ಬೆಂಗಳೂರು: ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣಪತಿ ಮೂರ್ತಿ ವಿಸರ್ಜನೆಯ (Ganesha procession) ವೇಳೆ ಹುಟ್ಟಿಕೊಂಡ ಎರಡು ಗುಂಪುಗಳ ನಡುವಿನ ಜಗಳದಲ್ಲಿ ಶ್ರೀನಿವಾಸ್ ಎಂಬಾತನ ಕೊಲೆ ನಡೆದ ಹಿನ್ನೆಲೆಯಲ್ಲಿ ಇದೀಗ ಪೊಲೀಸ್ ಇಲಾಖೆ ಗಣೇಶನ ಮೆರವಣಿಗೆಗೇ ನಿಷೇಧ (Procession banned in Bangalore) ವಿಧಿಸಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಮೆರವಣಿಗೆಗೆ (Ganesha Festival) ಅವಕಾಶ ನೀಡುವುದಿಲ್ಲ ಎಂದು ಪ್ರಕಟಿಸಿದೆ.
ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡುವ ವಿಚಾರದಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿತ್ತು. ಸಣ್ಣ ಸಣ್ಣ ಸಂಗತಿಗಳು ಕೊಲೆಯವರೆಗೆ ಹೋಗುವುದು ಮತ್ತು ಗಣೇಶೋತ್ಸವವನ್ನು ತಮ್ಮ ದ್ವೇಷ ಸಾಧನೆಗೆ ಬಳಸುವ ಘಟನೆಗಳು ನಡೆಯುತ್ತಿರು ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಇನ್ನು ಮುಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಅವಕಾಶ ನೀಡದಂತೆ ಸೂಚನೆ ನೀಡಿದೆ.
ಇನ್ಮುಂದೆ ಗಣೇಶ ಮೂರ್ತಿ ಮೆರವಣಿಗೆಗೆ ಯಾವ ಠಾಣೆಯಲ್ಲೂ ಅವಕಾಶ ನೀಡಬಾರದು ಎಂದು ಪೊಲೀಸ್ ಕಮೀಷನರ್ ದಯಾನಂದ್ ಅವರು ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ.
ಗಣೇಶ ಮೆರವಣಿಗೆ ವೇಳೆ ನಗರದ ಹಲವು ಕಡೆಗಳಲ್ಲಿ ಗಲಾಟೆ ನಡೆದಿತ್ತು. ಹಲಸೂರು, ಯಡಿಯೂರು, ಆಡುಗೋಡಿಗಳಲ್ಲಿ ಗಲಾಟೆ ನಡೆದು ಆಡುಗೋಡಿಯಲ್ಲಿ ಕೊಲೆಯೇ ನಡೆದಿತ್ತು. ಹೀಗಾಗಿ ನಗರದಲ್ಲಿ ಇನ್ಮುಂದೆ ಗಣೇಶ ಮೆರವಣಿಗೆಗೆ ಅನುಮತಿ ನೀಡದಂತೆ ಕಮೀಷನರ್ ಆದೇಶ ನೀಡಿದ್ದಾರೆ.
200ಕ್ಕೂ ಹೆಚ್ಚು ಸಂಸ್ಥೆಗಳಿಂದ ಮೆರವಣಿಗೆಗೆ ಮನವಿ
ಈ ನಡುವೆ, ತಾವು ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಸಾಲು ಸಾಲು ಮನವಿಗಳು ಪೊಲೀಸ್ ಠಾಣೆಗೆ ಬರುತ್ತಿವೆ ಎನ್ನಲಾಗಿದೆ. ಕಮೀಷನರ್ ಅವರು ಆದೇಶ ನೀಡಿದ ಬಳಿಕ ಒಂದೇ ದಿನದಲ್ಲಿ ಸುಮಾರು 200ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಆದರೆ, ಪೊಲೀಸರು ಯಾವುದೇ ಕಾರಣಕ್ಕೂ ಅನುಮತಿ ಕೊಡಲ್ಲ ಅಂತ ಖಡಾಖಂಡಿತವಾಗಿ ನಿರಾಕರಣೆ ಮಾಡಿದ್ದಾರೆ.
ಗಣೇಶನ ಹಬ್ಬ ಮುಗಿದು 15 ದಿನ ಕಳೆದರೂ ರಾಜಧಾನಿಯಲ್ಲಿ ಇನ್ನೂ ಗಣೇಶೋತ್ಸವ ಮುಗಿದಿಲ್ಲ. ಕೆಲವು ಏರಿಯಾಗಳಲ್ಲಿ ಇನ್ನೂ ಗಣಪತಿ ಪ್ರತಿಷ್ಠಾಪನೆ, ಪೂಜೆ ಮತ್ತು ಮೆರವಣಿಗೆ ನಡೆಯುತ್ತಲೇ ಇದೆ.
ಇದನ್ನೂ ಓದಿ: Murder Case: ʼಗಣೇಶ ಬಲಿ ಕೇಳುತ್ತೆ..ʼʼ ಎಂದರು, ಇರಿದರು! ಮೂರ್ತಿ ವಿಸರ್ಜನೆ ವೇಳೆ ಗಲಾಟೆ, ಕೊಲೆಯಲ್ಲಿ ಅಂತ್ಯ
ಪೊಲೀಸರ ಮಾಹಿತಿ ಪ್ರಕಾರ ರಾಜಧಾನಿಯಲ್ಲಿ ಇನ್ನೂ 450 ಕಡೆಗಳಲ್ಲಿ ಗಣಪತಿ ಮೂರ್ತಿಗಳನ್ನು ಇಡಲಾಗಿದೆ. ಎಲ್ಲರೂ ಮೆರವಣಿಗೆ, ಮತ್ತು ಮೆರವಣಿಗೆಯಲ್ಲಿ ಡಿಜೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ಡಿ.ಜೆ. ಬಳಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Killer DJ sound: ಡಿಜೆ ಸೌಂಡ್‌ಗೆ ಇನ್ನೊಂದು ಬಲಿ! ಗಂಗಾವತಿ ಗಣೇಶ ವಿಸರ್ಜನೆ ವೇಳೆ ಯುವಕ ಸಾವು
ಇದರ ನಡುವೆ, ಮೆರವಣಿಗೆ ವೇಳೆ ನಡೆದ ಗಲಾಟೆ, ಕೊಲೆ ಹಿನ್ನೆಲೆಯಲ್ಲಿ ಇನ್ಮುಂದೆ ನೋ ಪರ್ಮಿಷನ್ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇಷ್ಟಾದರೂ ಮೆರವಣಿಗೆ ಮಾಡಿದರೆ ಏನಾದರೂ ಗಲಾಟೆ ಆದರೆ ಠಾಣೆಯ ಇನ್‌ಸ್ಪೆಕ್ಟರ್ ಅವರನ್ನೇ ಹೊಣೆ ಮಾಡಲಾಗುವುದು ಎಂದು ಕೂಡಾ ಪೊಲೀಸ್ ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.