ಬೆಂಗಳೂರು: ನಕಲಿ ವಜ್ರ ಇಟ್ಟುಕೊಂಟು ಅಸಲಿ ಎಂದು ನಂಬಿಸಿ ಕೋಟ್ಯಂತರ ರೂ. ವಂಚಿಸಲು (Fraud Case) ಮುಂದಾದ ಖದೀಮರ ಆಟಕ್ಕೆ ಉದ್ಯಮಿಯೊಬ್ಬರು (Businessman) ಬ್ರೇಕ್ ಹಾಕಿದ್ದಾರೆ. ಡೀಲ್‌ನಲ್ಲಿ ಪಡೆದ ವಜ್ರದ ಅಸಲಿಯತ್ತಿನ (Diamond Business) ಬಗ್ಗೆ ಸಂಶಯ ಬರುತ್ತಿದ್ದಂತೆಯೇ ಕೂಡಲೇ ಉದ್ಯಮಿ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಹೋಗಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಚರಣೆ ನಡೆದಿರುವುದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru International Airport) ಬಳಿಯ ಹೋಟೆಲ್‌ನಲ್ಲಿ.
ವಿಮಾನ ನಿಲ್ದಾಣದ ಸಮೀಪದ ಸ್ಟಾರ್ ಹೋಟೆಲ್‌ನಲ್ಲಿ ಈ ಡೀಲ್ ನಡೆದಿತ್ತು. ಆಂಧ್ರ ಮೂಲದ ಉದ್ಯಮಿಯೊಬ್ಬರಿಗೆ ಕಡಿಮೆ ರೇಟಿಗೆ ವಜ್ರ ಕೊಡುವುದಾಗಿ ಖದೀಮರು ನಂಬಿಸಿದ್ದರು. ವ್ಯಾಪಾರದ ಎಲ್ಲ ವ್ಯವಹಾರಗಳು ಮುಗಿಯುವ ಹಂತದಲ್ಲಿತ್ತು. ಆದರೆ, ಅವರ ಗ್ರಹಚಾರ ಸರಿ ಇರಲಿಲ್ಲ. ಹೀಗಾಗಿ ಅವರು ಜೈಲು ಸೇರಿದ್ದಾರೆ.
ರವಿ, ನವೀನ್ ಕುಮಾರ್, ಗೂರ್ ಅಹಮ್ಮದ್, ಹಾಗೂ ಅಬ್ದುಲ್ ದಸ್ತಗೀರ್ ಎಂಬವರೇ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಖದೀಮರು. ಎಲ್ಲರು ಬೆಂಗಳೂರಿನವರು. ಇವರು ವಂಚನೆ ಮಾಡಲು ಮುಂದಾಗಿದ್ದು ಆಂಧ್ರ ಮೂಲದ ಉದ್ಯಮಿ ಲಕ್ಷ್ಮೀನಾರಾಯಣ ಎಂಬವರಿಗೆ.
ಖದೀಮರಲ್ಲಿ ರವಿ ಎಂಬಾತನಿಗೆ ಉದ್ಯಮಿ ಲಕ್ಷ್ಮೀ ನಾರಾಯಣ ಎಂಬವರ ಪರಿಚಯವಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಅವರನ್ನು ಸ್ಟಾರ್ ಹೋಟೆಲ್‌ಗೆ ಕರೆಸಿಕೊಂಡಿದ್ದರು. ಬ್ಯುಸಿನೆಸ್ ಬಗ್ಗೆ ಮಾತನಾಡೋಣ ಎಂದು ಕರೆಸಿಕೊಂಡು ತಮ್ಮ ಬಳಿ 10 ಕೋಟಿ ಮೌಲ್ಯದ ವಜ್ರಗಳಿವೆ. ಅವುಗಳನ್ನು ಕೇವಲ ಮೂರು ಕೋಟಿಗೆ ಕೊಡುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ : Murder Case : ತಾಯಿಯನ್ನು ಚುಡಾಯಿಸಿದವನ ಮನೆಗೆ ನುಗ್ಗಿ ಹೊಡೆದು ಕೊಂದ ಮಗ
ಉದ್ಯಮಿ ಮತ್ತು ಖದೀಮರ ನಡುವಿನ ಮಾತುಕತೆ ವೇಳೆ ಖದೀಮರು ತಾವೇ ತಂದಿದ್ದ ಯಂತ್ರದ ಮೂಲಕ ವಜ್ರವನ್ನು ಪರೀಕ್ಷೆಗೆ ಒಳಪಡಿಸಿದರು. ಅಸಲಿ ಎಂದು ನಂಬಿಸಿದರು. ಉದ್ಯಮಿ ಲಕ್ಷ್ಮಿನಾರಾಯಣ್ ವಜ್ರಗಳನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಆರೋಪಿಗಳು ತಂದಿದ್ದ 10 ಡೈಮಂಡ್ ನಕಲಿ ಅನ್ನೋದು ಬಯಲಾಗಿತ್ತು.
ಅಷ್ಟು ಹೊತ್ತಿಗೆ ಖದೀಮರು ಅಲ್ಲಿಂದ ತಪ್ಪಿಸಿಕೊಂಡಿದರು. ಉದ್ಯಮಿ ಲಕ್ಷ್ಮಿನಾರಾಯಣ ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.