ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಮತ್ತು ಟೀಮ್ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ (BJP ticket fraud) ಕೊಡಿಸುವುದಾಗಿ ಹೇಳಿ ಐದು ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಸಿಸಿಬಿ ಪೊಲೀಸರು (CCB Police) ಈಗಾಗಲೇ 3.8 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ನಗದನ್ನು ರಿಕವರಿ ಮಾಡಿಕೊಂಡಿದ್ದಾರೆ. ಆದರೆ, ಇದೀಗ ದೂರುದಾರ ಗೋವಿಂದ ಬಾಬು ಪೂಜಾರಿಗೂ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಚೈತ್ರಾ ಮತ್ತು ತಂಡಕ್ಕೆ ಕೊಟ್ಟ ಈ ಹಣದ ಮೂಲ ಏನು ಎಂದು ಸಿಸಿಬಿ ಪೊಲೀಸರು ಪ್ರಶ್ನೆಗಳ ಸುರಿಮಳೆಗೈಯಲು ರೆಡಿಯಾಗಿದ್ದಾರೆ.
ಚೈತ್ರಾ ಕಂದಾಪುರ ಹಾಗೂ ಟೀಮ್ ನಿಂದ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಡೆದ ಮಾತುಕತೆಯನ್ವಯ ಗೋವಿಂದ ಪೂಜಾರಿ 5 ಕೋಟಿ ರೂಪಾಯಿ ಕೊಟ್ಟಿದ್ದರು. ಕೊನೆಗೆ ವಿಧಾನಸಭಾ ಟಿಕೆಟ್ ಸಿಗದೇ ಇದ್ದಿದ್ದಕ್ಕೆ ಹಣ ವಾಪಸ್ ಕೇಳಿದಾಗ ಸೆಟ್ಲ್‌ಮೆಂಟ್ ಆಗದ ಕಾರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈಗ ಪ್ರಕರಣದ ಎ1 ಆರೋಪಿ ಚೈತ್ರಾ ಕುಂದಾಪುರ ಬಂಧನವಾಗಿದೆ. ಅಲ್ಲದೆ, ಹಣದ ರಿಕವರಿ ಕಾರ್ಯವೂ ಆಗುತ್ತಿದೆ. ಈ ನಡುವೆ ಇವರಿಗೆ ಕೊಡಲಾಗಿದ್ದ 5 ಕೋಟಿ ರೂಪಾಯಿ ಹಣ ಎಲ್ಲಿಂದ ಬಂತು? ಹೇಗೆ ಬಂತು? ಇದರ ಮೂಲ ಏನು ಎಂಬ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಹೀಗಾಗಿ ದೂರುದಾರ ಗೋವಿಂದ ಬಾಬು ಪೂಜಾರಿಗೂ ಕಾನೂನು ಸಂಕಷ್ಟ ಸಾಧ್ಯತೆ ಇದೆ.
5 ಕೋಟಿ ರೂಪಾಯಿ ಮೂಲವನ್ನು ಪ್ರಶ್ನೆ ಮಾಡುವ ಸಂಬಂಧ ಸೋಮವಾರ (ಸೆಪ್ಟೆಂಬರ್ 18) ಗೋವಿಂದ ಪೂಜಾರಿಯನ್ನು ವಿಚಾರಣೆಗೆ ಹಾಜರಾಗಲು ಸಿಸಿಬಿ ಸೂಚನೆ ನೀಡಿದೆ. ತಾನು ಕೊಟ್ಟಿದ್ದೇನೆ ಎಂದಿರುವ 5 ಕೋಟಿ ರೂಪಾಯಿ ಹಣದ ಮೂಲ ಏನು ಎಂಬುದನ್ನು ಈಗ ಸಿಸಿಬಿಗೆ ಗೋವಿಂದ್ ತಿಳಿಸಬೇಕು.
ಸಂಕಷ್ಟ ಏಕೆ?
ಸೋಮವಾರ ಸಿಸಿಬಿ ಮುಂದೆ ಹಾಜರಾಗುವ ಗೋವಿಂದ್ ತಾವು ಈ ಹಿಂದೆ ನೀಡಿದ್ದ ಐದು ಕೋಟಿ ರೂಪಾಯಿಯ ಹಣದ ಮೂಲದ ಲೆಕ್ಕವನ್ನು ಒಪ್ಪಿಸಬೇಕು. ಅದು ಸಮರ್ಪಕವಾಗಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ, ಹಣದ ಮೂಲವನ್ನು ತಿಳಿಸಲು ಗೋವಿಂದ ಬಾಬು ವಿಫಲವಾದರೆ ಕಾನೂನು ಸಂಕಷ್ಟ ಎದುರಾಗಲಿದೆ. ಅವರು ಬ್ಯಾಂಕಿಂಗ್ ವರ್ಗಾವಣೆ ಮಾಡಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಅವರು ಎಲ್ಲ ಹಣವನ್ನೂ ನಗದು ಮೂಲಕವೇ ನೀಡಿದ್ದಾರೆ. ಇದು ಈಗ ಹಲವು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: CM Siddaramaiah : ಯತೀಂದ್ರರಿಂದ ವರ್ಗಾವಣೆ ಲೂಟಿ; ಕುರುಡು ಮಲೆಯಲ್ಲಿ ಸಿದ್ದರಾಮಯ್ಯ ಪ್ರಮಾಣಕ್ಕೆ ಈಶ್ವರಪ್ಪ ಸವಾಲು
ಏನು ಸಾಕ್ಷಿ ನೀಡಬೇಕು?
ಗೋವಿಂದ್ ಅವರು ಹಣವನ್ನು ವಿಥ್ ಡ್ರಾ ಮಾಡಿರುವುದಕ್ಕೆ ಸಾಕ್ಷಿಯನ್ನು ಸಿಸಿಬಿ ಸುಪರ್ದಿಗೆ ಒಪ್ಪಿಸಬೇಕು. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಬೇಕು. ಇದನ್ನು ಮಾಡಲು ಅವರು ವಿಫಲವಾದರೆ ಇ.ಡಿ. ತನಿಖೆಗೆ ಪೊಲೀಸರು ಶಿಫಾರಸು ಮಾಡಬಹುದಾಗಿದೆ. ಕೊನೆಗೆ ಜಾರಿ ನಿರ್ದೇಶನಾಲಯದ ತನಿಖಾ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.