ಬೆಂಗಳೂರು: ಕಳ್ಳನೊಬ್ಬ ಬುಡಬುಡಿಕೆ ವೇಷಧಾರಿಯಾಗಿ ಬಂದು ತನ್ನ ಮಾತನ್ನೇ ಬಂಡವಾಳ ಮಾಡಿಕೊಂಡು ಕುಟುಂಬವೊಂದಕ್ಕೆ ವಂಚಿಸಿ (Fraud Case) ಪರಾರಿಯಾಗಿದ್ದಾನೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೌಡ್ಯಕ್ಕೆ ಬಲಿಯಾದ ಕುಟುಂಬವೊಂದು, ಮನೆಯಲ್ಲಿ ಸಾವಾಗುತ್ತದೆ ಎಂದು ದಾಸಪ್ಪ ಹೇಳಿದನ್ನ ನಂಬಿ ಚಿನ್ನಾಭರಣ ಕಳೆದುಕೊಂಡಿದೆ.
ಕೊತ್ತನೂರು ಸಮೀಪದ ದೊಡ್ಡ ಗುಬ್ಬಿ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಬುಡಬುಡಿಕೆ ಭವಿಷ್ಯ ಹೇಳುವ ನೆಪದಲ್ಲಿ ಬಂದ ಕಳ್ಳನೊಬ್ಬ, ನಿನ್ನ ಗಂಡನಿಗೆ ಗಂಡಾಂತರ ಇದೆ. ಇನ್ನು 9 ದಿನದಲ್ಲಿ ನಿನ್ನ ಮನೆಯಲ್ಲಿ ಸಾವಾಗುತ್ತೆ ಎಂದು ಶಕುಂತಲಾ ಎಂಬಾಕೆಗೆ ಹೆದರಿಸಿದ್ದಾನೆ. ಪೂಜೆ ಮಾಡುವ ನೆಪದಲ್ಲಿ ಶಕುಂತಲಾ ಮನೆಗೆ ಬಂದಿದ್ದ.
ನಿನ್ನ ಗಂಡನಿಗೆ ಗಂಡಾಂತರ ಇದೆ ಪೂಜೆ ಮಾಡಬೇಕೆಂದು ನಂಬಿಸಿ, ಮನೆಗೆ ಬಂದಾಗ ಪೂಜೆ ಮಾಡಬೇಕು ಮೈ ಮೇಲಿರುವ ಚಿನ್ನವನ್ನು ಮಡಿಕೆಯಲ್ಲಿ ಹಾಕುವಂತೆ ಹೇಳಿದ್ದ. ಮಡಿಕೆಯಲ್ಲಿ ಚಿನ್ನ ಹಾಕಿದ ಬಳಿಕ ಕಣ್ಮುಚ್ಚಿ ಕುಳಿತುಕೊಳ್ಳುವಂತೆ ಸೂಚಿಸಿದ್ದ. ಬಳಿಕ ಮಡಿಕೆ ಸುತ್ತ ದಾರ ಕಟ್ಟಿ, ನಿನ್ನ ಗಂಡ ಮನೆಗೆ ಬಂದಾಗ ಪೂಜೆ ಮಾಡಿ ಈ ದಾರ ತೆಗೆಯುವಂತೆ ಸೂಚಿಸಿ, ಅಲ್ಲಿಂದ ಕಾಲ್ಕಿತ್ತಿದ್ದ.
ಈತನನ್ನು ಸಂಪೂರ್ಣವಾಗಿ ನಂಬಿ ಮೌಢ್ಯಕ್ಕೆ ಸಿಲುಕಿದ ಶಕುಂತಲಾ, ಮನೆಗೆ ಪತಿ ಬಂದಾಗ ದಾರ ಕಟ್ಟಿದ ಮಡಿಕೆಯನ್ನು ತೆರೆದು ನೋಡಿದ್ದಾರೆ. ಆದರೆ ಮಡಿಕೆಯೊಳಗೆ ಹಾಕಿದ್ದ ಬಂಗಾರವು ನಾಪತ್ತೆ ಆಗಿತ್ತು. ಆಗಲೇ ತಾವು ಮೋಸ ಹೋಗಿದ್ದು ಗೊತ್ತಾಗಿದೆ. ಸದ್ಯ ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಕಲಿ ಬುಡಬುಡಿಕೆಗೆ ಹುಡುಕಾಟವನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Family Missing : ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬವೇ ನಾಪತ್ತೆ; ಎಲ್ಲಿದ್ದಾರೆ ಐವರು?
