Site icon Vistara News

Crime Video : ಪ್ರೀತಿಸಿದ ಎನ್ನುವ ಒಂದೇ ಕಾರಣಕ್ಕೆ ಯುವಕನ ಚುಚ್ಚಿ ಕೊಂದ ಯುವತಿಯ ಕುಟುಂಬ

delhi crime

ನವದೆಹಲಿ: ಮನೆಯ ಮಗಳನ್ನು ಪ್ರೀತಿಸಿದ ಎನ್ನುವ ಒಂದೇ ಕಾರಣಕ್ಕೆ 25 ವರ್ಷದ ಯುವಕನೊಬ್ಬನನ್ನು ಯುವತಿಯ ತಂದೆ ಮತ್ತು ಸಹೋದರರು ಚಾಕುವಿನಿಂದ ಬರ್ಬರವಾಗಿ ಚುಚ್ಚಿ ಹತ್ಯೆ ಮಾಡಿದ್ದಾರೆ. ನವದೆಹಲಿಯಲ್ಲಿ (Crime News) ಈ ಘಟನೆ ನಡೆದಿದೆ.

ಸಲ್ಮಾನ್‌ ಹೆಸರಿನ 25 ವರ್ಷದ ಯುವಕ ಸೋಮವಾರ ದೆಹಲಿಯ ಜಾಫ್ರಾಬಾದ್‌ ಪ್ರದೇಶದ ಚೌಹಾನ್‌ ಬಂಗೇರ್‌ನ ಕಲ್ಯಾಣ ಚಿತ್ರಮಂದಿರದ ಬಳಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದ. ಆ ವೇಳೆ ಆತ ಪ್ರೀತಿಸುತ್ತಿದ್ದ ಯುವತಿಯ ತಂದೆಯಾದ ಮನ್ಜೂರ್‌ ಮತ್ತು ಆತನ ಇಬ್ಬರು ಮಕ್ಕಳು ಸಲ್ಮಾನ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಕು ತಂದಿದ್ದ ಅವರು ಸಲ್ಮಾನ್‌ನ ಕುತ್ತಿಗೆ ಮತ್ತು ಎದೆಯ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾರೆ. ಅದರಿಂದಾಗಿ ಸಲ್ಮಾನ್‌ ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ: Viral Video: ನಾಯಿ ಬೊಗಳುವುದು ಸಾಮಾನ್ಯ, ಹಾಡುವುದನ್ನು ಕೇಳಿದ್ದೀರಾ?
ಈ ಎಲ್ಲ ದೃಶ್ಯಗಳು ಅಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕೊಲೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಮನ್ಜೂರ್‌ ಆತನ ಇಬ್ಬರು ಗಂಡು ಮಕ್ಕಳಾದ ಮೊಹ್ಸಿನ್‌ ಮತ್ತು ಅಪ್ರಾಪ್ತನ ಜತೆ ಸೇರಿಕೊಂಡು ಈ ಕೊಲೆ ನಡೆಸಿದ್ದಾನೆ. ಪ್ರೀತಿಸಿದ್ದೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಮನ್ಜೂರ್‌ ತನ್ನ ಮಕ್ಕಳೊಂದಿಗೆ ಕಣ್ತಪ್ಪಿಸಿಕೊಂಡಿದ್ದಾನೆ. ಆತ ಸಿಕ್ಕಿದಾಕ್ಷಣ ವಶಕ್ಕೆ ಪಡೆದು, ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಇದೇ ರೀತಿಯಲ್ಲಿ ಉತ್ತರ ಪ್ರದೇಶದಲ್ಲಿ ಜೂನ್‌ 29ರಂದು ಪ್ರೇಮಿಯೊಬ್ಬನನ್ನು ಯುವತಿಯ ಕುಟುಂಬ ಕೊಲೆ ಮಾಡಿದ್ದ ಘಟನೆ ನಡೆದಿತ್ತು. ಗಜಿಯಾಬಾದ್‌ನಲ್ಲಿ ಪರ್ವೇಜ್‌ ಹೆಸರಿನ ಯುವಕ ತಾನು ಪ್ರೀತಿಸುತ್ತಿದ್ದ ಯುವತಿ ಮನೆಗೆ ತೆರಳಿದ್ದು, ಆ ಸಮಯಕ್ಕೆ ಮನೆಗೆ ಬಂದ ಯುವತಿಯ ಕುಟುಂಬ ಅವರಿಬ್ಬರನ್ನು ಒಟ್ಟಿಗೆ ನೋಡಿ, ಸಿಟ್ಟಿಗೆದ್ದು ಪರ್ವೇಜ್‌ನನ್ನು ಕೊಲೆ ಮಾಡಿತ್ತು. ಈ ವಿಚಾರ ಕೂಡ ದೊಡ್ಡ ಸುದ್ದಿಯಾಗಿತ್ತು.

Exit mobile version