Site icon Vistara News

ಇಲಿಗಳಿಂದ ಪತ್ತೆಯಾಯ್ತು ಕಳೆದುಹೋದ ₹ 5 ಲಕ್ಷ ಮೌಲ್ಯದ ಚಿನ್ನ

ಮುಂಬೈ: ಮುಂಬೈನ ಗೋಕುಲಧಾಮ್ ಕಾಲೋನಿ ಬಳಿಯ ಗಟಾರದಲ್ಲಿ ಇಲಿಗಳಿಂದ ₹ 5 ಲಕ್ಷ ಮೌಲ್ಯದ ಚಿನ್ನ (10 ತೊಲ) ವಶಪಡಿಸಿಕೊಳ್ಳಲಾಗಿದೆ!

ಇದು ನಿಜ. ಕೆಲವು ಇಲಿಗಳು ಕಸದ ರಾಶಿಯಿಂದ ಚಿನ್ನದ ಚೀಲವನ್ನು ಗಟಾರಕ್ಕೆ ತೆಗೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಜಿ ಘಾರ್ಗೆ ಗುರುವಾರ ತಿಳಿಸಿದ್ದಾರೆ.

ಗೋರೆಗಾಂವ್‌ನ ಗೋಕುಲಧಾಮ ಕಾಲೋನಿಯಲ್ಲಿ ಮನೆಕೆಲಸ ಮಾಡುತ್ತಿದ್ದ 45 ವರ್ಷದ ಸುಂದರಿ ಪ್ಲಾನಿಬೆಲೆ ಎಂಬವರು ತಮ್ಮ ಮಗಳ ಮದುವೆಗೆ ಸಾಲ ಮಾಡಿದ್ಗೆಂದರು. ಮದುವೆಯ ನಂತರ ಸಾಲ ತೀರಿಸಲು ತಮ್ಮ ಹತ್ತಿರವಿದ್ದ 10 ತೊಲ ಚಿನ್ನಾಭರಣವನ್ನು ಅಡ ಇಡಲು ಬ್ಯಾಂಕ್‌ ಹೊರಟಿದ್ದರು. ಮಾರ್ಗಮಧ್ಯದಲ್ಲಿ ವಡಾಪಾವ್‌ ಖರೀದಿಸಿ, ಅದರಲ್ಲಿ ಸ್ವಲ್ಪ ತಿಂದು ಉಳಿದ ವಡಾಪಾವ್‌ ದಾರಿಯಲ್ಲಿ ಸಿಕ್ಕ ಇಬ್ಬರು ನಿರ್ಗತಿಕ ಮಕ್ಕಳಿಗೆ ಕೊಟ್ಟು ಮುಂದುವರಿದರು. ಆದರೆ ಪ್ರಮಾದದಿಂದ ವಡಾಪಾವ್ ಚೀಲದ ಬದಲಾಗಿ ತ‌ಮ್ಮ ಆಭರಣಗಳಿದ್ದ ಚೀಲ ಕೊಟ್ಟುಬಿಟ್ಟಿದ್ದರು. ಬ್ಯಾಂಕ್ ತಲುಪಿದಾಗ ಅದರ ಅರಿವು ಆಕೆಗೆ ಆಯಿತು. ಆತಂಕಕ್ಕೆ ಒಳಗಾದ ಸುಂದರಿ ಆ ಮಕ್ಕಳನ್ನು ಅದೇ ಪ್ರದೇಶದಲ್ಲಿ ಹುಡುಕಲು ಪ್ರಯತ್ನಿಸಿದರೂ ಅವರನ್ನು ಹುಡುಕಲಾಗಲಿಲ್ಲ. ನಂತರ ಆಕೆ ಪೊಲೀಸರನ್ನು ಸಂಪರ್ಕಿಸಿ ತಮ್ಮ ಆಭರಣಗಳನ್ನು ಹುಡುಕಲು ಅವರ ಸಹಾಯವನ್ನು ಕೋರಿದ್ದರು.

ಪೊಲೀಸರು ಮಕ್ಕಳು ಮತ್ತು ಅವರ ತಾಯಿ ಇರುವ ಜಾಗವನ್ನು ಪತ್ತೆಹಚ್ಚಿ ಅವರನ್ನು ಭೇಟಿಯಾಗಿ ಆಭರಣಗಳ ಬಗ್ಗೆ ವಿಚಾರಿಸಿದಾಗ ಮಕ್ಕಳು “ನಾವು ವಡಾಪಾವ್ ತಿಂದಿಲ್ಲ, ಅವು ತುಂಬಾ ಒಣಗಿದ್ದರಿಂದ ಚೀಲವನ್ನು ಕಸದ ತೊಟ್ಟಿಗೆ ಎಸೆದೆವು” ಎಂದು ಹೇಳಿದ್ದಾರೆ. ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಆಭರಣಗಳಿದ್ದ ಚೀಲವನ್ನು ಕೆಲವು ಇಲಿಗಳು ಕಸದ ರಾಶಿಯಿಂದ ಗಟಾರಕ್ಕೆ ತೆಗೆದುಕೊಂಡು ಹೋಗುವುದನ್ನು ಕಂಡಿದ್ದಾರೆ. ನಂತರ ಚಿನ್ನಾಭರಣಗಳನ್ನು ಕಲೆಹಾಕಿ ದೂರುದಾರರಿಗೆ ತಲುಪಿಸಿದ್ದಾರೆ.

ಇದನ್ನೂ ಓದಿ: ಕಳ್ಳತನ ಮಾಡಲು ಬಂದಿದ್ದವ ಮಹಡಿಯಿಂದ ಬಿದ್ದು ಸಾವು

Exit mobile version