ನವದೆಹಲಿ: ಸಮಾಜದ ಶಾಂತಿಗೆ ಭಂಗ ತರುವ ಕೆಲಸ ಮಾಡಿದವರು, ಕೊಲೆ ಸೇರಿ ಹಲವು ಅಪರಾಧ ಎಸಗಿದವರು ಪಾಠ ಕಲಿಯಲಿ, ಅವರು ಕೂಡ ಪರಿವರ್ತನೆ ಹೊಂದಲಿ, ಅವರಿಂದ ಸಮಾಜಕ್ಕೆ ಹೆಚ್ಚು ಹಾನಿಯಾಗದಿರಲಿ ಎಂದು ಅವರನ್ನು ಜೈಲಿಗೆ ಹಾಕಲಾಗುತ್ತದೆ. ಹೀಗೆ, ಅಪರಾಧ ಕೃತ್ಯಗಳಲ್ಲಿ ತೊಡಗಿ, ದೆಹಲಿಯ ತಿಹಾರ ಜೈಲು ಸೇರಿದವರು ಜೈಲಿನಲ್ಲಿಯೇ ಗ್ಯಾಂಗ್‌ವಾರ್ ನಡೆಸಿದ್ದಾರೆ. ಅಷ್ಟೇ ಅಲ್ಲ, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಆಪ್ತ ಪ್ರಿನ್ಸ್ ತೆವಾಟಿಯಾನನ್ನು (Prince Tewatia Killed) (30) ಹತ್ಯೆ ಮಾಡಿದ್ದಾರೆ.
ಶುಕ್ರವಾರ ಸಂಜೆ ತಿಹಾರ ಜೈಲಿನಲ್ಲಿ ಶುಕ್ರವಾರ ಸಂಜೆ ಕೈದಿಗಳ ಮಧ್ಯೆಯೇ ಗಲಾಟೆ ನಡೆದಿದೆ. ಇದೇ ವೇಳೆ ಪ್ರಿನ್ಸ್ ತೆವಾಟಿಯಾನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಗ್ಯಾಂಗ್‌ಸ್ಟರ್ ಪ್ರಿನ್ಸ್ ತೆವಾಟಿಯಾನನ್ನು ಸೆಂಟ್ರಲ್ ಜೈಲಿನ ಮೂರನೇ ಸೆಲ್‌ನಲ್ಲಿ ಇರಿಸಲಾಗಿದೆ. ಇದೇ ಸೆಲ್‌ನಲ್ಲಿ ಗ್ಯಾಂಗ್‌ವಾರ್ ನಡೆದಿದ್ದು, ತೆವಾಟಿಯಾಗೆ ಸಹ ಕೈದಿಗಳು ಚಾಕು ಇರಿದಿದ್ದಾರೆ. ಗಲಾಟೆಯಲ್ಲಿ ನಾಲ್ವರು ಕೈದಿಗಳಿಗೆ ಗಾಯಗಳಾಗಿವೆ. ಇನ್ನು, ಗಂಭೀರವಾಗಿ ಗಾಯಗೊಂಡಿದ್ದ ತೆವಾಟಿಯಾನನ್ನು ದೀನ ದಯಾಳ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ತೆವಾಟಿಯಾ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.
ಜೈಲಿನಲ್ಲಿ ಏನೇನಾಯ್ತು?
ಶುಕ್ರವಾರ ಸಂಜೆ 5.30ರ ಸುಮಾರಿಗೆ ಮತ್ತೊಂದು ಗ್ಯಾಂಗ್‌ನ ಅತ್ತಾತುರ್ ರೆಹಮಾನ್ ಹಾಗೂ ತೆವಾಟಿಯಾ ಮಧ್ಯೆ ಗಲಾಟೆ ನಡೆದಿದೆ. ಇದೇ ವೇಳೆ ರೆಹಮಾನ್ ಗ್ಯಾಂಗ್‌ನ ಸದಸ್ಯರು ತೆವಾಟಿಯಾ ಮೇಲೆ ಎರಗಿದ್ದಾರೆ. ಇದೇ ವೇಳೆ ರೆಹಮಾನ್ ಗ್ಯಾಂಗ್‌ನ ಮೂವರು ತೆವಾಟಿಯಾಗೆ ಚಾಕು ಇರಿದಿದ್ದಾರೆ. ಗಲಾಟೆ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ.
ಯಾರಿದು ತೆವಾಟಿಯಾ?
ಪಂಜಾಬಿ ರಾಜಕಾರಣಿ, ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆಗೈದ ಪ್ರಕರಣದ ರೂವಾರಿ ಜೈಲು ಸೇರಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಆಪ್ತನಾಗಿರುವ ಪ್ರಿನ್ಸ್ ತೆವಾಟಿಯಾ ವಿರುದ್ಧ 16 ಕ್ರಿಮಿನಲ್ ಕೇಸ್‌ಗಳಿವೆ. ಕೊಲೆ, ಕೊಲೆ ಯತ್ನದ ಆರೋಪಗಳಿವೆ. 2022ರ ಡಿಸೆಂಬರ್‌ನಲ್ಲಿ ದೆಹಲಿ ಪೊಲೀಸ್ ಕ್ರೈಂ ಬ್ರ್ಯಾಂಚ್ ವಿಭಾಗದ ಸಿಬ್ಬಂದಿಯು ಈತನನ್ನು ಬಂಧಿಸಿ, ತಿಹಾರ ಜೈಲಿನಲ್ಲಿ ಇರಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯಿ ಮತ್ತು ಮೂಸೆವಾಲಾ ನಡುವೆ ಹಗೆತನವಿತ್ತು. ಬ್ರಾರ್ ಮತ್ತು ಬಿಷ್ಣೋಯಿ ಸಂಚು ರೂಪಿಸಿ ಮೂಸೆವಾಲಾರನ್ನು ಕೊಂದಿದ್ದಾರೆ. ಕಳೆದ ವರ್ಷ ಆಗಸ್ಟ್ 7ರಂದು ಅಕಾಲಿ ದಳದ ಯುವ ನಾಯಕ ವಿಕ್ರಮಜಿತ್ ಸಿಂಗ್ ಅಲಿಯಾಸ್ ವಿಕ್ಕಿ ಮಿದ್ದುಖೇರಾ ಹತ್ಯೆಯಲ್ಲಿ ಮೂಸೆವಾಲಾ ಭಾಗಿಯಾಗಿದ್ದರು. ಇದು ಬಿಷ್ಣೋಯಿ ಪ್ರತೀಕಾರಕ್ಕೆ ಕಾರಣವಾಗಿದೆ. ಪರಾರಿಯಾಗಿರುವ ಬ್ರಾರ್, ಮೂಸೆವಾಲಾ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ. ಯುವ ಅಕಾಲಿ ನಾಯಕ ವಿಕ್ಕಿ ಮಿದ್ದುಖೇರಾ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ. ಇದರ ಮಾಸ್ಟರ್ ಮೈಂಡ್ ಬಿಷ್ಣೋಯಿ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.