ಮಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭದ್ರತಾ ಕಣ್ಗಾವಲು ಇಡುವ ʻರಾʼ ಸಂಘಟನೆ (RAW – Research and Analysis wing) ಹೆಸರು ಕೇಳಿದರೆ ಸೇನೆಯ ಹೆಸರು ಕೇಳಿದಷ್ಟೇ ಹೆಮ್ಮೆ ಮೂಡುತ್ತದೆ. ಯಾಕೆಂದರೆ, ಇದು ಬಾಹ್ಯ ಶಕ್ತಿಗಳು ನಡೆಸುತ್ತಿರುವ ಎಲ್ಲ ಸಂಚುಗಳ ಮೇಲೆ ಕಣ್ಣಿಟ್ಟು ಅದನ್ನು ವಿಫಲಗೊಳಿಸುವ ಕೆಲಸವನ್ನು ಮಾಡುತ್ತಿದೆ. ಆದರೆ, ಇಲ್ಲೊಬ್ಬ ಭಂಡ ವಿದ್ಯಾರ್ಥಿ (Student acting as RAW Agent) ಇಂಥ ಗೌರವಾನ್ವಿತ ಸಂಸ್ಥೆಯ ಹೆಸರು ಹೇಳಿಕೊಂಡು ವಂಚನೆ (Fraud Case) ನಡೆಸುತ್ತಿದ್ದು, ಈಗ ಸಿಕ್ಕಿ ಬಿದ್ದಿದ್ದಾನೆ.
ಮಂಗಳೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿಯಾಗಿರುವ ಕೇರಳದ ಇಡುಕ್ಕಿ ಮೂಲದ ಬೆನೆಡಿಕ್ಟ್ ಸಾಬು (24) ಎಂಬಾತನೇ ಈ ರೀತಿ ವಂಚನೆ ಮಾಡಿ ಬಂಧನಕ್ಕೆ ಒಳಗಾದವನು (Fake Raw Agent). ಮಂಗಳೂರಿನ ಯುನಿಟಿ ನರ್ಸಿಂಗ್ ಕಾಲೇಜಿನನಲ್ಲಿ ವಿದ್ಯಾರ್ಥಿಯಾಗಿರುವ ಈತ 6 ತಿಂಗಳ ಹಿಂದಷ್ಟೇ ನರ್ಸಿಂಗ್ ಕಾಲೇಜಿನ ಜಿಎನ್ಎಂ ಕೋರ್ಸ್‌ಗೆ ಸೇರಿದ್ದ.
ಈತ ಎಷ್ಟೊಂದು ಖತರ್ನಾಕ್ ಇದ್ದಾನೆಂದರೆ ತಾನೊಬ್ಬ ರಾ ಅಧಿಕಾರಿ ಎಂದು ನಕಲಿ ಐಡಿ ಮಾಡಿಕೊಂಡಿದ್ದ. ಅದನ್ನು ಬೇರೆ ಬೇರೆಯವರಿಗೆ ತೋರಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದ. ಈ ಮಾಹಿತಿಗಳನ್ನು ಆತ ದುರುಪಯೋಗ ಮಾಡಿಕೊಂಡಿದ್ದಾನೆಯೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.
ನಿಜವೆಂದರೆ ಈಗ ಒಬ್ಬ ಪಕ್ಕಾ ವಂಚಕ. ಆತ ಒಂದು ಕಾಲೇಜಿನ ಪ್ರಿನ್ಸಿಪಾಲ್‌ಗೆ ತಾನೊಬ್ಬ ಅಗ್ರಿಕಲ್ಚರ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ಮಾತುಕತೆ ನಡೆಸಿದ್ದ. ಇನ್ನೊಬ್ಬರ ಜತೆ ಕೇರಳ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂದು ಹೇಳಿ ಕೊಂಡಿದ್ದ.
ಡ್ರಗ್ ಜಾಗೃತಿ ಕಾರ್ಯಕ್ರಮದಲ್ಲಿ ಬಂಡವಾಳ ಬಯಲು
ಬೆನೆಡಿಕ್ಟ್ ಸಾಬು ನಾನಾ ಕಾರ್ಯಕ್ರಮಗಳಿಗೆ ಹೋಗಿ ತನ್ನನ್ನು ಅಧಿಕಾರಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ. ಅಧಿಕಾರಿಗಳನ್ನು ಪರಿಚಯ ಮಾಡಿಕೊಳ್ಳುತಿದ್ದ. ಇತ್ತೀಚೆಗೆ ಒಂದು ಡ್ರಗ್ ಜಾಗೃತಿ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ಈತನ ಎಲ್ಲ ಬಂಡವಾಳ ಬಯಲಾಗಿದೆ.
