟಿಗಟ್ಟಲೆ ಚೀಟಿಂಗ್ ಮಾಡಿದ ಖತರ್ನಾಕ್ ಫ್ಯಾಮಿಲಿ
ಇದೆಲ್ಲವೂ ಕೆಲವೇ ಗಂಟೆಗಳಲ್ಲಿ ನಡೆದು ಹೋಗುತ್ತದೆ. ಈ ನಡುವೆ ಮೋನಿಕಾ ಅವರು ತಮ್ಮ ಗೆಳೆಯರೊಬ್ಬರಿಗೆ ಕರೆ ಮಾಡಿ ಹೀಗೀಗೆಲ್ಲ ಆಯಿತು ಎಂದು ವಿವರಿಸುತ್ತಾರೆ. ಆಗ ಆ ವ್ಯಕ್ತಿ ಇದೆಲ್ಲವೂ ನಕಲಿ, ಹಣ ಕಳುಹಿಸಬೇಡಿ ಎಂದು ಹೇಳುತ್ತಾರೆ. ಇಷ್ಟು ಹೊತ್ತಿಗೆ ಮತ್ತೆ ಕರೆ ಬರುತ್ತದೆ. ಅದರಲ್ಲಿ ನಿರ್ದಿಷ್ಟ ಮೊತ್ತವನ್ನು ಕಳುಹಿಸಲು ಸೂಚಿಸಲಾಗುತ್ತದೆ. ಆದರೆ, ಆಕೆ ಈಗ ನಿರಾಕರಿಸುತ್ತಾರೆ, ಫೋನ್ ಕಟ್ ಮಾಡುತ್ತಾರೆ.
ಇದೀಗ ಯುವತಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪೊಲೀಸರು ಐಟಿ ಕಾಯಿದೆ ಮತ್ತು ವಂಚನೆ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.