ಮೌಢ್ಯಕ್ಕೆ ಬಲಿಯಾಗುತ್ತಿರುವ ಸಿಟಿ ಮಂದಿ
ಬುಡಬುಡಿಕೆ ಭವಿಷ್ಯ ಹೇಳುವ ನೆಪದಲ್ಲಿ ಈ ಹಿಂದೆಯೂ ಹಲವರಿಗೆ ವಂಚನೆ ಮಾಡಿರುವ ಘಟನೆ ನಡೆದಿದೆ. ಈ ಹಿಂದೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾವಾಸ್ಯೆ ಬಳಿಕ ನಿನ್ನ ಗಂಡ ಹಾಗೂ ಮಗನಿಗೆ ಗಂಡಾಂತರ ಇದೆ. ಮನೆಯಲ್ಲಿ ಸಾವಾಗುತ್ತೆ ಎಂದು ಹೆದರಿಸಿ ಕಾಂತ ಎಂಬಾಕೆಗೆ ನಿಂಬೆಹಣ್ಣು ನೀಡಿ ಪ್ರಜ್ಞೆ ತಪ್ಪಿಸಿದ್ದ. ಬಳಿಕ ಮೈ ಮೇಲಿದ್ದ ಒಡವೆಗಳನ್ನು ದೋಚಿ ಪರಾರಿಯಾಗಿದ್ದ.
ಗಂಡಾಂತರ ಪರಿಹಾರಕ್ಕೆ 1,500 ಹಣವನ್ನು ಕೇಳಿದ್ದ. ನಂತರ ನಿಂಬೆ ಹಣ್ಣು ತರಲು ಹೇಳಿ ಮಂತ್ರಿಸಿ ಕಾಂತಾಗೆ ನೀಡಿದ್ದ. ಮೂರು ಸುತ್ತುವಂತೆ ಹೇಳಿದ್ದ. ಸುತ್ತಿದ್ದಂತೆ ಕಾಂತ ಮೂರ್ಛೆ ತಪ್ಪಿ ಕೆಳಗೆ ಬಿದ್ದಿದ್ದರು. ನಂತರ ಮನೆಯಲ್ಲಿದ್ದ ಒಡವೆ ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಒಡವೆ ದೋಚಿ ಪರಾರಿಯಾಗಿದ್ದ.
ಬುಡಬುಡಿಕೆ ದಾಸಪ್ಪನೊಬ್ಬ ತನ್ನ ಮಾತನ್ನೇ ಬಂಡವಾಳ ಮಾಡಿಕೊಂಡು ಕುಟುಂಬವೊಂದಕ್ಕೆ ವಂಚಿಸಿದ್ದ. (Fraud Case). ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೌಡ್ಯಕ್ಕೆ ಬಲಿಯಾದ ಕುಟುಂಬವೊಂದು, ಮನೆಯಲ್ಲಿ ಸಾವಾಗುತ್ತದೆ ಎಂದು ದಾಸಪ್ಪ ಹೇಳಿದನ್ನ ನಂಬಿ ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳೆದುಕೊಂಡಿತ್ತು.
ವರದರಾಜು ಎಂಬುವವರ ತಂದೆ ಮೃತಪಟ್ಟಿದ್ದರು. ಸಂಪ್ರದಾಯದ ಪ್ರಕಾರ 11 ದಿನ ಮನೆಯಲ್ಲಿ ದೀಪ ಹಚ್ಚಬೇಕು. ಹೀಗಾಗಿ ಮನೆಯಲ್ಲಿ ದೀಪ ಹಚ್ಚಿದ್ದನ್ನು ನೋಡಿ ಮನೆಗೆ ಬಂದಿದ್ದ ಬುಡಬುಡಿಕೆ ದಾಸನೊಬ್ಬ, ಈ ಮನೆಯಲ್ಲಿ ಮತ್ತೆ ಮೂರು ಸಾವಾಗುತ್ತೆ ಎಂದು ಇರುಳು ಹೊತ್ತಿನಲ್ಲಿ ಹೇಳಿ ಹೋಗಿದ್ದ. ಇದನ್ನು ಕೇಳಿ ದಂಪತಿ ಬೆದರಿದ್ದರು.
