Site icon Vistara News

Fraud Case : ಪೊಲೀಸ್‌ ಅಧಿಕಾರಿ ಎಂದು ನಂಬಿಸಿ ಯುವತಿಯ ಮೇಲೆ ಅತ್ಯಾಚಾರ, ಬ್ಲ್ಯಾಕ್‌ಮೇಲ್; ನಾಟಕ ಕಲಾವಿದ ಅರೆಸ್ಟ್‌

Fraud case against drama actor

ಮಂಗಳೂರು: ಪೊಲೀಸ್‌ ಅಧಿಕಾರಿ (Police officer) ಎಂದು ನಂಬಿಸಿ ವ್ಯಕ್ತಿಯೊಬ್ಬ ಯುವತಿಯ (student in Mangalore) ಮೇಲೆ ನಿರಂತರ ಅತ್ಯಾಚಾರ (Physical abuse) ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಇದೀಗ ಈ ನಕಲಿ ಪೊಲೀಸ್‌ ಅಧಿಕಾರಿಯನ್ನು (Fake police officer) ಮಂಗಳೂರು ಪೊಲೀಸರು (Mangalore Police) ಬಂಧಿಸಿದ್ದಾರೆ. ರಾಯಚೂರಿನ ಯಮನೂರ ಎಂಬಾತನೇ ಈ ರೀತಿಯಾಗಿ ಮೋಸ (Fraud Case) ಮಾಡಿದವನು.

ರಾಯಚೂರು ಮೂಲದ ಯಮನೂರ ಬೀದಿ ನಾಟಕ ಕಲಾವಿದನಾಗಿದ್ದಾನೆ ಎಂದು ಹೇಳಲಾಗಿದ್ದು, ತಾನೊಬ್ಬ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಮಂಗಳೂರಿನಲ್ಲಿ ವಿದ್ಯಾರ್ಥಿನಿಯನ್ನು ಬಲೆಗೆ ಹಾಕಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಈ ಯುವತಿಗೆ ಯಮನೂರ ಪರಿಚಯವಾಗಿದ್ದು ಇನ್‌ಸ್ಟಾಗ್ರಾಂನಲ್ಲಿ. ನೋಡಲು ಸ್ಟೈಲಿಷ್‌ ಆಗಿರುವ ಈತ ಆಕೆಯನ್ನು ಇನ್‌ಸ್ಟಾ ಮೂಲಕವೇ ಸಂಪರ್ಕಿಸಿದ್ದಾನೆ. ತನ್ನ ಬಣ್ಣದ ಮಾತುಗಳಿಂದ ಆಕೆಯನ್ನು ತಾನೊಬ್ಬ ಪೊಲೀಸ್‌ ಅಧಿಕಾರಿಯೆಂದು ನಂಬಿಸಿದ್ದಾನೆ.

ಒಮ್ಮೆ ಸಾಮಾಜಿಕ ತಾಣದಲ್ಲಿ ಪರಿಚಯವಾದ ಆತ ನೇರವಾಗಿ ಮಂಗಳೂರಿಗೆ ಬಂದು ಆಕೆಯನ್ನು ಭೇಟಿಯಾಗಿದ್ದ. ತನಗೆ ಮಂಗಳೂರಿನಲ್ಲಿ ಪೊಲೀಸ್‌ ಅಧಿಕಾರಿಗಳ ಮೀಟಿಂಗ್‌ನಲ್ಲಿ ಭಾಗವಹಿಸಲು ಇದೆ ಎಂದು ಹೇಳಿದ್ದ ಆತ ಆಗಲೂ ಚೆನ್ನಾಗಿ ನಂಬಿಸಿದ್ದ.

