Site icon Vistara News

ಉತ್ತರ ಪ್ರದೇಶ ಕೋರ್ಟ್‌ನಲ್ಲೇ ರಕ್ತಪಾತ; ಮುಖ್ತಾರ್‌ ಅನ್ಸಾರಿ ಆಪ್ತನಾದ ಗ್ಯಾಂಗ್‌ಸ್ಟರ್‌ ಸಂಜೀವ್‌ ಜೀವಾ ಹತ್ಯೆ

Sanjeev Jeeva Shot Dead

Gangster Sanjeev Jeeva, aide of Mukhtar Ansari, shot dead in Lucknow court

ಲಖನೌ: ಉತ್ತರ ಪ್ರದೇಶದ ಕುಖ್ಯಾತ ಗ್ಯಾಂಗ್‌ಸ್ಟರ್‌, ರಾಜಕಾರಣಿ ಮುಖ್ತಾರ್‌ ಅನ್ಸಾರಿಗೆ ನ್ಯಾಯಾಲಯವು ಕೆಲ ದಿನಗಳ ಹಿಂದಷ್ಟೇ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ, ಉತ್ತರ ಪ್ರದೇಶದ ಕೋರ್ಟ್‌ ಆವರಣದಲ್ಲಿಯೇ ಮುಖ್ತಾರ್‌ ಅನ್ಸಾರಿ ಆಪ್ತನೂ ಆದ ಗ್ಯಾಂಗ್‌ಸ್ಟರ್‌ ಸಂಜೀವ್‌ ಜೀವಾನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿಯಲ್ಲಿ ಒಬ್ಬ ಬಾಲಕಿ ಹಾಗೂ ಪೊಲೀಸ್‌ ಅಧಿಕಾರಿಗಳಿಗೆ ಗಾಯಗಳಾಗಿವೆ.

ಬಿಜೆಪಿ ಶಾಸಕ ಬ್ರಹ್ಮದತ್‌ ದ್ವಿವೇದಿ ಅವರ ಹತ್ಯೆ ಪ್ರಕರಣದಲ್ಲಿ ಮುಖ್ತಾರ್‌ ಅನ್ಸಾರಿ ಹಾಗೂ ಅನ್ಸಾರಿ ಆಪ್ತ ಸಂಜೀವ್‌ ಮಹೇಶ್ವರಿ ಜೀವಾ ಆರೋಪಿಗಳಾಗಿದ್ದಾರೆ. ಸಂಜೀವ್‌ ಜೀವಾ ಕೂಡ ಶೂಟರ್‌ ಆಗಿದ್ದು, ಕ್ರಿಮಿನಲ್‌ ಕೇಸೊಂದರ ವಿಚಾರಣೆ ಹಿನ್ನೆಲೆಯಲ್ಲಿ ಆತನನ್ನು ಲಖನೌ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಲಾಯಿತು. ಇದೇ ವೇಲೆ, ಅಪರಿಚಿತ ಶೂಟರ್‌ ಒಬ್ಬ ಸಂಜೀವ್‌ ಜೀವಾ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿಯಲ್ಲಿ ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ.

ದಾಳಿ ಬಳಿಕ ಬಿಗುವಿನ ವಾತಾವರಣ

ಲಾಯರ್‌ ವೇಷದಲ್ಲಿ ಬಂದು ದಾಳಿ

ಲಖನೌ ನ್ಯಾಯಾಲಯಕ್ಕೆ ಗ್ಯಾಂಗ್‌ಸ್ಟರ್‌ ಸಂಜೀವ್‌ ಜೀವಾನನ್ನು ಹಾಜರುಪಡಿಸಲಾಗುತ್ತದೆ ಎಂದು ತಿಳಿದ ದುಷ್ಕರ್ಮಿಗಳು ವಕೀಲರ ವೇಷದಲ್ಲಿ ಕೋರ್ಟ್‌ ಆವರಣ ಪ್ರವೇಶಿಸಿದ್ದಾರೆ. ವಿಚಾರಣೆಗೆ ಹಾಜರುಪಡಿಸುವ ವೇಳೆಯೇ ವಕೀಲರ ವೇಷದಲ್ಲಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿ ನಡೆಯುತ್ತಲೇ ಜನ ಗಲಿಬಿಲಿಗೊಂಡು ಓಡಿದ್ದಾರೆ. ಇದರಿಂದಾಗಿ ಕೋರ್ಟ್‌ ಆವರಣದಲ್ಲಿ ಕೆಲ ಗಂಟೆವರೆಗೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇನ್ನು, ಸಂಜೀವ್‌ ಜೀವಾನ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿರೋಧಿ ಗ್ಯಾಂಗ್‌ನವರೇ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

32 ವರ್ಷಗಳ ಹಿಂದಿನ ಅವದೇಶ್ ರೈ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗಸ್ಟರ್ ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು ಕೆಲ ದಿನಗಳ ಹಿಂದಷ್ಟೇ ದೋಷಿ ಎಂದು ವಾರಾಣಸಿಯ ಕೋರ್ಟ್ ಹೇಳಿದೆ. ತೀರ್ಪು ನೀಡಿದ ವಾರಾಣಸಿ ಕೋರ್ಟ್, ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

ಇದನ್ನೂ ಓದಿ: Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್ ರಾಜಕಾರಣಿ ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ, ಇನ್ನೂ 20 ಕೇಸ್ ಬಾಕಿ!

ಅನ್ಸಾರಿ ಅವರು 1991ರಲ್ಲಿ ರಾಜಕೀಯವಾಗಿ ಪ್ರಾಮುಖ್ಯತೆ ಪಡೆಯುತ್ತಿರುವಾಗಲೇ, ಅವರ ವಿರುದ್ಧ ಕಾಂಗ್ರೆಸ್ ಮುಖಂಡರ ಕೊಲೆ ಆರೋಪವನ್ನು ಹೊರಿಸಲಾಗಿತ್ತು. 1991 ಆಗಸ್ಟ್ 3 ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಅಜಯ್ ರೈ ಅವರ ಸಹೋದರ ಅವಧೇಶ್ ರೈ ಅವರನ್ನು ವಾರಣಾಸಿಯಲ್ಲಿ ರೈ ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಲ ಮಾಡಲಾಗಿತ್ತು. ಈ ಕೊಲೆ ನಡೆದಾಗ ಮುಕ್ತಾರ್ ಅನ್ಸಾರಿ ಅವರು ಶಾಸಕರಾಗಿರಲಿಲ್ಲ. ಈ ಕೊಲೆ ಪ್ರಕರಣದ ಎಫ್‌ಐಆರ್‌ನಲ್ಲಿ ಮುಖ್ತಾರ್ ಅನ್ಸಾರಿ, ಭೀಮ್ ಸಿಂಗ್, ಮಾಜಿ ಶಾಸಕ ಅಬ್ದುಲ್ ಕಲೀಂ ಮತ್ತು ಇತರ ಇಬ್ಬರನ್ನು ಹೆಸರಿಸಲಾಗಿತ್ತು.

Exit mobile version