ಅಲ್ಲಿಗೆ ಹೋಗಿದ್ದ ಆತ ಅಲ್ಲಿನ ಪೊಲೀಸ್ ಆಫೀಸರ್‌ಗಳ ಜತೆ ನಾನೊಬ್ಬ ಸದ್ಯ RAW ಫೀಲ್ಡ್ ಏಜೆಂಟ್ ಆಗಿ ಇರುವುದಾಗಿ ಹೇಳಿ ಪರಿಚಯ ಮಾಡಿಕೊಂಡಿದ್ದ. ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ ಆತ ಅವರ ಜತೆ ದೊಡ್ಡ ಅಧಿಕಾರಿಯಂತೆ ಚರ್ಚೆ ಮಾಡಿದ್ದ.
ಕೆಲವು ಅಧಿಕಾರಿಗಳು ತುಂಬ ಭಕ್ತಿ ಭಾವದಿಂದ ಅವನೊಂದಿಗೆ ನಡೆದುಕೊಂಡಿದ್ದರು. ಆದರೆ, ಕೆಲವರಿಗೆ ಆತನ ಬಗ್ಗೆ ಸಂಶಯ ಬಂದಿತ್ತು. ಕೂಡಲೇ ಉರ್ವ ಪೊಲೀಸರು ಆತನನ್ನು ಕರೆಸಿಕೊಂಡು ಆತನ ಹಿನ್ನೆಲೆಯಲ್ಲಿ ವಿಚಾರಿಸಿದರು. ಮೊದಲು ರಾ ಏಜೆಂಟ್ ಎಂಬಂತೆಯೇ ಗೌರವಪೂರ್ವಕವಾಗಿ ಮಾತನಾಡಿದ ಅವರು, ಆತನ ಎಲ್ಲ ವಿಚಾರಗಳನ್ನು ತಿಳಿದುಕೊಂಡರು.
ಆದರೆ, ಏನೇ ಕೇಳಿದರೂ ಅತ್ಯಂತ ಕರಾರುವಕ್ಕಾಗಿ ವಿವರಣೆ ನೀಡುತ್ತಿದ್ದ ಆತನನ್ನು ಇನ್ನಷ್ಟು ಅಡ್ಡಾದಿಡ್ಡಿ ಪ್ರಶ್ನೆಗಳಿಗೆ ಒಳಪಡಿಸಿದಾಗ ಆತ ತನ್ನ ಮೂಲವನ್ನು ಬಿಚ್ಚಿಟ್ಟ. ಕೊನೆಗೆ ಆತ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳ ನಕಲಿ ಗುರುತು ಚೀಟಿ ಮಾಡಿಕೊಂಡು ವಂಚನೆ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.
ಇವನು ಕೇವಲ ಪೊಲೀಸ್ ಅಧಿಕಾರಿ, ಕೃಷಿ ಅಧಿಕಾರಿ, ರಾ ಏಜೆಂಟ್ ಎಂದೆಲ್ಲ ಹೇಳಿಕೊಂಡು ತಿರುಗುತ್ತಿದ್ದುದಲ್ಲ. ಬದಲಾಗಿ ಎಲ್ಲ ಹುದ್ದೆಗಳಿಗೆ ಸೂಕ್ತವಾದ ನಕಲಿ ಐಡಿ ಕಾರ್ಡ್, ವಿಸಿಟಿಂಗ್ ಕಾರ್ಡ್ ಬಳಸುತ್ತಿದ್ದ. ಆತ ಪೊಲೀಸ್ ಅಧಿಕಾರಿಗಳ ಸಮವಸ್ತ್ರವನ್ನು ಕೂಡಾ ಹೊಲಿಸಿಕೊಂಡಿದ್ದ.
ಇದನ್ನೂ ಓದಿ : Fraud Case: ಷೇರು ಮಾರುಕಟ್ಟೆ ಲಾಭದ ಆಸೆ ತೋರಿಸಿ ಬೆಂಗಳೂರಿನಲ್ಲಿ ಜನರಿಗೆ ವಂಚಿಸುತ್ತಿದ್ದ ಕೇರಳದ ಖತರ್ನಾಕ್ ದಂಪತಿ ಅರೆಸ್ಟ್
ಈಗ ಆತನಿಂದ ನಕಲಿ ಐಡಿ ಕಾರ್ಡ್ ಗಳು, ಪೊಲೀಸ್ ಸಮವಸ್ತ್ರ, ಮೊಬೈಲ್ ಫೋನ್, ಲ್ಯಾಪ್ ಟಾಪ್ ವಶಪಡಿಸಿ ಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ ಈ ಹುದ್ದೆಗಳ ಹೆಸರು ಹೇಳಿ ಯಾರಿಗಾದರೂ ವಂಚನೆ ಮಾಡಿದ್ದಾನೆಯೇ ಅಥವಾ ಕೇವಲ ಶೋಕಿಗಾಗಿ ಈ ರೀತಿ ಮಾಡುತ್ತಿದ್ದನೇ ಎನ್ನುವುದು ಬಯಲಾಗಬೇಕಾಗಿದೆ.