ಯುವತಿಯ ವಿಶ್ವಾಸವನ್ನು ಗಳಿಸಿದ ಆತ ತಾನು ಪೊಲೀಸ್‌ ಅಧಿಕಾರಿಯಾಗಿರುವುದರಿಂದ ತನ್ನ ಪ್ರಭಾವ ಬಳಸಿ ಕೆಲಸ ತೆಗೆಸಿಕೊಡುವುದಾಗಿ ಹೇಳಿದ್ದ. ಉದ್ಯೋಗ ಹುಡುಕಾಟದ ನೆಪದಲ್ಲಿ ಆಕೆಯನ್ನು ಬೆಂಗಳೂರು ಸೇರಿದಂತೆ ನಾನಾ ಜಾಗಗಳಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಹೋದಾಗಲೆಲ್ಲ ಹೋಟೆಲ್‌ಗಳಲ್ಲಿ ರೂಮ್‌ ಮಾಡಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ.

ಇಷ್ಟೆಲ್ಲ ಆದ ಮೇಲೆ ಆತ ಕೆಲಸ ಕೊಡಿಸುವುದು ಬಿಡಿ, ಆಕೆಯನ್ನೇ ಬ್ಲ್ಯಾಕ್‌ಮೇಲ್‌ ಮಾಡಲು ಶುರು ಮಾಡಿದ್ದ. ಹಲವಾರು ಕಡೆಗಳಿಗೆ ಸುತ್ತಾಡಿಸಿದ್ದ ಆತ ಅಲ್ಲಿ ಆಕೆಗೆ ಯಾವ ಸಂಶಯವೂ ಬಾರದಂತೆ ಆಕೆಯ ನಗ್ನ ಚಿತ್ರಗಳನ್ನು ತೆಗೆದಿದ್ದ. ಇದನ್ನು ಬಳಸಿಕೊಂಡು ಆಕೆಯನ್ನು ಬ್ಲ್ಯಾಕ್‌ ಮೇಲ್‌ ಮಾಡಲು ಆರಂಭಿಸಿದ್ದ. ಹಣ ಕೊಡದಿದ್ದರೆ ಇವುಗಳನ್ನು ಸಾಮಾಜಿಕ ಜಾಲ ತಾಣಗಳಿಗೆ ಹಾಕುವುದಾಗಿ, ಆಕೆಯ ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ.

ಒಂದು ಕಡೆ ನಂಬಿದವನಿಂದಲೇ ಮೋಸ, ಇನ್ನೊಂದು ಕಡೆ ಅತ್ಯಾಚಾರ, ಮತ್ತೊಂದು ಕಡೆ ನಗ್ನ ಫೋಟೊ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್‌ ಮಾಡಿದ ಆತನ ಕೃತ್ಯಗಳಿಂದ ಬೇಸತ್ತ ಸಂತ್ರಸ್ತ ಯುವತಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: Physical Abuse : ಬೆಂಗಳೂರಿನಲ್ಲೊಂದು ಭಯಾನಕ ಕೃತ್ಯ; 10ರ ಬಾಲಕಿ ಮೇಲೆ ಕಾಮುಕ ಪ್ರಿನ್ಸಿಪಾಲ್‌ ಲೈಂಗಿಕ ದೌರ್ಜನ್ಯ

ತನಿಖೆ ನಡೆಸಿದ ಪೊಲೀಸರು ಆರೋಪಿ ಯಮನೂರನನ್ನು ರಾಯಚೂರಿನಿಂದ ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೀಗ ಪೊಲೀಸರು ಆತನ ಇನ್‌ಸ್ಟಾ ಗ್ರಾಂ ಖಾತೆ ಮತ್ತು ಮೊಬೈಲ್‌ಗಳನ್ನು ಪರಿಶೀಲಿಸುತ್ತಿದ್ದು, ಆತ ಬೇರೆ ಹುಡುಗಿಯರಿಗೂ ಮೋಸ ಮಾಡಿದ್ದಾನೆಯೇ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದೇ ವೇಳೆ, ಯುವತಿಯರು ಅಪರಿಚಿತರ ಜತೆ ಇಷ್ಟು ಸರಳವಾಗಿ ವ್ಯವಹರಿಸಿ ಮೋಸ ಹೋಗದಂತೆ ಎಚ್ಚರ ವಹಿಸಬೇಕು ಎಂದೂ ಪೊಲೀಸರು ಸಲಹೆ ನೀಡಿದ್ದಾರೆ.

Exit mobile version