ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಚಿನ್ನದ ಮೌಲ್ಯ ಹೆಚ್ಚಾಗಿ ಜನರು ಕಂಡಕಂಡಲ್ಲಿ ಚಿನ್ನದ ವಿಚಾರದಲ್ಲಿ ಮೋಸ, ವಂಚನೆ ಮಾಡುತ್ತಿದ್ದಾರೆ. ಚಿನ್ನಕ್ಕಾಗಿ ಜನರ ಪ್ರಾಣವನ್ನು ತೆಗೆಯುತ್ತಿದ್ದಾರೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಚಿನ್ನದ ಕಳ್ಳತನ ಪ್ರಕರಣ ಹೆಚ್ಚಾಗಿದೆ ಇದರ ಜೊತಗೆ ಚಿನ್ನವೆಂದು ನಂಬಿಸಿ ವಂಚನೆ ಮಾಡುವ ಪ್ರಕರಣ (Fraud Case) ಹೆಚ್ಚಾಗಿದ್ದಾರೆ. ಇಂತಹದೊಂದು ಘಟನೆ ಜೈಪುರದಲ್ಲಿ ನಡೆದಿದೆ.
ರಾಜಸ್ಥಾನದ ಅಂಗಡಿ ಮಾಲೀಕನೊಬ್ಬ 300 ರೂ. ಮೌಲ್ಯದ ಕೃತಕ ಆಭರಣಕ್ಕೆ 6 ಕೋಟಿ ರೂಪಾಯಿ ಬೆಲೆಗೆ ಅಮೇರಿಕಾದ ಮಹಿಳೆಗೆ ಮಾರಾಟ ಮಾಡಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಚಿನ್ನದ ಪಾಲಿಶ್ ಇರುವ ಬೆಳ್ಳಿ ಆಭರಣ ಮಾರಾಟ
ರಾಜಸ್ಥಾನದ ಜೈಪುರದ ಜೊಹ್ರಿ ಬಜಾರ್ ನಲ್ಲಿರುವ ಅಂಗಡಿಯೊಂದರಲ್ಲಿ ಅಮೇರಿಕಾದ ಮಹಿಳೆ ಚೆರಿಶ್ ಅವರು ಚಿನ್ನ ಖರೀದಿಸಿದ್ದಾರೆ. ಆಗ ಅಂಗಡಿಯ ಮಾಲೀಕ ಚಿನ್ನದ ಪಾಲಿಶ್ ಇರುವ 300ರೂ ಬೆಲೆಯ ಬೆಳ್ಳಿ ಆಭರಣಕ್ಕೆ 6 ಕೋಟಿ ರೂಪಾಯಿ ಬೆಲೆ ಹೇಳಿ ಮಾರಾಟ ಮಾಡಿದ್ದಾನೆ. ಮಹಿಳೆ ಈ ವರ್ಷ ಏಪ್ರಿಲ್ ನಲ್ಲಿ ಅಮೇರಿಕಾದಲ್ಲಿ ನಡೆದ ಪ್ರದರ್ಶನದಲ್ಲಿ ತಾನು ಜೈಪುರದಲ್ಲಿ ಖರೀದಿಸಿದ ಆಭರಣವನ್ನು ಪ್ರದರ್ಶಿಸಿದಾಗ ಅದು ನಕಲಿ ಎಂಬುದಾಗಿ ತಿಳಿದುಬಂದಿದೆ. ಆಗ ಮಹಿಳೆ ಭಾರತಕ್ಕೆ ಬಂದು ಅಂಗಡಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.
ಅಂಗಡಿ ಮಾಲೀಕ ಗೌರವ್ ಸೋನಿ ಎಂಬುದಾಗಿ ತಿಳಿದುಬಂದಿದೆ. ಈತ ತನ್ನ ಕೃತ್ಯವನ್ನು ಒಪ್ಪಿಕೊಳ್ಳದ ಕಾರಣ ಮಹಿಳೆ ಜೈಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿಗಳು ಮಹಿಳೆಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಹಾಗಾಗಿ ಮಹಿಳೆ ಯುಎಸ್ ನ ರಾಯಭಾರ ಕಚೇರಿಯಿಂದ ಸಹಾಯ ಕೋರಿದ್ದಾಳೆ. ಅವರು ಈ ಬಗ್ಗೆ ತನಿಖೆ ನಡೆಸುವಂತೆ ಜೈಪುರ ಪೊಲೀಸರಿಗೆ ಒತ್ತಾಯಿಸಿದ್ದಾರೆ.
2022ರಲ್ಲಿ ಇನ್ ಸ್ಟಾಗ್ರಾಂನಲ್ಲಿ ಗೌರವ್ ಸೋನಿಯನ್ನು ಸಂಪರ್ಕಿಸಿದ ಮಹಿಳೆ ಕಳೆದ 2 ವರ್ಷಗಳಲ್ಲಿ ಈ ಕೃತಕ ಆಭರಣಗಳಿಗಾಗಿ 6 ಕೋಟಿ ರೂಪಾಯಿಗಳನ್ನು ಪಾವತಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಗೌರವ್ ಮತ್ತು ಆತನ ತಂದೆ ರಾಜೇಂದ್ರ ಸೋನಿ ಇಬ್ಬರು ಪರಾರಿಯಾಗಿದ್ದಾರೆ. ಹಾಗಾಗಿ ಪೊಲೀಸರು ಅವರಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದು, ಅದಕ್ಕಾಗಿ ವಿಶೇಷ ತಂಡವನ್ನು ರಚಿಸಿದ್ದಾರೆ. ಹಾಗೇ ಆಭರಣಕ್ಕೆ ನಕಲಿ ಪ್ರಮಾಣಪತ್ರ ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:Anupam Kher-Rajinikanth: ಮೋದಿ ಪ್ರಮಾಣವಚನ ವೇಳೆ ರಜನಿಕಾಂತ್‌ಗೆ ಅನುಪಮ್ ಖೇರ್ ಹೇಳಿದ್ದೇನು? ವಿಡಿಯೊ ನೋಡಿ!
ಅಲ್ಲದೇ ಅಂಗಡಿ ಮಾಲೀಕರು ಇತ್ತೀಚೆಗೆ 3 ಕೋಟಿ ರೂ. ಮೌಲ್ಯದ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಒಟ್ಟಾರೆ ಈ ಪ್ರಕರಣದಿಂದ ವಿದೇಶದವರ ಮುಂದೆ ಭಾರತದ ಮರ್ಯಾದೆ ತೆಗೆದ ಹಾಗಾಗಿದೆ. ವಿದೇಶಿ ಮಹಿಳೆಗೆ ನಮ್ಮ ದೇಶದಲ್ಲಿ ಈ ರೀತಿ ವಂಚಿಸಿದ್ದು, ಘೋರ ಕೃತ್ಯವೇ ಸರಿ. ಹಾಗಾಗಿ ಈ ಪ್ರಕರಣವನ್ನು ಪೊಲೀಸರು ಬೇಗನೆ ತನಿಖೆ ನಡೆಸಿ ಅದರ ಸತ್ಯವನ್ನು ಕಂಡುಹಿಡಿಯುವುದು ಬಹಳ ಮುಖ್ಯವಾಗುತ್ತದೆ. ಇಲ್ಲವಾದರೆ ವಿದೇಶದಲ್ಲಿ ಭಾರತೀಯರ ಮರ್ಯಾದೆ ಹರಾಜಾಗುವುದಂತು ಖಂಡಿತ.