ನವ ದೆಹಲಿ: ೧೯೯೮ರಲ್ಲಿ ʻಹಮ್ ಸಾಥ್ ಸಾಥ್ ಹೈʼ ಸಿನಿಮಾದ ಚಿತ್ರೀಕರಣದ ವೇಳೆ ಕೃಷ್ಣ ಮೃಗ ಬೇಟೆಯಾಡಿದ ಆರೋಪ ಹೊತ್ತಿರುವ ಖ್ಯಾತ ಚಿತ್ರ ನಟ ಸಲ್ಮಾನ್ ಖಾನ್ ಅವರಿಗೆ ಕೋರ್ಟ್ ಕ್ಷಮಾದಾನ ನೀಡಿದರೂ ಬಿಷ್ಣೋಯಿ ಸಮುದಾಯ ಖಂಡಿತವಾಗಿಯೂ ಕ್ಷಮಿಸುವುದಿಲ್ಲ: ಈ ಮಾತನ್ನು ಹೇಳಿದ್ದು ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ.
ಪಂಜಾಬಿನ ಖ್ಯಾತ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಅವರನ್ನು ಹತ್ಯೆಯ ಹಿಂದಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಈ ಮಾತನ್ನು ಪುನರುಚ್ಚರಿಸಿದ್ದಾನೆ. ಈ ಹಿಂದೊಮ್ಮೆ ಇದೇ ಕಾರಣಕ್ಕೆ ಆತ ಸಲ್ಮಾನ್ ಖಾನ್ ಹತ್ಯೆಗೂ ಸ್ಕೆಚ್ ಹಾಕಿದ್ದ. ಬಿಷ್ಣೋಯಿ ಸಮುದಾಯಕ್ಕೆ ಅತ್ಯಂತ ಪವಿತ್ರವಾಗಿರುವ, ಪೂಜನೀಯವಾಗಿರುವ ಕೃಷ್ಣ ಮೃಗವನ್ನು ಕೊಂದಿರುವ ಸಲ್ಮಾನ್ ಖಾನ್ ಸಾರ್ವಜನಿಕವಾಗಿ ಕ್ಷಮೆ ಕೇಳದೆ ಹೋದರೆ ಅವರನ್ನು ಸಮುದಾಯ ಯಾವತ್ತೂ ಕ್ಷಮಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯಿ ಹೇಳಿದ್ದಾಗಿ ದಿಲ್ಲಿ ಪೊಲೀಸರ ವಿಶೇಷ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
ಸಿಧು ಮೂಸೆವಾಲಾ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಲಾರೆನ್ಸ್ ಬಿಷ್ಣೋಯಿ ಈ ವಿಚಾರವನ್ನು ಬಾಯಿ ಬಿಡುವ ಮೊದಲೇ, ಆರೋಪಿ ಹಿಂದೊಮ್ಮೆ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದ. ೧೫ ದಿನಗಳ ಮೊದಲು ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಪರ ವಾದಿಸುತ್ತಿರುವ ವಕೀಲ ಹಸ್ತಿಮಾಲ್ ಸಾರಸ್ವತ್ ಗೆ ಬೆದರಿಕೆ ಪತ್ರ ಬಂದಿತ್ತು. ಅದರಲ್ಲಿ ಸಿಧು ಮೂಸೆವಾಲಾನಿಗೆ ಆಗಿದ್ದೇ ನಿಮಗೂ ಆಗುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು.
ʻʻಕೃಷ್ಣ ಮೃಗವನ್ನು ನಾವು ನಮ್ಮ ಧಾರ್ಮಿಕ ಗುರುಗಳಾದ ಭಗವಾನ್ ಜಂಬೇಶ್ವರ್ (ಜಂಬಾಜಿ) ಅವರ ಮರು ಜನ್ಮ ಎಂದು ಭಾವಿಸುತ್ತೇವೆ. ಹೀಗಾಗಿ ಕೋರ್ಟ್‌ಗಳು ನೀಡುವ ತೀರ್ಪು ಈ ವಿಷಯದಲ್ಲಿ ಅಂತಿಮವಲ್ಲ ಎಂದು ಬಿಷ್ಣೋಯಿ ವಿಚಾರಣೆ ವೇಳೆ ಹೇಳಿದ್ದಾನೆ,ʼʼ ಎಂದು ಸಿಧು ಮೂಸೆವಾಲಾ ಪ್ರಕರಣದಲ್ಲಿ ಆತನ ವಿಚಾರಣೆ ನಡೆಸುತ್ತಿರುವ ಸ್ಪೆಷಲ್ ಕಮಿಷನರ್ ಎಚ್‌ಜಿಎಸ್ ಧಾಲಿವಾಲ್ ಹೇಳಿದ್ದಾರೆ. ʻʻಒಂದೋ ಸಲ್ಮಾನ್ ಖಾನ್ ಇಲ್ಲವೇ ಅವರ ತಂದೆ ಜಂಬಾಜಿ ಅವರ ದೇವಸ್ಥಾನಕ್ಕೆ ಬಂದು ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಬಿಷ್ಣೋಯಿಗಳು ಅವರನ್ನು ಕೊಲ್ಲದೆ ಬಿಡುವುದಿಲ್ಲʼʼ ಎಂದು ಆತ ಹೇಳಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.
ಏನಿದು ಕೃಷ್ಣ ಮೃಗ ಪ್ರಕರಣ?
೧೯೯೮ರಲ್ಲಿ ಹಮ್ ಸಾಥ್ ಸಾಥ್ ಹೈ ಸಿನಮಾ ಸಿನಿಮಾದ ಚಿತ್ರೀಕರಣದ ರಾಜಸ್ಥಾನದ ನಾನಾ ಭಾಗಗಳಲ್ಲಿ ನಡೆದಾಗ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ನೀಲಂ ಮತ್ತು ಟಬು ಅವರೆಲ್ಲ ಸೇರಿಕೊಂಡು ಕೃಷ್ಣ ಮೃಗ ಬೇಟೆಯಾಡಿದ ಆರೋಪ ಕೇಳಿಬಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಸಲ್ಮಾನ್ ಖಾನ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲರನ್ನೂ ಖುಲಾಸೆಗೊಳಿಸಿತ್ತು. ೨೦೧೮ರಲ್ಲಿ ನಡೆದ ವಿಚಾರಣೆಯ ವೇಳೆ ಜೋಧ್‌ಪುರ ಕೋರ್ಟ್ ಸಲ್ಮಾನ್ ಖಾನ್‌ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಬಳಿಕ ಜಾಮೀನು ನೀಡಿತ್ತು.
ಇದನ್ನೂ ಓದಿ| ಮೂಸೆವಾಲಾ ಸ್ಥಿತಿ ನಿಮಗೂ ಬರಲಿದೆ: ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