Site icon Vistara News

Murder Case: ಯುವತಿ ಪ್ರಬುದ್ಧ ಸಾವು ಆತ್ಮಹತ್ಯೆಯಲ್ಲ, ಕೊಲೆ: ತಾಯಿ ದೂರು

prabuddha murder case

ಬೆಂಗಳೂರು: ರಾಜಧಾನಿಯ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಭುದ್ಧ ಎಂಬ ಯುವತಿಯ ಸಾವಿನ (Girl Death) ಕುರಿತು ಅನುಮಾನಗಳು ಮೂಡಿದ್ದು, ಇದು ಆತ್ಮಹತ್ಯೆ (Self Harming) ಅಲ್ಲ ಕೊಲೆ (Murder Case) ಎಂದು ಪ್ರಬುಧ್ದ ತಾಯಿ ದೂರು ನೀಡಿದ್ದಾರೆ.

ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಈ ಪ್ರಕರಣದಲ್ಲಿ ಸೆಕ್ಷನ್‌ 302 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ 15ನೇ ತಾರೀಕಿನಂದು ಪ್ರಬುಧ್ದ (20) ಸಾವಿಗೀಡಾಗಿದ್ದರು. ಬಾತ್ ರೂಮಿನಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಕಂಡುಬಂದಂತೆ ಇದು ಆತ್ಮಹತ್ಯೆ ಎಂದು ಪೊಲೀಸರು ಪರಿಗಣಿಸಿದ್ದರು. ಆತ್ಮಹತ್ಯೆಗೆ ಬಳಸಲಾದ ಚಾಕು ಕೂಡ ಶವದ ಪಕ್ಕದಲ್ಲೇ ಇತ್ತು, ಯಾವುದೇ ವಸ್ತು ಕಳವಾಗಿರಲಿಲ್ಲ. ಮನೆಯ ಮುಂದಿನ ಬಾಗಿಲು ಒಳಗಿನಿಂದ ಲಾಕ್‌ ಆಗಿದ್ದು, ಹಿಂದಿನ ಬಾಗಿಲಿನ ಚಿಲಕ ಹಾಕಿರಲಿಲ್ಲ.

ಆದರೆ ಮಗಳ ಸಾವಿನ‌ ಬಗ್ಗೆ ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ವಭಾವದವಳಲ್ಲ, ಅದಕ್ಕೆ ಯಾವುದೇ ಕಾರಣವೂ ಇರಲಿಲ್ಲ. ನನ್ನ ಮಗಳನ್ನು ಯಾರೋ ಕ್ರೂರವಾಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕತ್ತು ಮತ್ತು ಕೈಯನ್ನು ಚಾಕುವಿನಿಂದ ಕುಯ್ದು ಕೊಲೆ ಮಾಡಿದ್ದಾರೆ. ಮುಖಕ್ಕೆ ಮತ್ತು ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆಯಲಾಗಿದೆ ಎಂದು ತಾಯಿ ಅನುಮಾನಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿರುವ ಪೊಲೀಸರು, ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದ್ದಾರೆ. ಪೋಸ್ಟ್ ಮಾರ್ಟಂ ವರದಿಗಾಗಿ ಕಾಯಲಾಗುತ್ತಿದೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಹುಬ್ಬಳ್ಳಿಯಲ್ಲಿ ಇಬ್ಬರು ಎನ್‌ಐಎ ವಶಕ್ಕೆ

ಹುಬ್ಬಳ್ಳಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ (Rameshwaram Cafe Blast) ಸಂಬಂಧ ನಗರದಲ್ಲಿ ಇಬ್ಬರು ಆರೋಪಿಗಳನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮಂಗಳವಾರ ವಿಚಾರಣೆಗೆ ಗುರಿಪಡಿಸಿದ ನಂತರ ಇಬ್ಬರು ಸಹೋದರರನ್ನು ವಶಕ್ಕೆ ಪಡೆಯಲಾಗಿದೆ.

ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶೋಯಬ್ ಮಿರ್ಜಾ ಹಾಗೂ ಈತನ ಸಹೋದರ ಅಜೀಜ್ ಅಹಮದ್ ಮಿರ್ಜಾ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಇಬ್ಬರು ಆರೋಪಿಗಳನ್ನು ಎನ್‌ಐಎ ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ | Self Harming: ಹುಬ್ಬಳ್ಳಿಯಲ್ಲಿ ನೇಣಿಗೆ ಶರಣಾದ ಜೋಡಿ; ಅನೈತಿಕ ಸಂಬಂಧ ಶಂಕೆ

ಹುಬ್ಬಳ್ಳಿ ಸೇರಿ 4 ರಾಜ್ಯಗಳ ಹಲವೆಡೆ ಎನ್‌ಐಎ ದಾಳಿ; 11 ಶಂಕಿತ ಉಗ್ರರು ವಶಕ್ಕೆ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ (Rameshwaram Cafe Blast) ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನಿಖೆ ಚುರುಕುಗೊಳಿಸಿದ್ದು, ಮಂಗಳವಾರ ಕರ್ನಾಟಕ ಸೇರಿ 4 ರಾಜ್ಯಗಳ 11 ಸ್ಥಳಗಳಲ್ಲಿ ದಾಳಿ ನಡೆಸಿ, 11 ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದೆ.

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಭಾಗಿಯಾಗಿರುವ ಇತರ ಸಂಚುಕೋರರನ್ನು ಪತ್ತೆ ಮಾಡಲು ರಾಷ್ಟ್ರೀಯ ತನಿಖಾ ದಳವು ನಾಲ್ಕು ರಾಜ್ಯಗಳ 11 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದೆ.

ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದ 11 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಇಂದು ಪತ್ತೆಯಾದ 11 ಮಂದಿ ಶಂಕಿತರಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿ ಜಿಲ್ಲೆಗಳಲ್ಲಿ 2012ರ ಲಷ್ಕರ್–ಎ–ತಯ್ಬಾ (ಎಲ್‌ಇಟಿ) ಪಿತೂರಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳೂ ಸೇರಿದ್ದಾರೆ. ದಾಳಿ ವೇಳೆ ಡಿಜಿಟಲ್ ಪರಿಕರಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾಲದ ಬಾಧೆಗೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ.

ಮಂಡ್ಯ: ಸಾಲ ಬಾಧೆಗೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಳಗೆರೆಹಳ್ಳಿಯಲ್ಲಿ ನಡೆದಿದೆ. ಗ್ರಾಮದ ರೂಪೇಶ್(45) ಆತ್ಮಹತ್ಯೆ ಮಾಡಿಕೊಂಡ ರೈತ. ಒಂದೂವರೆ ಎಕರೆ ಜಮೀನಿನಲ್ಲಿ ರೈತ ಭತ್ತ, ರಾಗಿ, ರೇಷ್ಮೆ ಬೆಳೆ ಬೆಳೆಯುತ್ತಿದ್ದರು. ವಿವಿಧ ಬ್ಯಾಂಕುಗಳು ಹಾಗೂ ಚಿನ್ನಾಭರಣದ ಮೇಲೆ ಒಟ್ಟು 5ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ. ಬೆಳೆಗೆ ನೀರಿಲ್ಲದೆ ನಷ್ಟಕ್ಕೀಡಾಗಿ ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Exit mobile version