ದಂಪತಿಗಳ ಭೀತಿಯನ್ನು ಬಂಡವಾಳ ಮಾಡಿಕೊಂಡ ಬುಡಬುಡಿಕೆ ದಾಸಯ್ಯ, ಮನೆಯಲ್ಲಿ ವರದರಾಜು ಪತ್ನಿ ಒಬ್ಬರೇ ಇರುವುದನ್ನು ನೋಡಿ ಮತ್ತೊಂದು ದಿನ ಬಂದಿದ್ದ. ಈ ಮನೆಯಲ್ಲಿ ಮೂರು ಸಾವು ಆಗುತ್ತದೆ ಎಚ್ಚರ ಎಂದು ಬೆದರಿಸಿದ್ದ. ಎರಡನೇ ಬಾರಿ ಸಾವಿನ ವಿಚಾರ ಕೇಳಿದಾಗ ಭಯಗೊಂಡ ವರದರಾಜು ಪತ್ನಿ, ಬುಡಬುಡಿಕೆಯವನನ್ನು ಮನೆಯೊಳಗೆ ಕರೆಸಿ ಮಾತನಾಡಿಸಿದ್ದಾರೆ.
ಹಣೆಗೆ ಬೊಟ್ಟು ಇಟ್ಟು ಮಂಕುಬೂದಿ!
ಮುಂದಿನ ಸಾವುಗಳನ್ನು ತಪ್ಪಿಸಲು ಪೂಜೆ ಮಾಡಿಸಬೇಕು, ಇದಕ್ಕಾಗಿ ಐದು ಸಾವಿರ ಆಗುತ್ತದೆ ಎಂದಿದ್ದ ಬುಡಬುಡಿಕೆಯವನು, ಹಣ ಕೊಟ್ಟ ಬಳಿಕ ವರದರಾಜು ಅವರ ಪತ್ನಿಗೆ ಕಪ್ಪು ಇರುವ ಬೊಟ್ಟನ್ನು ಹಣೆಗೆ ಹಚ್ಚಿದ್ದ. ಆ ಬಳಿಕ ಮಾನಸಿಕ ನಿಯಂತ್ರಣ ಕಳೆದುಕೊಂಡ ಮಹಿಳೆ, ದಾಸಯ್ಯ ಕೇಳಿದ ಕೂಡಲೆ ಮೈಮೇಲಿದ್ದ ಒಡವೆಯನ್ನು ತಾವೇ ತೆಗೆದುಕೊಟ್ಟಿದ್ದರು.
ಒಂದು ಚಿನ್ನದ ಸರ ಹಾಗೂ ಎರಡು ಉಂಗುರವನ್ನು ಬಿಚ್ಚಿ ಕೊಟ್ಟಿದ್ದಾರೆ. 12 ಗಂಟೆಯೊಳಗೆ ಪೂಜೆ ಮಾಡಿ ಕೊಡುವುದಾಗಿ ಹೇಳಿದ ದಾಸಯ್ಯ ತನ್ನ ಹೆಸರು ಕೃಷ್ಣಪ್ಪ ಎಂದು ಪರಿಚಯ ಮಾಡಿಕೊಂಡು ಫೋನ್ ನಂಬರ್ ಕೊಟ್ಟು ಅಲ್ಲಿಂದ ಕಾಲ್ಕಿತ್ತಿದ್ದ.
ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡ
ಮನೆಗೆ ಪತಿ ವರದರಾಜು ಬಂದಾಗ ಅಸಲಿ ಸಂಗತಿ ತಿಳಿದರು. ಕೃಷ್ಣಪ್ಪನ ನಂಬರ್‌ಗೆ ಕರೆ ಮಾಡಿದ್ದು, ಅದು ಸ್ವಿಚ್ಡ್ ಆಫ್ ಎಂದು ಬಂದಿದೆ. ಮೋಸ ಹೋದ ವಿಚಾರ ತಿಳಿಯುತ್ತಿದ್ದಂತೆ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದರು.